ನವ ದೆಹಲಿ: ಕರ್ವಾ ಚೌಥ್ (Karva Chauth) ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಝಪ್ಪರ್‌ನಗರದಲ್ಲಿ ಹಿಂದೂ ಮಹಾಸಭಾ (ವಿಎಚ್‌ಪಿ), ಅನ್ಯ ಕೋಮಿಗೆ ಸೇರಿದ ಯಾವುದೇ ಮೆಹಂದಿ ಕಲಾವಿದರು ಹಿಂದೂ ಹೆಣ್ಣುಮಕ್ಕಳಿಗೆ ಮದರಂಗಿ ಹಾಕಿದರೆ, ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಈ ಕುರಿತು ಮಾತನಾಡಿರುವ ಉತ್ತರ ಪ್ರದೇಶದ ಖಟೌಳಿ ಬಿಜೆಪಿಯ ಶಾಸಕ ವಿಕ್ರಮ್ ಸೈನಿ ಅವರು, ಮುಸ್ಲಿಮ್ ಯುವಕರು ಮೆಹಂದಿ ಅಂಗಡಿಯನ್ನು ದುರುದ್ದೇಶವಿಟ್ಟುಕೊಂಡು ತೆರೆಯುತ್ತಾರೆ. ಇದರ ಹಿಂದೆ ಲವ್ ಜಿಹಾದ್ ಉದ್ದೇಶವಿರುತ್ತದೆ ಎಂದು ಹೇಳಿದ್ದಾರೆ.
ಮೆಹಂದಿ ಕೆಲಸದ ನೆಪದಲ್ಲಿ ಲವ್ ಜಿಹಾದ್ ನಡೆಸುವ ಉದ್ದೇಶವನ್ನು ಮುಸ್ಲಿಮ್ ಯುವಕರು ಹೊಂದಿರುತ್ತಾರೆ. ಈ ಸಂಬಂಧ ಸಾಕಷ್ಟು ಪ್ರಕರಣಗಳು ನಡೆದಿವೆ. ಹಿಂದೂ ಹೆಣ್ಣುಮಕ್ಕಳಲ್ಲಿ ನಾನು ವಿನಂತಿಸಿಕೊಳ್ಳುತ್ತೇನೆ, ಮನೆಯಲ್ಲಿ ಮದರಂಗಿ ಹಾಕಿಸಿಕೊಳ್ಳಿ. ಇಲ್ಲವೇ ಹಿಂದೂ ಸಮುದಾಯದವರೇ ಹೊಂದಿರುವ ಬ್ಯೂಟಿ ಪಾರ್ಲರ್ ಅಥವಾ ಅಂಗಡಿಗಳಲ್ಲಿ ಮದರಂಗಿ ಹಾಕಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಮುಝಪ್ಪರ್‌ನಗರದಲ್ಲಿ ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) 13 ಮೆಹಂದಿ ಅಂಗಡಿಗಳನ್ನು ತೆರೆದಿದೆ. ಯಾವುದೇ ಹಿಂದೂ ಮಹಿಳೆಯರು ಮುಸ್ಲಿಮ್ ಪುರುಷ ಕಲಾವಿದರ ಬಳಿ ಮೆಹಂದಿಗಾಗಿ ಹೋಗದಂತೆ ನೋಡಿಕೊಳ್ಳಲು ತನ್ನ ಕಾರ್ಯಕರ್ತರನ್ನು ಕಾವಲಿಗೆ ನಿಯೋಜಿಸಿದೆ. ವಿಎಚ್‌ಪಿ ಕಾರ್ಯಕರ್ತರು ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸುವ ಮೂಲಕ ಮೆಹಂದಿ ಕಲಾವಿದರು ಮುಸ್ಲಿಮರೇ ಅಥವಾ ಹಿಂದೂಗಳೇ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.
ಉತ್ತರ ಭಾರತದಲ್ಲಿ ಕರ್ವಾ ಚೌಥ ಅತ್ಯಂತ ಜನಪ್ರಿಯ ಹಬ್ಬವಾಗಿದೆ. ವಿವಾಹಿತ ಮಹಿಳೆಯರು ತಮ್ಮ ಪತಿ ಆರೋಗ್ಯ ಹಾಗೂ ಆಯುಷ್ಯ ಹೆಚ್ಚಾಗಲಿ ಎಂದು ಪ್ರಾರ್ಥಿಸುವುದಕ್ಕಾಗಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ವ್ರತವನ್ನುಆಚರಿಸುತ್ತಾರೆ. ಕರ್ವಾ ಚೌಥ ಆಚರಣೆಯ ಭಾಗವಾಗಿ ವಿವಾಹಿತ ಮಹಿಳೆಯರು ತಮ್ಮ ಕೈಗಳಿಗೆ ಆಕರ್ಷಕ ವಿನ್ಯಾಸದ ಮೆಹಂದಿಯನ್ನು ಹಚ್ಚಿಕೊಳ್ಳುತ್ತಾರೆ.
ಇದನ್ನೂ ಓದಿ | ತ್ರಿಶೂಲ ದೀಕ್ಷೆ ಕುರಿತು ಮೌನ ಮುರಿದ ಶಾಲಾ ಆಡಳಿತ ಮಂಡಳಿ