Site icon Vistara News

ಸಮಾಜವಾದಿ, ಆರ್​ಜೆಡಿ ಪಕ್ಷಗಳ ನೋಂದಣಿ ರದ್ದತಿಗೆ ವಿಶ್ವ ಹಿಂದು ಪರಿಷತ್ ಮನವಿ; ಮುಖ್ಯ ಚುನಾವಣಾ ಆಯುಕ್ತರ ಭೇಟಿಗೆ ನಿರ್ಧಾರ

Vishva Hindu Parishad protest

ನವ ದೆಹಲಿ: ಸಮಾಜವಾದಿ ಪಕ್ಷ (ಎಸ್​ಪಿ) ಮತ್ತು ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡುವ ಸಲುವಾಗಿ ವಿಶ್ವ ಹಿಂದು ಪರಿಷತ್​ ಕೇಂದ್ರೀಯ ಕಾರ್ಯಾಧ್ಯಕ್ಷ ಅಲೋಕ್​ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಲು ಅವರು ಸಮಯ ಕೋರಿದ್ದಾರೆ. ಈ ಎರಡೂ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸಬೇಕು ಎಂದು ಅವರು ಬಲವಾಗಿ ಆಗ್ರಹಿಸುತ್ತಿದ್ದಾರೆ.

16ನೇ ಶತಮಾನದ ಭಕ್ತಿ ಕವಿ ತುಳಸಿದಾಸರು ರಚಿಸಿರುವ ರಾಮಚರಿತಮಾನಸ ಪವಿತ್ರ ಗ್ರಂಥದ ಬಗ್ಗೆ ಇತ್ತೀಚೆಗೆ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್​ ಮೌರ್ಯ, ಬಿಹಾರ ಆರ್​ಜೆಡಿ ನಾಯಕ ಡಾ.ಚಂದ್ರಶೇಖರ್​ ಅವರು ರಾಮಚರಿತಮಾನಸ ಗ್ರಂಥಕ್ಕೆ ಅವಹೇಳನ ಮಾಡಿದ್ದಾರೆ. ಆದರೂ ಆ ಎರಡೂ ಪಕ್ಷಗಳ ವರಿಷ್ಠರು ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ವಿಶ್ವ ಹಿಂದು ಪರಿಷತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿದ ವಿಶ್ವ ಹಿಂದು ಪರಿಷತ್​ ಕೇಂದ್ರೀಯ ಕಾರ್ಯಾಧ್ಯಕ್ಷ ಅಲೋಕ್​ ಕುಮಾರ್, ‘ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್​ ಮೌರ್ಯ ಅವರು ರಾಮಚರಿತಮಾನಸ ಪವಿತ್ರ ಗ್ರಂಥಕ್ಕೆ ಅಪಮಾನ ಮಾಡಿದ್ದಾರೆ. ಈ ಗ್ರಂಥದಲ್ಲಿ ದಲಿತರನ್ನು ಅವಮಾನಿಸಲಾಗಿದೆ. ಹಾಗಾಗಿ ಗ್ರಂಥವನ್ನು ನಿಷೇಧಿಸಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ರಾಮಚರಿತಮಾನಸ ಗ್ರಂಥದ ಪ್ರತಿಗಳನ್ನು ಸುಡಲೂ ಕುಮ್ಮಕ್ಕು ಕೊಟ್ಟಿದ್ದಾರೆ. ಹೀಗೆ ಈ ಧಾರ್ಮಿಕ ಗ್ರಂಥವನ್ನ ಮೌರ್ಯ ಅವಮಾನಿಸಿದ ಬೆನ್ನಲ್ಲೇ ಅವರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನೀಡಲಾಗಿದೆ. ಅಂದರೆ ಸ್ವಾಮಿ ಪ್ರಸಾದ್ ಮೌರ್ಯ ಹೇಳಿಕೆಗೆ ಇಡೀ ಪಕ್ಷದ ಅನುಮೋದನೆ ಇದೇ ಎಂದೇ ಅರ್ಥೈಸಿಕೊಳ್ಳಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, ‘ಆರ್​​ಜೆಡಿ ನಾಯಕ ಡಾ. ಚಂದ್ರಶೇಖರ್ ಅವರು ಕೂಡ ರಾಮಚರಿತಮಾನಸ ಗ್ರಂಥವನ್ನು ನಿಷೇಧಿಸಬೇಕು ಎಂದು ಹೇಳಿದ್ದಾರೆ. ಇವರೆಲ್ಲ ಹೀಗೆ ರಾಮಚರಿತ ಮಾನಸ ಮತ್ತು ಇತರ ಧಾರ್ಮಿಕ ಗ್ರಂಥಗಳ ಬಗ್ಗೆ ಅವಹೇಳನ ಮಾಡಿ, ಹಿಂದು ಸಮಾಜದಲ್ಲಿ ಒಡಕು ಮೂಡಿಸುವ ಯತ್ನ ಮಾಡಿದ್ದಾರೆ. ಅವರು ಎಷ್ಟೆಲ್ಲ ಆಕ್ಷೇಪಣೀಯ ಮಾತುಗಳನ್ನಾಡಿದರೂ ರಾಷ್ಟ್ರೀಯ ಜನತಾದಳ ಕ್ರಮ ಕೈಗೊಳ್ಳಲಿಲ್ಲ. ಅವರಿಗೂ ಇಡೀ ಪಕ್ಷದ ಬೆಂಬಲ ಇದೆ’ ಎಂದಿದ್ದಾರೆ.

ಇದನ್ನೂ ಓದಿ: ಮತಾಂತರವಾದವರಿಗೆ SCST ಮೀಸಲಾತಿ ಬೇಡ: ವಿಶ್ವ ಹಿಂದು ಪರಿಷತ್‌ ಆಗ್ರಹ

ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾ ದಳ ಎರಡೂ ಪಕ್ಷಗಳು ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕಾದಾಗ ಯಾವೆಲ್ಲ ಮೂಲಭೂತ ಷರತ್ತುಗಳನ್ನು ಒಪ್ಪಿಕೊಂಡಿದ್ದವೋ, ಅದೇ ನಿಯಮ-ಷರತ್ತುಗಳನ್ನು ಆ ಪಕ್ಷಗಳು ಉಲ್ಲಂಘಿಸುತ್ತಿವೆ. ಹೀಗಾಗಿ ಎರಡೂ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸಬೇಕು ಎಂದು ನಾವು ಚುನಾವಣಾ ಆಯೋಗದ ಮುಖ್ಯಸ್ಥರನ್ನು ಆಗ್ರಹಿಸುತ್ತೇವೆ ಎಂದು ತಿಳಿಸಿದ್ದಾರೆ.

Exit mobile version