Site icon Vistara News

Video: ಛತ್ತೀಸ್​ಗಢ ನಕ್ಸಲ್​ ದಾಳಿ ಕ್ಷಣದ ವಿಡಿಯೊ ವೈರಲ್; ವಾಹನದ ಕೆಳಗೆ ಅಡಗಿದ್ದ ಪೊಲೀಸ್​​ ಸಿಬ್ಬಂದಿಯಿಂದ ಚಿತ್ರೀಕರಣ

Video of Chhattisgarh Naxal Attack viral

#image_title

ಛತ್ತೀಸ್​ಗಢ್​​ನ ದಾಂತೇವಾಡಾದಲ್ಲಿ ನಕ್ಸಲರು ಐಇಡಿ ದಾಳಿ ನಡೆಸಿ, 10 ಯೋಧರು ಮೃತಪಟ್ಟ ದಾರುಣ ಘಟನೆಗೆ ಸಂಬಂಧಪಟ್ಟಂತೆ ಒಂದು ವಿಡಿಯೊ ವೈರಲ್ ಆಗಿದೆ. ಸ್ಫೋಟ ನಡೆದ ಕ್ಷಣದ ವಿಡಿಯೊ ಇದಾಗಿದ್ದು, ಅವಘಡದಿಂದ ಪಾರಾದ ಪೊಲೀಸ್​ ಸಿಬ್ಬಂದಿಯೊಬ್ಬ ಚಿತ್ರೀಕರಿಸಿದ್ದು ಎಂದು ವರದಿಯಾಗಿದೆ. ‘ವಾಹನ ಸ್ಫೋಟದಲ್ಲಿ ಛತ್ತೀಸ್​ಗಢ ಪೊಲೀಸ್​ ಮೀಸಲು ಪಡೆಯ 10 ಯೋಧರು ಮೃತಪಟ್ಟ ನಂತರ, ಅಲ್ಲಿಯೇ ಅಡಗಿದ್ದ ಮಾವೋವಾದಿಗಳತ್ತ ಗುಂಡಿನ ದಾಳಿ ನಡೆಸುವ ಸಲುವಾಗಿ ಪೊಲೀಸ್​ ಸಿಬ್ಬಂದಿಯೊಬ್ಬ ತೆವಳುತ್ತ ಒಂದು ಅಡಗು ತಾಣಕ್ಕೆ ಹೋಗುವುದನ್ನು ವಿಡಿಯೊದಲ್ಲಿ ನೋಡಬಹುದು.

ಅರನ್​ಪುರ ಎಂಬಲ್ಲಿ ನಕ್ಸಲರು ನಡೆಸಿದ ಐಇಡಿ ದಾಳಿಯಲ್ಲಿ ವಾಹನ ಸ್ಫೋಟಗೊಂಡ ಬಳಿಕ ಅಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಅರಾನ್​ಪುರದಲ್ಲಿ ಮಾವೋವಾದಿಗಳು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ, ಕಾರ್ಯಾಚರಣೆಗಾಗಿ ಒಟ್ಟು ಏಳು ವಾಹನಗಳಲ್ಲಿ ಛತ್ತೀಸ್​ಗಢ ಜಿಲ್ಲಾ ಮೀಸಲು ಪಡೆ ಸಿಬ್ಬಂದಿ ತೆರಳಿದ್ದರು. ಅಲ್ಲಿ ಕಾರ್ಯಾಚರಣೆ ಮುಗಿಸಿ ವಾಪಸ್ ಬರುತ್ತಿದ್ದಾಗ ಐಇಡಿ ಸ್ಫೋಟವಾಗಿದೆ. ಏಳು ವಾಹನಗಳು ಒಂದರ ಬೆನ್ನಿಗೆ ಒಂದರಂತೆ ಬಂದರೂ, ಒಂದು ವಾಹನ ಐಇಡಿ ಸ್ಫೋಟಕ್ಕೆ ಒಳಗಾಗಿದೆ. ಉಳಿದ ವಾಹನಗಳಲ್ಲಿ ಇದ್ದವರು ಕೂಡಲೇ ಅಲರ್ಟ್​ ಆಗಿ, ತಮ್ಮ ತಮ್ಮ ವಾಹನವನ್ನು ನಿಲ್ಲಿಸಿ, ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಗೆ ಸಿದ್ಧರಾದರು. ಹೀಗೆ ನಿಲ್ಲಿಸಲಾಗಿದ್ದ ವಾಹನವೊಂದರ ಕೆಳಗೆ ರಕ್ಷಣೆಗಾಗಿ ಅಡಗಿಕೊಂಡಿದ್ದ ಪೊಲೀಸ್​ವೊಬ್ಬರು ವಿಡಿಯೊ ಚಿತ್ರೀಕರಣ ಮಾಡಿದ್ದಾರೆ. ‘ಉಡ್​​ ಗಯಾ, ಪೂರಾ ಉಡ್​ ಗಯಾ (‘ಪೂರ್ತಿ ವಾಹನ ಸ್ಫೋಟಗೊಂಡಿದೆ’) ಎಂದು ಹೇಳುವುದನ್ನೂ ಕೇಳಬಹುದು. ವಿಡಿಯೊದ ಕೊನೆಯಲ್ಲಿ ಕೂಡ ಭಾರಿ ಮಟ್ಟದಲ್ಲಿ ಗುಂಡಿನ ಸದ್ದು ಕೇಳುತ್ತದೆ.

ಇದನ್ನೂ ಓದಿ: Naxal Attack: ಛತ್ತೀಸ್​ಗಢ್​ನಲ್ಲಿ ನಕ್ಸಲರಿಂದ ಐಇಡಿ ದಾಳಿ; 11 ಯೋಧರ ದುರ್ಮರಣ

ವಿಡಿಯೊ ಚಿತ್ರೀಕರಣ ಮಾಡಿದ ಪೊಲಿಸ್ ಎನ್​ಡಿಟಿವಿಯೊಟ್ಟಿಗೆ ಮಾತನಾಡಿ ‘ಮಂಗಳವಾರದಿಂದಲೂ ನಾವು ದಾಂತೇವಾಡದ ವಿವಿಧೆಡೆ ನಕ್ಸಲ್​ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದೆವು. ಬುಧವಾರ ಅದನ್ನು ಮುಗಿಸಿ, ವಾಪಸ್ ಬರುತ್ತಿದ್ದಾಗ ಮಧ್ಯಾಹ್ನ 1.30ರ ಹೊತ್ತಿಗೆ ನಕ್ಸಲ್​ ದಾಳಿ ನಡೆಯಿತು. ನಾವು ಒಟ್ಟು ಏಳು ವಾಹನಗಳಲ್ಲಿ ಸಾಗುತ್ತಿದ್ದೆವು. ಮೂರನೇ ವಾಹನ ಐಇಡಿ ಸ್ಫೋಟಕ್ಕೆ ಚೂರಾಗಿದೆ. ಅದರಲ್ಲಿದ್ದ ಒಬ್ಬರೂ ಬದುಕಲಿಲ್ಲ. ಹೀಗೆ ಸ್ಫೋಟಗೊಂಡ ವಾಹನಕ್ಕಿಂತ 100-150ಮೀಟರ್​ ದೂರದಲ್ಲಿ ನಮ್ಮ ವಾಹನ ಇತ್ತು’ ಎಂದು ಹೇಳಿದ್ದಾರೆ. ಅಂದಹಾಗೇ, ಸೇನಾ ವಾಹನಗಳೇ ಇರಲಿ/ಇಂಥ ಮೀಸಲು ಪಡೆಗಳ ವಾಹನಗಳೇ ಇರಲಿ ಒಟ್ಟೊಟ್ಟಿಗೆ ಸಾಗುವುದಿಲ್ಲ. ಪ್ರತ್ಯೇಕತಾವಾದಿಗಳ ದಾಳಿ ಭಯ ಸದಾ ಇದ್ದೇ ಇರುತ್ತದೆ. ಒಟ್ಟೊಟ್ಟಿಗೆ ಸಾಗುತ್ತಿದ್ದಾಗ ದಾಳಿ ನಡೆಸಿದರೆ ಸಾವಿನ ಪ್ರಮಾಣ ಜಾಸ್ತಿಯಿರುತ್ತದೆ, ಅಪಾರ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ನಿರ್ಧಿಷ್ಟ ಅಂತರವನ್ನು ಕಾಯ್ದುಕೊಂಡೇ ಸಂಚಾರ ಮಾಡುತ್ತಿರುತ್ತಾರೆ.

ಹೀಗೆ ಏಳು ವಾಹನಗಳಿಂದ ಒಟ್ಟು 70 ಸೈನಿಕರು ಇದ್ದರು. ಅದರಲ್ಲಿ 10 ಯೋಧರು ಮೃತರಾದರು. ಉಳಿದವರು ತಕ್ಷಣವೇ ಮಾವೋವಾದಿಗಳು ಅಡಗಿರುವ ದಿಕ್ಕಿನೆಡೆಗೆ ಫೈರಿಂಗ್ ಶುರು ಮಾಡಿದರು. ಅದಕ್ಕೆ ಪ್ರತಿಯಾಗಿ ಒಂದೆರಡು ಬಾರಿ ನಕ್ಸಲರು ಗುಂಡು ಹಾರಿಸಿದರೂ, ಬಳಿಕ ಸುಮ್ಮನಾದರು ಎಂದೂ ಪೊಲೀಸ್​ ಸಿಬ್ಬಂದಿ ತಿಳಿಸಿದ್ದಾರೆ. ಘಟನೆಯ ಸಂಪೂರ್ಣವ ವಿವರವನ್ನು ಗೃಹ ಸಚಿವ ಅಮಿತ್ ಶಾ ಪಡೆದುಕೊಂಡಿದ್ದಾರೆ. ನಕ್ಸಲರ ಹತ್ತಿಕ್ಕಲು ನಾವು ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದಾಗಿ ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್​ ಬಾಘೇಲ್​ ತಿಳಿಸಿದ್ದಾರೆ.

Exit mobile version