Site icon Vistara News

The Kashmir Files: ಮಮತಾ ಬ್ಯಾನರ್ಜಿಗೆ ಲೀಗಲ್ ನೋಟಿಸ್​ ಕಳಿಸಿದ ದಿ ಕಾಶ್ಮೀರಿ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

Vivek Agnihotri sent legal notice to Mamata Banerjee over her Kashmir Files remark

#image_title

‘ಏನಿದು ದಿ ಕಾಶ್ಮೀರಿ ಫೈಲ್ಸ್ (The Kashmir Files)​?-ಸಮಾಜದ ನಿರ್ದಿಷ್ಟ ವರ್ಗದ ಜನರನ್ನು ಅವಮಾನಿಸಲೆಂದೇ ಮಾಡಿದ ಸಿನಿಮಾ’ ಎಂದು ಹೇಳಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ಆ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Filmmaker Vivek Agnihotri) ಅವರು ಲೀಗಲ್ ನೋಟಿಸ್ ಕಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ವಿವೇಕ್ ಅಗ್ನಿಹೋತ್ರಿ ಅವರು ‘ಮಮತಾ ಬ್ಯಾನರ್ಜಿ ಅವರು ನಮ್ಮನ್ನು ಮತ್ತು ನಮ್ಮ ದಿ ಕಾಶ್ಮೀರಿ ಫೈಲ್ಸ್​ ಸಿನಿಮಾವನ್ನು ಅಪಮಾನ ಮಾಡಲು ದುರುದ್ದೇಶ ಪೂರಿತ ಹೇಳಿಕೆಗಳನ್ನು ಕೊಡುತ್ತಿದ್ದಾರೆ. 2024ರಲ್ಲಿ ಹೊರಬರಲಿರುವ ದಿ ದೆಹಲಿ ಫೈಲ್ಸ್​ ಬಗ್ಗೆಯೂ ಕೆಟ್ಟದಾಗಿ ಮಾತಾಡಿದ್ದಾರೆ. ಹೀಗಾಗಿ ನಾನು, ನಿರ್ಮಾಪಕ ಅಭಿಷೇಕ್​ ಅಗರ್​ವಾಲ್​ ಮತ್ತು ಪಲ್ಲವಿ ಜೋಶಿ (ವಿವೇಕ್ ಅಗ್ನಿಹೋತ್ರಿ ಪತ್ನಿ) ಸೇರಿ ಅವರ ವಿರುದ್ಧ ಕಾನೂನು ಹೋರಾಟ ಶುರು ಮಾಡಿದ್ದು, ಈಗಾಗಲೇ ಲೀಗಲ್ ನೋಟಿಸ್ ಕಳಿಸಿದ್ದೇವೆ ಎಂದು ತಿಳಿಸಿದ್ದಾರೆ.

ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಸುದ್ದಿಗೋಷ್ಠಿ ಒಂದರಲ್ಲಿ ಸಿನಿಮಾ ಬಗ್ಗೆ ಟೀಕಿಸಿದ್ದ ಮಮತಾ ಬ್ಯಾನರ್ಜಿ ‘ಏನು ಈ ಕಾಶ್ಮೀರಿ ಫೈಲ್ಸ್​?-ಇದು ಸಮಾಜದ ಒಂದು ವರ್ಗವನ್ನು ಅವಮಾನಿಸುವ ಕಥೆ..ಏನು ದಿ ಕೇರಳಾ ಸ್ಟೋರಿ-ಇದೊಂದು ಸತ್ಯವನ್ನು ಮರೆಮಾಚಿ, ತಿರುಚಿದ ಕಥೆ. ಸ್ವಲ್ಪ ದಿನಗಳ ಹಿಂದೆ ಬಿಜೆಪಿಯಿಂದ ಹಣ ಪಡೆದ ಒಂದಷ್ಟು ಸ್ಟಾರ್​ಗಳು ಪಶ್ಚಿಮ ಬಂಗಾಳಕ್ಕೆ ಬಂದಿದ್ದಾರೆ. ಅವರೀಗ ಒಂದಷ್ಟು ಕಪೋಕಲ್ಪಿತ ಮತ್ತು ತಿರುಚಿದ ಕಥೆಗಳನ್ನು ಇಟ್ಟುಕೊಂಡು ದಿ ಬಂಗಾಳ್ ಫೈಲ್ಸ್​ ನಿರ್ಮಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದ ವಿವೇಕ್ ಅಗ್ನಿಹೋತ್ರಿ ಅವರು ‘ಸಮಾಜದ ಯಾವ ಸೆಕ್ಷನ್​​ (ವರ್ಗಕ್ಕೆ)ಗೆ ದಿ ಕಾಶ್ಮೀರಿ ಫೈಲ್ಸ್​ನಿಂದ ತೊಂದರೆಯಾಗುತ್ತದೆ ಎಂದು ಕೇಳಿದ್ದರು.

ಅಂದಹಾಗೇ, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರಿ ಫೈಲ್ಸ್​ 2022ರಲ್ಲಿ ಬಿಡುಗಡೆಯಾಗಿತ್ತು. 1990ರ ದಶಕದಲ್ಲಿ ಆದ ಕಾಶ್ಮೀರಿ ಪಂಡಿತರ ಹತ್ಯೆ, ವಲಸೆಯ ಕಥೆಯನ್ನು ಒಳಗೊಂಡ ಈ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ವಿರೋಧ ಎದುರಿಸಿತ್ತು. ಇಲ್ಲಿ ಮುಸ್ಲಿಂ ಸಮುದಾಯವನ್ನು ಕ್ರೂರವಾಗಿ ಬಿಂಬಿಸಲಾಗಿದೆ ಎಂದು ಅನೇಕರು ವಾದಿಸಿದ್ದರು. ಇದೀಗ ದಿ ಕೇರಳ ಸ್ಟೋರಿ ಬಿಡುಗಡೆಯಾದಾಗಲೂ ಅದೇ ಆರೋಪ ಕೇಳಿಬರುತ್ತಿದೆ. ಕೇರಳದ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಅಫ್ಘಾನ್ -ಸಿರಿಯಾಕ್ಕೆ ಕರೆದೊಯ್ದು, ಐಸಿಸ್ ಉಗ್ರ ಸಂಘಟನೆ ಸೇರಿಸುವ, ಲವ್​ ಜಿಹಾದ್​ಗೆ ಅವರನ್ನು ಒಳಪಡಿಸುವ ಕಥೆಯನ್ನು ದಿ ಕೇರಳ ಸ್ಟೋರಿ ಒಳಗೊಂಡಿದೆ. ಈಗಲೂ ಮುಸ್ಲಿಂ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್, ಟಿಎಂಸಿ ಮತ್ತು ಇತರ ಪಕ್ಷಗಳು ಮಾಡುತ್ತಿವೆ. ದಿ ಕಾಶ್ಮೀರಿ ಫೈಲ್ಸ್​ನ್ನು ಬಿಜೆಪಿ ಬೆಂಬಲಿಸಿತ್ತು. ಹಾಗೇ, ಕೇರಳ ಸ್ಟೋರಿಯನ್ನೂ ಈ ಪಕ್ಷ ಬೆಂಬಲಿಸುತ್ತಿದೆ.

Exit mobile version