ಮುಂಬಯಿ: 1990ರ ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕಥೆಯನ್ನಾಧರಿಸಿ ‘ದಿ ಕಾಶ್ಮೀರಿ ಫೈಲ್ಸ್’ ಎಂಬ ಸಿನಿಮಾವನ್ನು ಮಾಡಿ, ದೇಶಾದ್ಯಂತ ಸಂಚಲನ ಮೂಡಿಸಿದ್ದ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರಿಗೆ ಕೇಂದ್ರ ಸರ್ಕಾರ ವೈ ಶ್ರೇಣಿಯ ಭದ್ರತೆಯನ್ನು ನೀಡಿದೆ. ಐದರಿಂದ ಆರು ಜನ ಶಸ್ತ್ರಸಹಿತ ಕಮಾಂಡೋಗಳು, ಪೊಲೀಸರನ್ನು ಇವರ ಭದ್ರತೆಗೆ ನಿಯೋಜಿಸಲಾಗಿದೆ. ತಮಗೆ ಒದಗಿಸಿದ ವೈ ಶ್ರೇಣಿ ಭದ್ರತೆಯನ್ನು ಜನರಿಗೆ ತೋರಿಸಲು ವಿವೇಕ್ ಅಗ್ನಿಹೋತ್ರಿ ಈಗೊಂದು ಟ್ವೀಟ್ ಮಾಡಿದ್ದಾರೆ.
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈಗ ತಮ್ಮ ಮುಂಜಾನೆಯ ವಾಕಿಂಗ್ ವಿಡಿಯೊವೊಂದನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡು ‘ಕಾಶ್ಮೀರದಲ್ಲಿ ಹಿಂದೂಗಳ ನರಮೇಧವನ್ನು ತೋರಿಸಿದ್ದಕ್ಕೆ, ಹಿಂದೂ ಬಹುಸಂಖ್ಯಾತ ರಾಷ್ಟ್ರದಲ್ಲಿ ನಾನು ತೆರುತ್ತಿರುವ ಬೆಲೆ ಇದು. ಅಭಿವ್ಯಕ್ತಿ ಸ್ವಾತಂತ್ರ್ಯ!!’ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಮುಂಜಾನೆ ವಾಕಿಂಗ್ ಹೋಗುತ್ತಿರುವ ವಿವೇಕ್ ಅಗ್ನಿಹೋತ್ರಿ ಜತೆಗೆ ಈ ಕಮಾಂಡೋಗಳು, ಪೊಲೀಸ್ ಸಿಬ್ಬಂದಿಯೂ ವಾಕಿಂಗ್ ಹೋಗುವುದುನ್ನು ವಿಡಿಯೊದಲ್ಲಿ ನೋಡಬಹುದು. ಇದು ನಿಜಕ್ಕೂ ಆಭಾಸ ಅನ್ನಿಸುತ್ತದೆ. ಸ್ವತಃ ವಿವೇಕ್ ಅಗ್ನಿಹೋತ್ರಿಯೇ ಆ ಭಾವ ಹೊರಹಾಕಿ, ತನಗೆ ಈ ಭದ್ರತೆಯಿಂದ ಮುಜುಗರ ಉಂಟಾಗುತ್ತಿದೆ ಎಂಬಂತೆ ಹೇಳಿದ್ದಾರೆ.
ವಿಡಿಯೊ ನೋಡಿದ ನೆಟ್ಟಿಗರಂತೂ ಈ ವಿಚಾರವಾಗಿ ಟ್ರೋಲ್ ಮಾಡುತ್ತಿದ್ದಾರೆ. ‘ಅಯ್ಯೋ ನನ್ನ ತೆರಿಗೆ ಹಣ ಹೀಗೆಲ್ಲ ವ್ಯರ್ಥವಾಗುತ್ತಿದೆಯಲ್ಲ’ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ‘ಇಲ್ಲಿ ನಿಜಕ್ಕೂ ತೆರಿಗೆದಾರರ ಹಣ ಹಾಳು ಮಾಡಲಾಗುತ್ತಿದೆ’ ಎಂದು ಮತ್ತೊಬ್ಬರೂ ಹೇಳಿದ್ದಾರೆ. ‘ದೇಶದ ಜನಸಾಮಾನ್ಯರು ಪಾವತಿ ಮಾಡಿದ ತೆರಿಗೆ ಹಣದಲ್ಲಿ ನಿಮಗೆ ಭದ್ರತೆ ಒದಗಿಸಲಾಗುತ್ತಿದೆ. ನಿಮಗೇನೂ ಭದ್ರತೆಯ ಅಗತ್ಯವಿಲ್ಲ. ಹಾಗೊಮ್ಮೆ ಇದ್ದರೆ, ನೀವೇ ಯಾಕೆ ಖಾಸಗಿಯಾಗಿ ಭದ್ರತೆ ಪಡೆಯಬಾರದು? ನಿಮ್ಮದೇ ಹಣದಲ್ಲಿ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಬಹುದುಲ್ಲ? ನೀವೇನೂ ಜನರ ಪ್ರತಿನಿಧಿಯಲ್ಲ. ನಿಮ್ಮ ಐಷಾರಾಮಿ ಜೀವನಕ್ಕೆ ನಮ್ಮ ಹಣವೇಕೆ? ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ‘ಅಯ್ಯೋ ನೀವು ಈ ಭದ್ರತೆಯನ್ನು ತುಂಬ ಖುಷಿಯಿಂದ ಅನುಭವಿಸುತ್ತೀದ್ದೀರಿ ಎಂಬುದು ಕಾಣುತ್ತಿದೆ. ಇರುಸುಮುರುಸಾಗುತ್ತಿದೆ ಎಂದೆಲ್ಲ ಸುಮ್ಮನೆ ತೋರಿಸಿಕೊಳ್ಳಬೇಡಿ’ ಎಂದು ಇನ್ನೊಬ್ಬರು ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದಾರೆ. ಒಟ್ಟಾರೆ ವಿವೇಕ್ ಅಗ್ನಿಹೋತ್ರಿ ತಮ್ಮ ವಿಡಿಯೊ ಶೇರ್ ಮಾಡಿಕೊಂಡು, ತಾವೇ ಟ್ರೋಲ್ ಆಗಿದ್ದಾರೆ.
ಇದನ್ನೂ ಓದಿ: Vivek Agnihotri | ವಿವಾದದ ಬೆನ್ನಲ್ಲೇ ‘ದಿ ಕಾಶ್ಮೀರ್ ಫೈಲ್ಸ್’ ಪಾರ್ಟ್ 2 ಘೋಷಿಸಿದ ವಿವೇಕ್ ಅಗ್ನಿಹೋತ್ರಿ