ನವ ದೆಹಲಿ: ನೂತನ ಸಂಸತ್ ಭವನದ ಮೇಲೆ ನಿರ್ಮಾಣಗೊಂಡ ರಾಷ್ಟ್ರ ಲಾಂಛನಕ್ಕೆ ಒಂದು ವರ್ಗದ ಜನರು ವಿರೋಧ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದಷ್ಟು ಮಂದಿ ಅದನ್ನು ಸಮರ್ಥಿಸಿಕೊಂಡು, ಕೇಂದ್ರ ಸರ್ಕಾರದ ಬೆಂಬಲಕ್ಕೆ ನಿಂತಿದ್ದಾರೆ. ಅವರಲ್ಲಿ ಒಬ್ಬರು ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ನೂತನವಾಗಿ ನಿರ್ಮಾಣ ಮಾಡಲಾದ ರಾಷ್ಟ್ರೀಯ ಲಾಂಛನದಲ್ಲಿ ಸಿಂಹಗಳ ಮುಖ ಕ್ರೂರತೆಯನ್ನು ಬಿಂಬಿಸುತ್ತದೆ. ಇದು ಮೂಲ ಲಾಂಛನದಂತೆ ಇಲ್ಲ ಎಂದು ಆರೋಪ ಮಾಡುತ್ತಿರುವ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳ ಪ್ರಮುಖರನ್ನು ವಿವೇಕ್ ಅಗ್ನಿಹೋತ್ರಿ ʼಅರ್ಬನ್ ನಕ್ಸಲರುʼ ಎಂದು ಕರೆದಿದ್ದಾರೆ.
ರಾಷ್ಟ್ರ ಲಾಂಛನಕ್ಕೆ ವ್ಯಕ್ತವಾಗುತ್ತಿರುವ ವಿರೋಧವನ್ನು ಖಂಡಿಸಿ ಟ್ವೀಟ್ ಮಾಡಿದ ವಿವೇಕ್ ಅಗ್ನಿಹೋತ್ರಿ, ʼಆಯಾಮವನ್ನು ಬದಲಿಸಿ, ಅದರಲ್ಲೂ ಕೆಳಭಾಗದಿಂದ ಸೆರೆಹಿಡಿಯಲಾದ ಫೋಟೋದಿಂದ ಕೂಡ ಈ ಅರ್ಬನ್ ನಕ್ಸಲ್‌ಗಳನ್ನು ಮೂರ್ಖರನ್ನಾಗಿಸಬಹುದು ಎಂಬುದನ್ನು ಸಂಸತ್ ಭವನದ ಮೇಲಿರುವ ಹೊಸ ರಾಷ್ಟ್ರೀಯ ಲಾಂಛನ ತೋರಿಸಿಕೊಟ್ಟಿದೆʼ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ʼಈ ಅರ್ಬನ್ ನಕ್ಸಲರಿಗೆ ಬೇಕಾಗಿರುವುದು ಹಲ್ಲುಗಳಿಲ್ಲದ, ಬಾಯಿ ಮುಚ್ಚಿಕೊಂಡಿರುವ ಸಿಂಹ. ಅವರು ಸಿಂಹಗಳನ್ನೂ ಸಾಕುಪ್ರಾಣಿಯಂತೆ ನೋಡಲು ಬಯಸುತ್ತಿದ್ದಾರೆʼ ಎಂದು ವ್ಯಂಗ್ಯವಾಡಿದ್ದಾರೆ.
ಮಹುವಾ ಟೀಕೆ
ಕಾಂಗ್ರೆಸ್‌ನ ಜೈರಾಮ್ ರಮೇಶ್, ಅಧೀರ್ ರಂಜನ್ ಚೌಧರಿ ಸೇರಿ ಹಲವು ನಾಯಕರು ರಾಷ್ಟ್ರಲಾಂಛನವನ್ನು ವಿರೋಧಿಸಿದ್ದಾರೆ. ಅದರೊಂದಿಗೆ, ಇತ್ತೀಚೆಗಷ್ಟೇ ಕಾಳಿ ಮಾತೆ ಬಗ್ಗೆ ಸಲ್ಲದ ಮಾತುಗಳನ್ನಾಡಿ ವಿವಾದ ಹುಟ್ಟುಹಾಕಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ಕೂಡ ರಾಷ್ಟ್ರ ಲಾಂಛನದ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ʼಈ ಲಾಂಛನದಲ್ಲಿ ಸತ್ಯಮೇವ ಜಯತೆ ಇದ್ದಲ್ಲಿ, ಸಂಘಿಮೇವ ಜಯತೆʼ ಎಂಬ ವಾಕ್ಯ ಇದ್ದರೆ ಇನ್ನಷ್ಟು ಪರಿಪೂರ್ಣವಾಗುತ್ತಿತ್ತುʼ ಎಂದು ಹೇಳಿದ್ದರು. ಅದನ್ನು ಬಿಜೆಪಿ ನಾಯಕರು ವಿರೋಧಿಸಿದ್ದು, ʼ ಮಹುವಾ ಮೊಯಿತ್ರಾ ನಾವೀನ್ಯತೆಯನ್ನು ಅರೆದು ಕುಡಿದ ತಜ್ಞೆʼ ಎಂದು ಅಪಹಾಸ್ಯ ಮಾಡಿದ್ದಾರೆ.
ಇದನ್ನೂ ಓದಿ: ರಾಷ್ಟ್ರ ಲಾಂಛನವನ್ನು ಕೆಳಭಾಗದಿಂದ ತೆಗೆದ ಫೋಟೋ ವೈರಲ್ ಆಗ್ತಿದೆ; ಶಿಲ್ಪಿ ಸುನಿಲ್ ಡಿಯೋರ್ ಸ್ಪಷ್ಟನೆ