ಆಂಧ್ರಪ್ರದೇಶದ ಹೊಸ ರಾಜಧಾನಿ ವಿಶಾಖಪಟ್ಟಣಂ (Visakhapatnam) ಆಗಲಿದೆ ಎಂದು ಇಂದು ಮುಖ್ಯಮಂತ್ರಿ ಜಗನ್ ರೆಡ್ಡಿ ಅವರು ಇಂದು ಘೋಷಿಸಿದ್ದಾರೆ. ದೆಹಲಿಯಲ್ಲಿ ನಡೆದ ಅಂತರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟದ ಸಭೆಯಲ್ಲಿ ಈ ಮಹತ್ವದ ವಿಷಯವನ್ನು ಪ್ರಕಟಿಸಿದ್ದಾರೆ. ಹಾಗೇ, ಮುಂದಿನ ತಿಂಗಳು ತಾವು ವಿಶಾಖಪಟ್ಟಣಕ್ಕೆ ಶಿಫ್ಟ್ ಆಗುವುದಾಗಿ ಅಂದರೆ ವಾಸಸ್ಥಾನವನ್ನು ವಿಶಾಖಪಟ್ಟಣಕ್ಕೆ ಸ್ಥಳಾಂತರ ಮಾಡಿಕೊಳ್ಳುವುದಾಗಿ ಜಗನ್ ರೆಡ್ಡಿ ಹೇಳಿದ್ದಾರೆ.
‘ನಾವು ನಮ್ಮ ನೂತನ ರಾಜಧಾನಿಯಾಗಲಿರುವ ವಿಶಾಖಪಟ್ಟಣಂನಲ್ಲಿ ಮಾರ್ಚ್ 3 ಮತ್ತು 4ರಂದು ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು ಆಯೋಜಿಸುತ್ತಿದ್ದೇವೆ. ನೀವೆಲ್ಲ ಅದರಲ್ಲಿ ಪಾಲ್ಗೊಳ್ಳಬೇಕು. ಅಷ್ಟೇ ಅಲ್ಲ, ನಿಮ್ಮ ನಿಮ್ಮ ದೇಶಗಳಲ್ಲಿರುವ ನಿಮ್ಮ ಸಹೋದ್ಯೋಗಿಗಳಿಗೂ ಈ ಬಗ್ಗೆ ಹೇಳಿ. ಅವರೂ ಆಂಧ್ರದಲ್ಲಿ ನಡೆಯುವ ಹೂಡಿಕೆ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಮಾಡಿ. ಆಂಧ್ರಪ್ರದೇಶದಲ್ಲಿ ಉದ್ದಿಮೆ ಎಷ್ಟು ಸುಲಭ ಎಂಬುದು ನಿಮಗೆಲ್ಲ ಆ ಸಮಾವೇಶಕ್ಕೆ ಭೇಟಿ ನೀಡಿದರೆ, ಖಂಡಿತ ಅರ್ಥವಾಗುತ್ತದೆ’ ಎಂದು ಜಗನ್ ರೆಡ್ಡಿಯವರು ರಾಜತಾಂತ್ರಿಕ ಒಕ್ಕೂಟದ ಸಭೆಯಲ್ಲಿ ಪಾಲ್ಗೊಂಡಿದ್ದವರಿಗೆ ತಿಳಿಸಿದರು.
ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ನಗರ ಆಗಿತ್ತು. ಆದರೆ ಆಂಧ್ರಕ್ಕೆ ಅಮರಾವತಿ ಜತೆ ವಿಶಾಖಪಟ್ಟಣಂ ಮತ್ತು ಕರ್ನೂಲ್ ಸೇರಿ ಮೂರು ರಾಜಧಾನಿಗಳನ್ನು ರಚಿಸುವುದು ಜಗನ್ಮೋಹನ್ ರೆಡ್ಡಿ ಇಂಗಿತ. ಅಲ್ಲಿನ ಪ್ರತಿಪಕ್ಷಗಳು ಇದನ್ನು ವಿರೋಧಿಸುತ್ತಿವೆ. ಈ ಬಗ್ಗೆ ಕಾನೂನು ಹೋರಾಟ ಕೂಡ ನಡೆಯುತ್ತಿದೆ. ಇದೆಲ್ಲದರ ಮಧ್ಯೆ ವಿಶಾಖಪಟ್ಟಣಂ ನಗರವನ್ನು ಆಂಧ್ರಪ್ರದೇಶದ ನೂತನ ರಾಜಧಾನಿಯನ್ನಾಗಿ ಜಗನ್ ರೆಡ್ಡಿ ಘೋಷಣೆ ಮಾಡಿದ್ದಾರೆ. ವಿಶಾಖಪಟ್ಟಣಂ ನಗರವನ್ನು ರಾಜ್ಯದ ಆಡಳಿತ ಕೇಂದ್ರವನ್ನಾಗಿ ಪರಿವರ್ತಿಸುವ ಬಗ್ಗೆ ಈ ಹಿಂದೆಯೇ ಪ್ರಸ್ತಾಪ ಮಾಡಿದ್ದರು.
ಇದನ್ನೂ ಓದಿ: ಆಂಧ್ರಪ್ರದೇಶದ ಸಚಿವೆ ರೋಜಾ ವಿರುದ್ಧ ನಟ ಪವನ್ ಕಲ್ಯಾಣ್ ಬೆಂಬಲಿಗರ ಆಕ್ರೋಶ; ಕಾರಿನ ಮೇಲೆ ದಾಳಿ