ನವ ದೆಹಲಿ: ಇಂದು ಸಂಸತ್ತಿನಲ್ಲಿ ಉಪರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ. ಮತದಾನ ಪ್ರಾರಂಭವಾಗಿದ್ದು, ಸಂಜೆ 5ಗಂಟೆವರೆಗೆ ನಡೆಯಲಿದೆ. ಮತದಾನ ಪ್ರಾರಂಭವಾಗುತ್ತಿದ್ದಂತೆ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಮತ ಚಲಾಯಿಸಿದರು. ಎನ್ಡಿಎ ಒಕ್ಕೂಟದಿಂದ ಜಗದೀಪ್ ಧನಕರ್ ಮತ್ತು ಪ್ರತಿಪಕ್ಷಗಳಿಂದ ಮಾರ್ಗರೆಟ್ ಆಳ್ವಾ ಕಣದಲ್ಲಿದ್ದಾರೆ. ಇಂದು ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಒಟ್ಟು 788 ಸಂಸದರು ಮತದಾನ ಮಾಡಬೇಕಿತ್ತು. ಆದರೆ ರಾಜ್ಯಸಭೆಯಲ್ಲಿ ಎಂಟು ಸದಸ್ಯ ಹುದ್ದೆಗಳು ಖಾಲಿ ಇವೆ. ಹಾಗೇ, ತೃಣಮೂಲ ಕಾಂಗ್ರೆಸ್ ಮತದಾನದಿಂದ ದೂರ ಉಳಿಯಲು ನಿರ್ಧರಿಸಿದ್ದರಿಂದ ಆ ಪಕ್ಷದ 39 ಸಂಸದರ ಮತ ನಷ್ಟವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಮತದಾನ ಮಾಡಿದ ಬಳಿಕ ಕೇಂದ್ರ ಸಚಿವರಾದ, ಅಮಿತ್ ಶಾ, ಜ್ಯೋತಿರಾದಿತ್ಯ ಸಿಂಧಿಯಾ, ರಾಜೀವ್ ಚಂದ್ರಶೇಖರ್, ಅಶ್ವಿನಿ ವೈಷ್ಣವ್, ಜಿತೇಂದ್ರ ಸಿಂಗ್, ಬಿಜೆಪಿಯ ಮುಖ್ಯ ಸಚೇತಕ ರಾಕೇಶ್ ಸಿಂಗ್, ಟಿಆರ್ಎಸ್ ಮತ್ತು ವೈಎಸ್ಆರ್ಸಿಪಿಯ ಮತದಾರರು ಮತದಾನ ಮಾಡಿದ್ದಾರೆ. ಹಾಗೇ, ಕಾಂಗ್ರೆಸ್ ಸಂಸದ, ಮಾಜಿ ಪ್ರಧಾನಂತ್ರಿ ಡಾ. ಮನಮೋಹನ್ ಸಿಂಗ್ ಅವರು ಇಂದೂ ಕೂಡ ವೀಲ್ ಚೇರ್ನಲ್ಲಿ ಬಂದು ತಮ್ಮ ಮತಚಲಾಯಿಸಿದರು.
ಮತದಾನದಿಂದ ದೂರ ಉಳಿದ ಟಿಎಂಸಿ
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತನಾದ ಮಾಡುವುದಿಲ್ಲ ಎಂದು ಈ ಹಿಂದೆಯೇ ಹೇಳಿದ್ದ ಟಿಎಂಸಿ ಪಕ್ಷ ಹಾಗೇ ನಡೆದುಕೊಂಡಿದೆ. ಇತ್ತೀಚೆಗೆ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದ ಟಿಎಂಸಿ, ‘ಪ್ರತಿಪಕ್ಷಗಳೆಲ್ಲ ಒಟ್ಟಾಗಿ ಮಾರ್ಗರೆಟ್ ಆಳ್ವಾರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಆಯ್ಕೆ ಪ್ರಕ್ರಿಯೆ ಸರಿಯಾಗಿ ಆಗಿಲ್ಲ. ಆಳ್ವಾರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆರಿಸುವಾಗ ತೃಣಮೂಲ ಕಾಂಗ್ರೆಸ್ಗೆ ಮಹತ್ವ ನೀಡಿಲ್ಲ ಎಂದು ಹೇಳಿತ್ತು. ಅಷ್ಟಾದ ಮೇಲೆ ಮಾರ್ಗರೆಟ್ ಆಳ್ವಾ ಪ್ರತಿಕ್ರಿಯೆ ನೀಡಿ, ‘ಇದು ಸ್ವಯಂ ಪ್ರತಿಷ್ಠೆ ಪ್ರದರ್ಶನ ಮಾಡುವ ಸಮಯ ಅಲ್ಲ, ಮತದಾನ ಮಾಡಿ’ ಎಂದು ಹೇಳಿದ್ದರು.
ಇದನ್ನೂ ಓದಿ: ಇಂದು ಉಪರಾಷ್ಟ್ರಪತಿ ಚುನಾವಣೆ, ಸಂಖ್ಯಾಬಲ ಧನಕರ್ ಕಡೆಗೆ