Site icon Vistara News

Fact Check | ವಂದೇ ಭಾರತ್​ ರೈಲಿನಲ್ಲಿ ಎಸಿ ಮೂಲಕ ಚಿಮ್ಮುತ್ತಿದೆಯಾ ನೀರು? ಆಧುನಿಕ ಸೌಲಭ್ಯದ ಟ್ರೇನ್​​ನಲ್ಲಿ ಅವ್ಯವಸ್ಥೆಯಾ? ಸತ್ಯಾಂಶ ಏನು?

Water overflowing out of AC is not inside Vande Bharat train

ನವ ದೆಹಲಿ: ವಂದೇ ಭಾರತ್​ ರೈಲು ಸಂಚಾರವನ್ನು ದೇಶದೆಲ್ಲೆಡೆ ವಿಸ್ತರಿಸಲಾಗುತ್ತಿದೆ. ಇತ್ತೀಚೆಗಷ್ಟೇ, ಅಂದರೆ ಡಿಸೆಂಬರ್​ 11ರಂದು ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರದ ನಾಗ್ಪುರ ಮತ್ತು ಛತ್ತೀಸ್​ಗಢ್​​ನ ಬಿಲಾಸ್​ಪುರ ನಡುವಿನ ವಂದೇ ಭಾರತ್​ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದಾರೆ. ದೇಶದಲ್ಲಿಯೇ ಅತ್ಯಂತ ವೇಗವಾಗಿ ಚಲಿಸುವ ರೈಲುಗಳು ಎನಿಸಿಕೊಂಡ ವಂದೇ ಭಾರತ್​ ರೈಲುಗಳನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಮಾರ್ಗಗಳಿಗೆ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಮಧ್ಯೆ ವಂದೇ ಭಾರತ್​ ರೈಲಿನದ್ದು ಎನ್ನಲಾದ ವಿಡಿಯೊವೊಂದು ವೈರಲ್ ಆಗಿತ್ತು. ರೈಲಿನಲ್ಲಿರುವ ಏರ್​ ಕಂಡಿಷನರ್​​​ನ ಕಿಂಡಿಗಳಿಂದ ಕಾರಂಜಿಯಂತೆ ನೀರು ಸುರಿದು, ಅದು ಪ್ರಯಾಣಿಕರ ಬೆಡ್​ ಮೇಲೆ ಚೆಲ್ಲುವ ದೃಶ್ಯವನ್ನು ವಿಡಿಯೊದಲ್ಲಿ ನೋಡಬಹುದು. ಪ್ರಯಾಣಿಕರ ಲಗೇಜ್​ಗಳೆಲ್ಲ ನೀರಿನಲ್ಲಿ ಸಂಪೂರ್ಣ ನೆನೆದು ಹೋಗಿದ್ದೂ ಕಾಣುತ್ತದೆ. ‘ಇದು ರೈಲಿನ ಬಾತ್​ ರೂಮಿನಿಂದ ಬರುತ್ತಿರುವ ನೀರು. ಪ್ರಯಾಣಿಕರಿಗೆ ತುಂಬ ಕಿರಿಕಿರಿ ಆಗುತ್ತಿದೆ. ಇದನ್ನು ಟಿಟಿ ಪರಿಶೀಲನೆ ಮಾಡಿದ್ದಾರೆ. ಆದರೆ ಯಾವುದೇ ಮೆಕ್ಯಾನಿಕ್​​ನನ್ನು ಕರೆಸಿ, ರಿಪೇರಿ ಮಾಡಿಸಿಲ್ಲ’ ಎಂದು ಈ ವಿಡಿಯೊ ರೆಕಾರ್ಡ್ ಮಾಡಿದಾತ ಹೇಳುವುದೂ ಕೇಳಿಸುತ್ತದೆ. ಇದು ವಂದೇ ಭಾರತ್​ ರೈಲಿನ ದುಃಸ್ಥಿತಿ ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಆಗುತ್ತಿದೆ.

ನಿಜಕ್ಕೂ ವಂದೇ ಭಾರತ್​ ರೈಲಿನಲ್ಲಿ ಈ ಪರಿಸ್ಥಿತಿಯಾ?
ಆಧುನಿಕ ವ್ಯವಸ್ಥೆಗಳನ್ನೊಳಗೊಂಡ ವಂದೇ ಭಾರತ್ ರೈಲಿನಲ್ಲಿ ನಿಜಕ್ಕೂ ಇಂಥ ಸನ್ನಿವೇಶ ಇದೆಯಾ ಎಂದು ಇಂಟರ್​​ನೆಟ್​​ನಲ್ಲಿ ಭಾರಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ‘ಇದು ವಂದೇ ಭಾರತ್​ ರೈಲಿನ ಅವ್ಯವಸ್ಥೆಯಲ್ಲ’ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ವಿಡಿಯೊ ಈಗಿನದ್ದಲ್ಲ, 2019ರದ್ದು ಮತ್ತು ಬೆಂಗಳೂರು-ಪಾಟ್ನಾ ಸಂಘಮಿತ್ರ ಎಕ್ಸ್​ಪ್ರೆಸ್​ ರೈಲಿನಲ್ಲಿ ಚಿತ್ರೀಕರಿಸಲಾಗಿದ್ದ ವಿಡಿಯೊ ಎಂಬುದು ಇಂಡಿಯಾ ಟುಡೆ ಮಾಧ್ಯಮ ನಡೆಸಿದ ಫ್ಯಾಕ್ಟ್​ಚೆಕ್​ (ಸತ್ಯ ಶೋಧನೆ)ನಲ್ಲಿ ದೃಢಪಟ್ಟಿದೆ.

2019ರ ಜೂನ್​​ನಲ್ಲಿ ಸುಯಜ್ಞ ಕಾಶಿ ಎಂಬುವರು ತಮ್ಮ ಟ್ವಿಟರ್​ ಅಕೌಂಟ್​​ನಲ್ಲಿ ಈ ವಿಡಿಯೊ ಶೇರ್ ಮಾಡಿದ್ದರು. ಅದರ ಕ್ಯಾಪ್ಷನ್​ನಲ್ಲಿ ಅವರು ‘ಸಂಘಮಿತ್ರ ಎಕ್ಸ್​ಪ್ರೆಸ್​ನ ಕೋಚ್​ 1’ ರ ದುಃಸ್ಥಿತಿ ಎಂದೇ ಬರೆದುಕೊಂಡಿದ್ದಾರೆ. ಅದಾದ ಬಳಿಕ 2019ರ ಜುಲೈ 2ರಂದು ಇಂಡಿಯನ್​ ಎಕ್ಸ್​ಪ್ರೆಸ್​ ಈ ವಿಷಯ ವರದಿ ಮಾಡಿತ್ತು. ಇನ್ನೂ ಕೆಲವು ಮಾಧ್ಯಮಗಳೂ ವಿಡಿಯೊ-ಸುದ್ದಿಯನ್ನು ಪಬ್ಲಿಶ್​ ಮಾಡಿದ್ದವು. ಹಾಗೇ, ರೈಲಿನಲ್ಲಿ ಈ ಸಮಸ್ಯೆ ಕಂಡುಬಂದ ಕೆಲವೇ ಹೊತ್ತಲ್ಲಿ, ಅದನ್ನು ದುರಸ್ತಿ ಕೂಡ ಮಾಡಲಾಗಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಿದ್ದವು. ಹೀಗಾಗಿ ಅದು ವಂದೇ ಭಾರತ್​ ರೈಲಿನದ್ದು ಅಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಇಂಡಿಯಾ ಟುಡೆ ಹೇಳಿದೆ.

ಇದನ್ನೂ ಓದಿ: Vande Bharat | ದೇಶದ 6ನೇ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಸಂಚಾರ ಪ್ರಾರಂಭ; ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

Exit mobile version