ಉತ್ತರ ಪ್ರದೇಶದ ಎರಡು ಕಡೆಗಳಲ್ಲಿ ಗೋಡೆ ಕುಸಿತವಾಗಿ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ. ಲಖನೌನ ದಿಲ್ಕುಶಾ ಏರಿಯಾದಲ್ಲಿ ಗೋಡೆ ಕುಸಿತದಿಂದ 9 ಮಂದಿ ಮೃತಪಟ್ಟಿದ್ದರೆ, ಉನ್ನಾವೋದಲ್ಲಿ ಗೋಡೆ ಕುಸಿದು 3 ಮಂದಿ ಸಾವನ್ನಪ್ಪಿದ್ದಾರೆ. ಈ ಎರಡೂ ಕಡೆ ನಡೆದ ಅವಘಡಕ್ಕೂ ಅತ್ಯಧಿಕ ಮಳೆಯೇ ಕಾರಣ ಎನ್ನಲಾಗಿದೆ. ಹಾಗೇ ಎರಡೂ ಕಡೆ ಮಣ್ಣು ತೆರವುಗೊಳಿಸುವ ಮತ್ತು ಅದರಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಲಖನೌನ ದಿಲ್ಕುಶಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯೊಂದ ಗಡಿ ಗೋಡೆ ಇನ್ನೊಂದು ಮನೆಯ ಮೇಲೆ ಕುಸಿದು ಬಿದ್ದಿದೆ. ಗುರುವಾರ ರಾತ್ರಿಯೆಲ್ಲ ವಿಪರೀತ ಮಳೆ ಸುರಿದು ಶುಕ್ರವಾರ ಮುಂಜಾನೆ ಹೊತ್ತಿಗೆ ಗೋಡೆ ಬಿದ್ದಿದೆ. ಈ ಅವಘಡದಲ್ಲಿ ಮೂವರು ಮಕ್ಕಳು ಸೇರಿ, 9 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು ಅವರನ್ನೆಲ್ಲ ಸ್ಥಳೀಯ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಿಲ್ಲಾಧಿಕಾರಿ ಸೂರ್ಯಪಾಲ್ ಗಾಂಗ್ವಾರ್ ಅವರು ಆಸ್ಪತ್ರೆಗೆ ಭೇಟಿ ಕೊಟ್ಟು ಚಿಕಿತ್ಸೆ ಪಡೆಯುತ್ತಿರುವವರ ಬಳಿ ಆರೋಗ್ಯ ವಿಚಾರಿಸಿದ್ದಾರೆ. ಹಾಗೇ, ಗೋಡೆ ಕುಸಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಮೃತರೆಲ್ಲ ಝಾನ್ಸಿ ಜಿಲ್ಲೆಯವರಾಗಿದ್ದು, ನಿರ್ಮಾಣ ಹಂತದಲ್ಲಿರುವ ಕಟ್ಟಡದ ಸಮೀಪವೇ ತಮ್ಮ ಗುಡಿಸಲುಗಳನ್ನು ಹಾಕಿಕೊಂಡು ವಾಸಿಸುತ್ತಿದ್ದರು. ಕಟ್ಟಡದ ಗೋಡೆ ಕುಸಿದು ಈ ಗುಡಿಸಲುಗಳ ಮೇಲೆ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿ ಪಿಯೂಷ್ ಮೋರ್ಡಿಯಾ ತಿಳಿಸಿದ್ದಾರೆ.
ಇದನ್ನೂ ಓದಿ: Heavy Rain | ಮೊಹರಂ ಪೂಜೆ ಹೊತ್ತಿಗೆ ಗೋಡೆ ಕುಸಿತ; ಚಿಕ್ಕೋಡಿಯಲ್ಲಿ ನಾಲ್ವರಿಗೆ ಗಂಭೀರ ಗಾಯ