ಮಣಿಪುರ ಹೊತ್ತಿ ಉರಿಯುತ್ತಿದೆ. ಮೈತೈ (ಮಣಿಪುರಿ) ಸಮುದಾಯವನ್ನು ಪರಿಶಿಷ್ಟ ಪಂಗಡ ವಿಭಾಗಕ್ಕೆ ಸೇರಿಸುವುದನ್ನು ವಿರೋಧಿಸಿ ಅಲ್ಲಿ ಉಗ್ರ ಪ್ರತಿಭಟನೆ (Violence hit Manipur) ನಡೆಯುತ್ತಿದೆ. ಪ್ರತಿಭಟನಾಕಾರರು ಸಿಕ್ಕಸಿಕ್ಕಲ್ಲಿ ಬೆಂಕಿ ಹಚ್ಚುತ್ತಿದ್ದಾರೆ. ಮಣಿಪುರದ ವಿಷ್ಣುಪುರ, ಚುರಾಚಾಂದ್ಪುರ ಜಿಲ್ಲೆಗಳು ಮತ್ತು ಇಂಫಾಲ್ನಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ. ಐದು ಅಥವಾ ಐದಕ್ಕಿಂತ ಹೆಚ್ಚು ಜನ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ.ಚುರಾಚಾಂದ್ಪುರದ ಟೋರ್ಬಂಗ್ ಏರಿಯಾದಲ್ಲಿ, ಮಣಿಪುರದ ಆಲ್ ಟ್ರೈಬಲ್ ಸ್ಟುಡೆಂಟ್ಸ್ ಯೂನಿಯನ್ ಸಂಘಟನೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತು. ಈ ಮೆರವಣಿಗೆ ವೇಳೆ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರ ಭುಗಿಲೆದ್ದಲ್ಲಿ ಎಲ್ಲ ಕಡೆ ಸೇನೆ ಮತ್ತು ಅಸ್ಸಾಂ ರೈಫಲ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮಂಗಳವಾರ ರಾತ್ರಿಯಿಂದಲೂ ಶುರುವಾದ ಪ್ರತಿಭಟನೆ ಬುಧವಾರ ರಾತ್ರಿವರೆಗೂ ಮುಂದುವರಿದಿತ್ತು. ಗುರುವಾರ ಮುಂಜಾನೆಯ ಹೊತ್ತಿಗೆ ಸ್ವಲ್ಪ ನಿಯಂತ್ರಣಕ್ಕೆ ತರಲಾಗಿದೆ. ಪ್ರತಿಭಟನೆ ಹಿಂಸಾಚಾರ ಸ್ವರೂಪ ತಳೆದ ಹಳ್ಳಿಗಳಿಂದ ಜನರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಸೇನೆ ಮತ್ತು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮಾಡುತ್ತಿದ್ದಾರೆ. ಇದುವರೆಗೆ 4000 ಜನರನ್ನು ರಕ್ಷಣೆ ಮಾಡಿದ್ದಾಗಿ ವರದಿಯಾಗಿದೆ. ಈ ಮಧ್ಯೆ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಅವರು ಟ್ವೀಟ್ ಮಾಡಿ, ಪ್ರತಿಭಟನೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಣಿಪುರ ಹೊತ್ತಿ ಉರಿಯುತ್ತಿದೆ ದಯವಿಟ್ಟು ಸಹಾಯ ಮಾಡಿ ಎಂದು ಕೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿ ಕಚೇರಿ, ಅಮಿತ್ ಶಾ, ರಾಜನಾಥ್ ಸಿಂಗ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಅಷ್ಟೇ ಅಲ್ಲ, ಕೆಲವು ಮಾಧ್ಯಮ ಸಂಸ್ಥೆಗಳನ್ನೂ ಟ್ಯಾಗ್ ಮಾಡಿದ್ದಾರೆ.
ಬುಡಕಟ್ಟು ಜನಾಂಗಕ್ಕೆ ಸೇರದ ಮೈತೈಗಳನ್ನು ಎಸ್ಟಿ ವರ್ಗಕ್ಕೆ ಸೇರಿಸಬಾರದು ಎಂದು ಆಗ್ರಹಿಸಿ ಆಲ್ ಟ್ರೈಬಲ್ ಸ್ಟುಡೆಂಟ್ಸ್ ಯೂನಿಯನ್ ಈ ಉಗ್ರ ಪ್ರತಿಭಟನೆ ಹಮ್ಮಿಕೊಂಡಿದೆ. ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅನೇಕ ಪ್ರತಿಭಟನಾಕಾರರು ಟೈಯರ್ಗಳನ್ನು, ಮತ್ತಿತರ ವಸ್ತುಗಳನ್ನು ಸುಟ್ಟು ಹಾಕಿದ್ದಾರೆ. ಅವರನ್ನು ನಿಯಂತ್ರಣ ಮಾಡಲು ಪೊಲೀಸರು, ಭದ್ರತಾ ಸಿಬ್ಬಂದಿ ಅಶ್ರುವಾಯು ಪ್ರಯೋಗ ಮಾಡಿದ್ದಾರೆ.