ನವ ದೆಹಲಿ: ಎನ್‌ಡಿಎ ಒಕ್ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಜಗದೀಪ್ ಧನಕರ್ ಅವರು ಇಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಸಾರಿಗೆ ಸಚಿವ ನಿತಿನ್ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಜೆಡಿ (ಯು) ಮುಖ್ಯಸ್ಥ ಲಾಲನ್ ಸಿಂಗ್ ಸೇರಿ ಪ್ರಮುಖರು ಇದ್ದರು. ಆಗಸ್ಟ್ 6ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಜುಲೈ 19 ಕೊನೇ ದಿನವಾಗಿದೆ. ಇಂದು ಒಂದೆಡೆ ರಾಷ್ಟ್ರಪತಿ ಚುನಾವಣೆ ಮತದಾನ ನಡೆಯುತ್ತಿದ್ದು, ಇತ್ತ ಉಪರಾಷ್ಟ್ರಪತಿ ಅಭ್ಯರ್ಥಿ ಜಗದೀಪ್ ಧನಕರ್, ಸಂಸತ್ತಿನ ಲೈಬ್ರರಿ ಕಟ್ಟಡಕ್ಕೆ ಹೋಗಿ ನಾಮಪತ್ರ ಸಲ್ಲಿಸಿದ್ದಾರೆ.
ಇಂದು ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಜಗದೀಪ್ ಧನಕರ್, ʼದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡಲು ಮತ್ತು ವರ್ಧಿಸು ನಾನು ಸದಾ ಶ್ರಮಿಸುತ್ತೇನೆ. ನಾನು ಉಪರಾಷ್ಟ್ರಪತಿ ಹುದ್ದೆಯಂಥ ಮಹತ್ವದ ಸ್ಥಾನಕ್ಕೆ ಅಭ್ಯರ್ಥಿಯಾಗಬಹುದು ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಒಂದು ರೈತ ಕುಟುಂಬದಿಂದ ಬಂದ ನನಗೆ ಇಂಥದ್ದೊಂದು ಅವಕಾಶ ಕೊಟ್ಟಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆʼ ಎಂದಿದ್ದಾರೆ.
ಜಗದೀಪ್ ಧನಕರ್ ಅವರು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದರು. ಆದರೆ ಇವರಿಗೂ-ರಾಜ್ಯಸರ್ಕಾರಕ್ಕೂ ಸದಾ ಜಟಾಪಟಿ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಡಳಿತ ಕ್ರಮದ ಕಟು ವಿಮರ್ಶಕರು ಇವರಾಗಿದ್ದರು. ಹಾಗಾಗಿ ತೃಣಮೂಲ ಕಾಂಗ್ರೆಸ್ ಕೂಡ ಜಗದೀಪ್ ಧನಕರ್ ಅವರನ್ನು ಬಿಜೆಪಿ ಏಜೆಂಟ್ ಎಂದೇ ಕರೆಯುತ್ತಿತ್ತು.
ವೃತ್ತಿಯಲ್ಲಿ ವಕೀಲರಾಗಿರುವ ಜಗದೀಪ್ ಧನಕರ್ ರಾಜಕೀಯ ಪ್ರವೇಶ ಮಾಡಿದ್ದು 1989ರಲ್ಲಿ. ಇವರು ಜನತಾ ಪರಿವಾರದವರು. ಮಾಜಿ ಪ್ರಧಾನಿ ಚಂದ್ರಶೇಖರ್ ಸಚಿವ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ೭೧ ವರ್ಷದ ಜಗದೀಪ್ ಧನಕರ್, ರಾಜಸ್ಥಾನದ ಜುನ್‌ಜುನು ಲೋಕಸಭಾ ಕ್ಷೇತ್ರದಿಂದ ಆಗ ಆಯ್ಕೆಯಾಗಿದ್ದರು. ೧೯೯೩ರಿಂದ ೯೮ರ ವರೆಗೆ ಕಿಶಾನ್‌ಘರ್ ಕ್ಷೇತ್ರದ ಶಾಸಕರಾಗಿಯೂ ಕೆಲಸ ಮಾಡಿದ್ದರು.
ಇದನ್ನೂ ಓದಿ: Vice President Election 2022 | ಪಶ್ಚಿಮ ಬಂಗಾಲದ ರಾಜ್ಯಪಾಲ ಜಗದೀಪ್ ಧನಕರ್ ಬಿಜೆಪಿ ಅಭ್ಯರ್ಥಿ