ಚೆನ್ನೈ: ಇಡೀ ಹಳ್ಳಿಗೆ ಹಳ್ಳಿಯ ಆಸ್ತಿಯನ್ನೇ ವಕ್ಫ್ ಮಂಡಳಿ ಕಬಳಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇಲ್ಲಿನ ತಿರುಚ್ಚಿ ಸಮೀಪದ ತಿರುಚೆಂಥುರೈ ಎಂಬ ಗ್ರಾಮ ಹಿಂದು ಬಾಹುಳ್ಯವಿರುವ ಹಳ್ಳಿ. ಆದರೆ ಆ ಗ್ರಾಮದ ಆಸ್ತಿಯನ್ನು ತಮಿಳುನಾಡು ವಕ್ಫ್ ಬೋರ್ಡ್ ಇದೀಗ ಸಂಪೂರ್ಣವಾಗಿ ತನ್ನದಾಗಿಸಿಕೊಂಡಿದೆ. ಇದು ಹಳ್ಳಿಗರ ಪಾಲಿಗೆ ದೊಡ್ಡ ಶಾಕ್ ಕೊಟ್ಟಿದೆ. ವರ್ಷಾನುಗಟ್ಟಲೆ ಇಲ್ಲೇ ಇದ್ದು, ಈ ಭೂಮಿ, ಪ್ರದೇಶವೆಲ್ಲ ತಮ್ಮದೇ ಎಂದು ಬದುಕುತ್ತಿದ್ದ ಸ್ಥಳೀಯರು ಈಗ ಈ ನೆಲ ನಮ್ಮದಲ್ಲ ಎಂಬ ನೋವಿನಲ್ಲಿ ಇದ್ದಾರೆ.
ಇತ್ತೀಚೆಗೆ ಹಳ್ಳಿಯ ರಾಜಗೋಪಾಲ್ ಎಂಬುವರು ತಮ್ಮ 1 ಎಕರೆ 2ಸೆಂಟ್ಸ್ ಭೂಮಿಯನ್ನು ರಾಜರಾಜೇಶ್ವರಿ ಎಂಬುವರಿಗೆ ಮಾರಲು ಹೊರಟಿದ್ದರು. ಅದರ ಮಾರಾಟ ಪ್ರಕ್ರಿಯೆ ನಡೆಸುವ ಸಲುವಾಗಿ ರಾಜಗೋಪಾಲ್ ರಿಜಸ್ಟ್ರಾರ್ ಕಚೇರಿಗೆ ಹೋಗಿದ್ದರು. ಆದರೆ ಅಲ್ಲಿ ಹೋದಾಗ ಅಧಿಕಾರಿಗಳು ಹೇಳಿದ ಮಾತು ಕೇಳಿ ಅಕ್ಷರಶಃ ದಂಗಾಗಿ ಹೋಗಿದ್ದಾರೆ. ‘ತಾನು ತನ್ನದೆಂದುಕೊಂಡು ಮಾರಲು ಹೊರಟಿದ್ದ ಭೂಮಿ ತನ್ನದಲ್ಲ. ಅದು ವಕ್ಫ್ ಬೋರ್ಡ್ಗೆ ಸೇರಿದ್ದು ಎಂಬುದನ್ನು ತಿಳಿದು ಬೇಸರ ಪಟ್ಟಿದ್ದಾರೆ’.
ನನ್ನ ಒಂದು ಎಕರೆ 2 ಸೆಂಟ್ಸ್ ಭೂಮಿಯನ್ನು ಮಾರಾಟ ಮಾಡಬೇಕು ಎಂದುಕೊಂಡಿದ್ದೇನೆ ಎಂದು ರಾಜಗೋಪಾಲ್ ಹೇಳಿದಾಗ ಅಲ್ಲಿನ ರಿಜಿಸ್ಟ್ರಾರ್, ‘ಅದು ಸಾಧ್ಯವಿಲ್ಲ. ಈ ಭೂಮಿಯ ಮಾಲೀಕತ್ವ ವಕ್ಫ್ ಬೋರ್ಡ್ಗೆ ಸೇರಿದೆ. ಹೀಗಾಗಿ ನೀವು ಮಾರಲು ಆಗುವುದಿಲ್ಲ. ಚೆನ್ನೈನಲ್ಲಿರುವ ವಕ್ಫ್ ಬೋರ್ಡ್ ಗೆ ಹೋಗಿ ನೀವು ಅಗತ್ಯ ದಾಖಲೆಗಳು, ನಿರಾಕ್ಷೇಪಣ ಪತ್ರವನ್ನು ತರಬೇಕಾಗುತ್ತದೆ’ ಎಂದು ತಿಳಿಸಿದ್ದಾರೆ. ಆದರೆ ರಾಜಗೋಪಾಲ್ , ‘1992ರಲ್ಲಿ ನಾನೇ ಖರೀದಿಸಿದ ಆಸ್ತಿಯನ್ನು ಮಾರಾಟ ಮಾಡಲು ವಕ್ಫ್ ಬೋರ್ಡ್ ಅನುಮತಿ ಯಾಕೆ’? ಎಂದು ವಾದಿಸುತ್ತಿದ್ದಾರೆ. ಅಷ್ಟೇ ಅಲ್ಲ, ಆಸ್ತಿ ವಕ್ಫ್ ಬೋರ್ಡ್ ಪಾಲಾಗಿದ್ದು ಯಾವಾಗ? ಹೇಗೆ? ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ.
ಆಗ ರಿಜಿಸ್ಟ್ರಾರ್ ಮುರಳಿ ಸುಮಾರು 250 ಪೇಜ್ಗಳ ಪತ್ರವೊಂದನ್ನು ರಾಜ್ಗೋಪಾಲ್ಗೆ ತೋರಿಸಿ, ‘ಬರೀ ನಿಮ್ಮ ಭೂಮಿಯಷ್ಟೇ ಅಲ್ಲ, ಇಡೀ ತಿರುಚೆಂಥುರೈ ಗ್ರಾಮದ ಪೂರ್ಣ ಆಸ್ತಿಯೇ ವಕ್ಫ್ ಬೋರ್ಡ್ ಹೆಸರಿನಲ್ಲಿದೆ. ಯಾರೇ ಅದನ್ನು ಮಾರಾಟ ಮಾಡಬೇಕಾದರೂ ಅಲ್ಲಿಂದ ನಿರಾಕ್ಷೇಪಣ ಪತ್ರ ತರಬೇಕಾಗುತ್ತದೆ’ ಎಂದು ತಿಳಿಸಿದ್ದಾರೆ. ಅದಾದ ಬಳಿಕ ರಾಜಗೋಪಾಲ್ ಸೀದಾ ಹೋಗಿ ಹಳ್ಳಿಗರಿಗೆ ಈ ವಿಷಯ ತಿಳಿಸಿದ್ದಾರೆ. ಅದನ್ನು ಕೇಳಿದ ಎಲ್ಲರೂ ಶಾಕ್ ಆಗಿದ್ದಾರೆ. ‘ನಮ್ಮನಮ್ಮ ಭೂಮಿ, ಆಸ್ತಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳೂ ನಮ್ಮ ಬಳಿಯೇ ಇರುವಾಗ ಅದು ಹೇಗೆ ವಕ್ಫ್ ಬೋರ್ಡ್ ಅದನ್ನು ಸ್ವಂತದ್ದು ಮಾಡಿಕೊಂಡಿತು’ ಎಂಬುದೇ ಹಳ್ಳಿಗರ ಬಹುದೊಡ್ಡ ಪ್ರಶ್ನೆಯಾಗಿದೆ.
ಸದ್ಯ ಹಳ್ಳಿಗರೆಲ್ಲ ಈ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತೆಗೆದುಕೊಂಡು ಹೋಗಿದ್ದಾರೆ ಮತ್ತು ಅವರು ಸೂಕ್ತ ತನಿಖೆ ನಡೆಸುವುದಾಗಿ ಭರವಸೆಯನ್ನೂ ಕೊಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಿರುಚ್ಚಿ ಜಿಲ್ಲಾ ಬಿಜೆಪಿ ನಾಯಕ ಅಲ್ಲೂರು ಪ್ರಕಾಶ್, ‘ತಿರುಚೆಂಥುರೈ ಗ್ರಾಮದಲ್ಲಿ ಹಿಂದುಗಳೇ ಹೆಚ್ಚಾಗಿದ್ದಾರೆ. ಇದೊಂದು ಕೃಷಿಕರೇ ಇರುವ ಹಳ್ಳಿ. ಇಲ್ಲಿಗೆ ವಕ್ಫ್ ಬೋರ್ಡ್ಗೆ ಏನು ಸಂಬಂಧ?’ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ‘ಇಲ್ಲೊಂದು 1500 ವರ್ಷ ಹಳೇ ದೇವಸ್ಥಾನವಿದೆ. ಅದರ ಆಸ್ತಿ 369 ಎಕರೆಗಳಷ್ಟಿದೆ. ಅದೂ ಕೂಡ ವಕ್ಫ್ ಬೋರ್ಡ್ ಪಾಲಾಗಿದೆಯಾ?. ಒಟ್ಟಾರೆ ಇದೆಲ್ಲ ಆಗಿದ್ದು ಹೇಗೆ? ಎಂಬುದು ಸಮಗ್ರವಾಗಿ ತನಿಖೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Bharat Jodo Yatra | ರಾಹುಲ್ ಗಾಂಧಿಗೆ ಮದುವೆ ಮಾಡಿಸಲು ಸಿದ್ಧರಾದ ತಮಿಳುನಾಡು ಮಹಿಳೆಯರು !