Site icon Vistara News

ಈ ಗ್ರಾಮದ ಮಹಿಳೆಯರು ಮದುವೆಯಾಗಿ ಮೂರೇ ದಿನಕ್ಕೆ ಓಡಿ ಹೋಗುತ್ತಾರೆ !

ನಾಸಿಕ್‌: ಮಹಾರಾಷ್ಟ್ರದ ನಾಸಿಕ್‌ ಸಮೀಪದ ಈ ಗ್ರಾಮದಲ್ಲಿ ಮದುವೆಯಾಗಿ ದಿನಗಳಲ್ಲೆ ಹೆಂಡತಿ ಓಡಿ ಹೋಗುತ್ತಾಳೆ. ಈ ಮಹಾ ಸಂಕಷ್ಟಕ್ಕೆರ ಕಾರಣ ಹುಡುಕುವುದು ಬಹಳ ಕಷ್ಟವೇನಲ್ಲ. ಏಕೆಂದರೆ ನಾಸಿಕ್‌ನಿಂದ ಸುಮಾರು 90 ಕಿ.ಮೀ. ದೂರದಲ್ಲಿರುವ ಈ ಗ್ರಾಮಕ್ಕೆ ಪ್ರವೇಶಿಸಿದ ಕೂಡಲೆ ಈ ಸಮಸ್ಯೆಗೆ ಕಾರಣ ಸ್ಪಷ್ಟವಾಗಿ ಕಾಣುತ್ತದೆ.
ನೀರು ಧರೆಯ ಜೀವ ದ್ರವ. ಹಾಗೇಯೇ ಜೀವ ದ್ರವ್ಯ. ಆದರೆ ನೀರೆ ಮನುಷ್ಯನಿಗೆ ದೊರಕದಿದ್ದಾಗ ಅವನ ಸ್ಥಿತಿ ಹೇಳ ತೀರದು. ಸುರ್ಗಾನಾ ತಾಲೂಕಿನ 300 ಜನರಿರುವ ಪುಟ್ಟ ಗ್ರಾಮವಾದ ದಂಡಿಚಿ ಬಾರಿಯಲ್ಲಿ ಇರುವುದೂ ಇದೇ ಸಮಸ್ಯೆ. ನೀರಿನ ಸಮಸ್ಯೆಯಿಂದಾಗಿ ಇಲ್ಲಿನ ಯುವಕರಿಗೆ ವೈವಾಹಿಕ ಜೀವನ ಕನಸಾಗಿಯೇ ಉಳಿದು ಬಿಟ್ಟಿದೆ. ನೀರಿನ ಅಭಾವದಿಂದ ಅಲ್ಲಿನ ಹೆಣ್ಣು ಮಕ್ಕಳು ಸೋತು ಸುಣ್ಣಾಗಿದ್ದಾರೆ.

ನೀರಿನ ಅಭಾವದ ಕಾರಣದಿಂದಾಗಿ ಅಲ್ಲಿಗೆ ಆಗಮಿಸುವಂತಹ ನವವಧುಗಳು ಹಳ್ಳಿಯಲ್ಲಿ ಇರಲು ಹಿಂಜರಿದು, ಪುನಃ ತವರು ಮನೆಗೆ ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಳ್ಳಿಯ ಸ್ಥಳೀಯರಲ್ಲಿ ಒಬ್ಬರಾದ ಗೋವಿಂದ್‌ ವಾಘಮೇರೆ ಮಾತನಾಡಿ, ʼ2014 ರಲ್ಲಿ ನವವಧು ಮದುವೆ ಆದ ಎರಡೇ ದಿನಕ್ಕೆ ತವರು ಮನೆಗೆ ಹೋದಳು. ನೀರು ತರಲು ಬೆಟ್ಟವನ್ನು ಹತ್ತಿ ನಡೆಯಬೇಕು. ಬೆಟ್ಟದ ಬುಡಕ್ಕೆ ಮಹಿಳೆಯರೊಂದಿಗೆ ತಲುಪಿದಾಗ, ನೀರು ತರುವುದು ಬಹಳ ಸವಾಲಾಗಿತ್ತು. ಇತರ ಮಹಿಳೆಯರು ಇದನ್ನು ಗಮನಿಸಿ, ಅನುಭವಿಸಿ ಹಿಂದೆ ಸರಿದರು ಮತ್ತು ತವರು ಮನೆಗೆ ತೆರಳಿದರು ʼ.
ಅಷ್ಟೇ ಅಲ್ಲದೇ ಪರಿಸ್ಥಿತಿ ಹೇಗೆ ಇರುತ್ತಿತ್ತು ಎಂದರೆ, ಪ್ರತೀ ಬೇಸಿಗೆಯ ಮಾರ್ಚ್‌ ಮತ್ತು ಜೂನ್‌ ತಿಂಗಳಿನಲ್ಲಿ ದೂರದಿಂದ ನೀರು ತರಲು ಮಹಿಳೆಯರು ಸಾಕಷ್ಟು ಕಷ್ಟವನ್ನು ಅನುಭವಿಸುತ್ತಿದ್ದರು. ಅಷ್ಟೇ ಅಲ್ಲದೇ ಬಂಡೆಯ ಮೇಲಿದ್ದ ಗುಂಡಿಯಲ್ಲಿ ನಿಂತಿರುತ್ತಿದ್ದ ನೀರು ತುಂಬಲು ಗಂಟೆ ಗಟ್ಟಲೇ ಕಾಯುವಂತಹ ಸ್ಥಿತಿ ಒದಗಿ ಬರುತ್ತಿತ್ತು. ಪ್ರತೀ ಬಾರಿ ನೀರು ತುಂಬಿಸುವಾಗ ಚಿಕ್ಕ ಬೌಲಿನ ಮೂಲಕ ಒಂದೊಂದೆ ಬೌಲ್‌ ನೀರನ್ನು ಬಿಂದಿಗೆಗೆ ತುಂಬಿಸಿಕೊಳ್ಳುವುದು ಕಷ್ಟಕರ ಆಗಿತ್ತು. ಎಲ್ಲಾ ಮಹಿಳೆಯರು ಈ ರೀತಿ ನೀರನ್ನು ತುಂಬಿಸುವ ಹೊತ್ತಿಗೆಗೆ ಬಳಲಿ ಹೋಗುತ್ತಿದ್ದರು.

ಬೆಳಗ್ಗೆಯಿಂದ ನೀರು ತುಂಬುವ ಕೆಲಸ

ಬೆಳಿಗ್ಗೆ 4 ಗಂಟೆಗೆ ನೀರು ತರಲು ದಿನಚರಿ ಶುರುವಾದರೆ, ದಿನದಲ್ಲಿ ಎರಡು ಬಾರಿ 9 ಕಿ.ಮೀ ದೂರದವರೆಗೂ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಸರಿಸುಮಾರು 40 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿರುಸಿನ ಈ ತಾಪಮಾನದಲ್ಲಿ ಆದಷ್ಟು ಸೂರ್ಯ ಮುಳುಗಿದ ಮೇಲೆಯೆ ನೀರು ತರಲು ಮುಂದಾಗುತ್ತಿದ್ದರು.
ಒಂದು ಬಿಂದಿಗೆ ನೀರು ತುಂಬಲು ಸರಿ ಸುಮಾರು 3 ತಾಸು ಸಮಯ ಬೇಕಾಗುತ್ತದೆ ಎಂದು ಲಕ್ಷ್ಮೀ ಬಾಯಿ ಅಳಲನ್ನು ತೋರಿಕೊಳ್ಳುತ್ತಾರೆ.
ಹಾದಿಯಲ್ಲಿ ಸಿಗುವ ಕಾಡು ಪ್ರಾಣಿಗಳ ಭಯದಲ್ಲೂ ಕೂಡ, ಒಂದು ಕೈಯಲ್ಲಿ ಬ್ಯಾಟರಿ, ತಲೆಯಲ್ಲಿ ಎರಡು ಬಿಂದಿಗೆಯನ್ನು ಬ್ಯಾಲೆನ್ಸ್‌ ಮಾಡಿ, ಕತ್ತಲಾದರೂ ನೀರು ತರುವ ಮಹಿಳೆಯರ ಪಾಡು ಎಂತವರನ್ನೂ ಬೆಚ್ಚಿ ಬೀಲಿಸುವಂತಿದೆ.

ಇಷ್ಟರವರೆಗೂ ನಾವು ಎದುರಿಸುತ್ತಿರುವ ನೀರಿನ ಸಮಸ್ಯೆಗೆ ಅಧಿಕಾರಿಗಳು ಇಲ್ಲಿ ಭೇಟಿ ನೀಡಿ ಯಾವುದೇ ಪರಿಶೀಲನೆ ಮಾಡಿಲ್ಲ. ಪತ್ರಕರ್ತರೂ ಆಗಾಗ ಬಂದು ಪೋಟೋವನ್ನು ತೆಗೆದುಕೊಂಡು ಹೋಗುತ್ತಾರೆಯೇ ವಿನಃ ಯಾವುದೇ ಪ್ರಯೋಜನವಾಗಿಲ್ಲ. ಪ್ರತೀ ಮನೆಗಳಿಗೆ 2 ಬಕೇಟ್‌ ನೀರನ್ನು ಪೂರೈಕೆ ಮಾಡಿ ಟ್ಯಾಂಕರ್‌ ತರಿಸುತ್ತೇನೆ, ಈ ಹಿಂದೆ ಕೂಡ 2008 -2009 ರಲ್ಲಿ ಮೂರು ವಿವಾಹಿತ ಹೆಣ್ಣು ಮಕ್ಕಳು ನೀರಿನ ಸಮಸ್ಯೆಯಿಂದ ಬೇಸತ್ತು ಊರು ಬಿಟ್ಟು ಹೋಗಿದ್ದಾರೆ, ಮುಂದೆ ಈ ತರಹದ ಸನ್ನೀವೇಶ ಎದುರಾಗದೇ ಇರಲು ಕ್ರಮ ಕೈಗೊಳ್ಳಬೇಕೆಂದು ಸರಪಂಚ್‌ ಜೈರಾಮ್‌ ವಾಘಮೇರ್‌ ಹೇಳಿದರು. ಅಷ್ಟೇ ಅಲ್ಲದೇ ನಮ್ಮ ಹಳ್ಳಿ ನೀರಿನ ಸಮಸ್ಯೆಯ ಕಾರಣದಿಂದಾಗಿ ಪಾಲಕರು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಡಲು ಹಿಂಜರಿಯುತ್ತಿದ್ದಾರೆ ಎಂದು ಅಳಲು ತೋರಿಕೊಂಡುರು.
ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳಬೇಕು. ಮತ್ತು ಪರಿಹಾರ ಒದಗಿಸಿಕೊಡಬೇಕು ಎಂಬುದೇ ಗ್ರಾಮಸ್ಥರ ಅಭಿಲಾಷೆ.

Exit mobile version