ನವ ದೆಹಲಿ: ಉಪರಾಷ್ಟ್ರಪತಿ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಸಂಜೆ ಆರು ಗಂಟೆಯಿಂದ ಮತ ಎಣಿಕೆ ಪ್ರಾರಂಭಗೊಂಡಿದೆ. ಲೋಕಸಭೆ ಮತ್ತು ರಾಜ್ಯಸಭೆಯಿಂದ ಒಟ್ಟು 780 ಸಂಸದರು ಇಂದು ಮತಹಾಕಬೇಕಿತ್ತು. ಆದರೆ 725 ಸಂಸದರು ಮಾತ್ರ ಮತ ಹಾಕಿದ್ದಾರೆ. ತೃಣಮೂಲ ಕಾಂಗ್ರೆಸ್ನ 39 ಸಂಸದರಲ್ಲಿ, 37ಸಂಸದರು ಮತದಾನದ ದೂರವೇ ಉಳಿದಿದ್ದಾರೆ. ಆದರೆ ಟಿಎಂಸಿ ಸಂಸದರಾದ ಸಿಸಿರ್ ಅಧಿಕಾರಿ ಮತ್ತು ದಿಬ್ಯೇಂದು ಅಧಿಕಾರಿ ತಮ್ಮ ಪಕ್ಷದ ನಿರ್ಧಾರದ ಹೊರತಾಗಿಯೂ ಮತಚಲಾವಣೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಬಿಜೆಪಿಯ ಸನ್ನಿ ಡಿಯೋಲ್ ಮತ್ತು ಸಂಜಯ್ ಧೋತ್ರೆ ಅನಾರೋಗ್ಯದಿಂದ ವೋಟಿಂಗ್ನಲ್ಲಿ ಪಾಲ್ಗೊಳ್ಳಲಿಲ್ಲ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಒಕ್ಕೂಟದ ಅಭ್ಯರ್ಥಿ ಜಗದೀಪ್ ಧನಕರ್ ಮತ್ತು ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿ ಮಾರ್ಗರೆಟ್ ಆಳ್ವಾ. ಜಗದೀಪ್ ಧನಕರ್ ಗೆಲುವು ನಿಶ್ಚಿತವಾಗಿದೆ.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇದೆ. ಹೀಗಾಗಿ ಜಗದೀಪ್ ಧನಕರ್ ಗೆಲ್ಲುವ ಭರವಸೆ ನಿಚ್ಛಳವಾಗಿದ್ದರಿಂದ ಬಿಜೆಪಿ ಪಾಳಯದಲ್ಲಿ ಸಂಭ್ರಮ ಈಗಾಗಲೇ ಶುರುವಾಗಿದೆ. ಇನ್ನೆರಡು ಮೂರು ತಾಸುಗಳಲ್ಲಿ ಫಲಿತಾಂಶ ಹೊರಬೀಳಲಿದೆ. ರಿಸಲ್ಟ್ ಘೋಷಣೆಯಾದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಜಗದೀಪ್ ಧನಕರ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಈಗಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಧಿಕಾರ ಅವಧಿ ಆಗಸ್ಟ್ 10ಕ್ಕೆ ಮುಕ್ತಾಯಗೊಳ್ಳಲಿದ್ದು, ನೂತನ ಉಪರಾಷ್ಟ್ರಪತಿ ಆಗಸ್ಟ್ 11ಕ್ಕೆ ಪ್ರಮಾಣ ವಚನ ಸ್ವೀಕಾರ ಮಾಡುವರು.
ಇದನ್ನೂ ಓದಿ: ಇಂದು ಉಪರಾಷ್ಟ್ರಪತಿ ಚುನಾವಣೆ, ಸಂಖ್ಯಾಬಲ ಧನಕರ್ ಕಡೆಗೆ