Site icon Vistara News

Wayanad Landslide: 144 ಸೈನಿಕರು 31 ಗಂಟೆಯೊಳಗೆ 190 ಅಡಿ ಉದ್ದದ ಸೇತುವೆ ನಿರ್ಮಿಸಿದ್ದು ಹೇಗೆ?

Wayanad Landslide

ವಯನಾಡು: ಪ್ರವಾಹ ಪೀಡಿತ ವಯನಾಡಿನಲ್ಲಿ (Wayanad Landslide) ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ಸೇನೆ (Indian army) 31 ಗಂಟೆಗಳ ಅವಧಿಯಲ್ಲಿ ಯಾವುದೇ ವಿರಾಮವಿಲ್ಲದೆ 190 ಅಡಿ ಉದ್ದದ ಸೇತುವೆಯನ್ನು (Bailey bridge) ನಿರ್ಮಿಸಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ವಯನಾಡಿನ ಕುಗ್ರಾಮವಾದ ಚೂರಲ್ಮಲಾ ಮತ್ತು ಮುಂಡಕ್ಕೈ ಭೂಕುಸಿತದಿಂದಾಗಿ ಧ್ವಂಸಗೊಂಡಿದ್ದು, ಇಲ್ಲಿ ಫ್ಯಾಬ್ರಿಕೇಟೆಡ್ ಟ್ರಸ್ ಬೈಲಿ ಸೇತುವೆಯನ್ನು ನಿರ್ಮಿಸಲಾಗಿದೆ.

ಬೆಟ್ಟಗಳಿಂದ ಪ್ರಬಲ ಬಂಡೆಗಳು ಉರುಳಿ ಬಿದ್ದ ಪರಿಣಾಮ ಇಲ್ಲಿದ್ದ 100 ಅಡಿ ಉದ್ದದ ಕಾಂಕ್ರೀಟ್ ಸೇತುವೆ ಸಂಪೂರ್ಣ ಧ್ವಂಸಗೊಂಡಿದೆ. ನಿರ್ಮಾಣಗೊಂಡ ಹೊಸ ಸೇತುವೆ ಮೇಲೆ ಸೈನ್ಯವು ಮೊದಲು ಆಂಬ್ಯುಲೆನ್ಸ್ ಅನ್ನು ಹಾದುಹೋಗಲು ಅವಕಾಶ ಮಾಡಿಕೊಟ್ಟಿತು. ಬಳಿಕ ಮಿಲಿಟರಿ ಸೇವೆಯನ್ನು ಒದಗಿಸಲು ಕಳುಹಿಸಿತ್ತು.

3 ಮೀಟರ್ ಅಗಲದ ಸೇತುವೆಯ ಸಾಮರ್ಥ್ಯವನ್ನು 24 ಟನ್‌ಗಳನ್ನು ಹೊತ್ತೊಯ್ಯಬಲ್ಲ ಟ್ರಕ್ ಮೂಲಕ ಪರೀಕ್ಷೆ ನಡೆಸಲಾಯಿತು. ಈ ಸೇತುವೆ ನಿರ್ಮಾಣದಿಂದ ಮುಂಡಕ್ಕೈನಲ್ಲಿ ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಬಹುದು ಎಂದು ಕರ್ನಾಟಕ ಮತ್ತು ಕೇರಳ ಉಪ ಪ್ರದೇಶ ಕಮಾಂಡಿಂಗ್ ಅಧಿಕಾರಿ ಮೇಜರ್ ಜನರಲ್ ವಿ.ಟಿ. ಮ್ಯಾಥ್ಯೂ ತಿಳಿಸಿದ್ದಾರೆ.

Wayanad Landslide


ಸೇತುವೆಯ ಅಗಲವು ಮಣ್ಣು ತೆಗೆಯುವ ಯಂತ್ರ, ಅಗೆಯುವ ಯಂತ್ರಗಳು, ಆಂಬ್ಯುಲೆನ್ಸ್‌ ಮತ್ತು ಜೀಪ್‌, ಟ್ರಕ್‌ಗಳು ಸಾಗಲು ಸಾಕಷ್ಟು ಉತ್ತಮವಾಗಿದೆ. ಮುಂಡಕೈಗೆ ಇಲ್ಲಿಯವರೆಗೆ ಕೇವಲ ಟೀ ಎಸ್ಟೇಟ್‌ನಲ್ಲಿದ್ದ ಆಫ್ ರೋಡ್ ಜೀಪುಗಳನ್ನು ಮಾತ್ರ ಕಳುಹಿಸಲು ಸಾಧ್ಯವಾಗುತ್ತಿತ್ತು ಎಂದು ಅಧಿಕಾರಿ ತಿಳಿಸಿದರು. ಮಂಡಕೈ ಪ್ರದೇಶದಲ್ಲಿ 400 ಮನೆಗಳಿದ್ದು, ಭೂಕುಸಿತದಿಂದ 30 ಮಂದಿ ಮಾತ್ರ ಬದುಕುಳಿದಿದ್ದಾರೆ. ಅಲ್ಲಿ ಇನ್ನೂ ಅನೇಕ ಜನರಿದ್ದು, ಕಾಣೆಯಾಗಿದ್ದಾರೆ ಎಂದು ಅವರು ಹೇಳಿದರು.

ಸೇತುವೆ ಹೇಗೆ ನಿರ್ಮಿಸಲಾಯಿತು?

ಜುಲೈ 30ರಂದು ಚೂರಲ್ಮಲಾದಲ್ಲಿ ಬೈಲಿ ಸೇತುವೆಗಾಗಿ 20 ಟ್ರಕ್‌ಗಳಲ್ಲಿ ಬೆಂಗಳೂರಿನಿಂದ ಪ್ರತಿ 10 ಅಡಿ ಉದ್ದದ ಪ್ಯಾನಲ್‌ಗಳನ್ನು ಸಾಗಿಸಲಾಗಿತ್ತು. 190 ಅಡಿ ಉದ್ದದ ಸೇತುವೆ ನಿರ್ಮಿಸಲು ಒಟ್ಟು 19 ಉಕ್ಕಿನ ಫಲಕಗಳನ್ನು ಬಳಸಲಾಗಿದೆ. ಇದು ಒಂದೇ ಪಿಯರ್‌ನಿಂದ ಆಧರಿತವಾಗಿದ ಎಂದು ಮೇಜರ್ ಜನರಲ್ ಮ್ಯಾಥ್ಯೂ ಹೇಳಿದರು.

Wayanad Landslide


ಮಂಗಳವಾರ ಸಂಜೆಯೇ ಮದ್ರಾಸ್ ಎಂಜಿನಿಯರ್ ಗ್ರೂಪ್‌ನ ಅಧಿಕಾರಿಗಳು, ಸೇನೆಯ ಎಂಜಿನಿಯರಿಂಗ್ ಟಾಸ್ಕ್ ಫೋರ್ಸ್ ಸ್ಥಳಕ್ಕೆ ಆಗಮಿಸಿತ್ತು. ಬುಧವಾರ ಬೆಳಗ್ಗೆ 9 ಗಂಟೆಗೆ ಸೀಮಿತ ಸ್ಥಳಾವಕಾಶದಲ್ಲಿ ಸೇತುವೆ ನಿರ್ಮಾಣ ಕಾರ್ಯವನ್ನು 144 ಅಧಿಕಾರಿಗಳು ಪ್ರಾರಂಭಿಸಿದರು. ಒಂದು ಟ್ರಕ್‌ಗೆ ಮಾತ್ರ ಸ್ಥಳಾವಕಾಶವಿತ್ತು. ಪ್ರತಿಕೂಲ ಹವಾಮಾನ ಪರಿಸ್ಥಿತಿ, ಸಾಕಷ್ಟು ಸ್ಥಳಾವಕಾಶದ ಕೊರತೆಯಿಂದ ಕಾಮಗಾರಿ ವಿಳಂಬವಾಯಿತು. ಇವೆಲ್ಲದರ ಹೊರತಾಗಿಯೂ ಅಧಿಕಾರಿಗಳು ರಾತ್ರಿಯಿಡೀ ಬಿಡುವಿಲ್ಲದೆ ದುಡಿದು ಆಗಸ್ಟ್ 1ರಂದು ಸಂಜೆ 6 ಗಂಟೆಗೆ ಸೇತುವೆಯನ್ನು ಸಿದ್ಧಗೊಳಿಸಿದರು ಎಂದು ಅವರು ತಿಳಿಸಿದರು.



ಇದನ್ನೂ ಓದಿ: Wayanad Landslide: ವಯನಾಡು ಹಿಂದೆ ಹೇಗಿತ್ತು? ಈಗ ಹೇಗಿದೆ? ದುರಂತ ಸ್ಥಳದ ದೃಶ್ಯ ಸೆರೆ ಹಿಡಿದ ಇಸ್ರೋ

ಬೈಲಿ ಸೇತುವೆಗೆ ಸಮಾನಾಂತರವಾದ ಕಾಲುಸೇತುವೆ ನಿರ್ಮಾಣ ಕಾರ್ಯವನ್ನು ಗುರುವಾರ ಮುಂಜಾನೆ 3 ಗಂಟೆ ಸುಮಾರಿಗೆ ಸೇನೆಯ ಸಿಬ್ಬಂದಿ ಪ್ರಾರಂಭಿಸಿದರು. 100 ಅಡಿ ಉದ್ದದ ಈ ಸೇತುವೆಯನ್ನು ಸಂಜೆ 6 ಗಂಟೆಗೆ ಪೂರ್ಣಗೊಳಿಸಿದ್ದೇವೆ ಎಂದರು. ಈ ಎರಡು ಸೇತುವೆಗಳನ್ನು ಸರ್ಕಾರ ಬಯಸಿದಷ್ಟು ಕಾಲ ಇರಿಸಿಕೊಳ್ಳಬಹುದು. ಈ ಹಿಂದೆ ಶಬರಿಮಲೆಯಲ್ಲಿ ನಿರ್ಮಿಸಿರುವ ಬೈಲಿ ಸೇತುವೆ ಇನ್ನೂ ಇದೆ ಎಂದು ಅವರು ತಿಳಿಸಿದರು.

Exit mobile version