Site icon Vistara News

ಖಾಲಿ ಇದೆ ವಯಾನಾಡ್ ಲೋಕಸಭಾ ಕ್ಷೇತ್ರ; ರಾಹುಲ್ ಗಾಂಧಿ ಅನರ್ಹರಾದ ಬೆನ್ನಲ್ಲೇ ವೆಬ್​ಸೈಟ್​​ನಲ್ಲಿ ಪ್ರಕಟ​

Wayanad Lok Sabha seat declared vacant After Its MP Rahul Gandhi declared vacant

#image_title

ನವ ದೆಹಲಿ: ‘ಎಲ್ಲ ಕಳ್ಳರ ಉಪನಾಮಗಳೂ ಮೋದಿ ಎಂದೇ ಶುರುವಾಗುತ್ತವೆ’ ಎಂದು 2019ರಲ್ಲಿ ನೀಡಿದ್ದ ಹೇಳಿಕೆ ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನು ದೋಷಿ ಎಂದು ಪರಿಗಣಿಸಿ ಸೂರತ್​ ಕೋರ್ಟ್​ ತೀರ್ಪು ನೀಡಿ, 2 ವರ್ಷ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ, ಅವರ ಲೋಕಸಭಾ ಸದಸ್ಯತ್ವವೂ ಅನರ್ಹಗೊಂಡಿದೆ. ಹೀಗಾಗಿ ಅವರು ಸಂಸದನಾಗಿದ್ದ ವಯಾನಾಡು ಲೋಕಸಭಾ ಕ್ಷೇತ್ರ ಖಾಲಿ ಇದೆ (Rahul Gandhi Disqualified) ಎಂದು ಘೋಷಿಸಲಾಗಿದೆ.

ಲೋಕಸಭೆಯ ವೆಬ್​ಸೈಟ್​​ನಲ್ಲಿ ಖಾಲಿ ಇರುವ ಲೋಕಸಭಾ ಕ್ಷೇತ್ರಗಳ ಪಟ್ಟಿ ನೀಡಲಾಗಿದ್ದು, ಅದರಲ್ಲಿ ಪಂಜಾಬ್​​ನ ಜಲಂಧರ್​, ಲಕ್ಷದ್ವೀಪ ಮತ್ತು ಕೇರಳದ ವಯಾನಾಡು ಸೇರಿವೆ. ಜಲಂಧರ್​​ನಲ್ಲಿ ಸಂಸದರಾಗಿದ್ದ ಸಂತೋಖ್​ ಸಿಂಗ್ ಚೌಧರಿಯವರು ಇತ್ತೀಚೆಗೆ ನಿಧನರಾಗಿದ್ದಾರೆ. ಭಾರತ್​ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅವರು, ಹೃದಯಾಘಾತದಿಂದ ಮೃತಪಟ್ಟಿದ್ದರು. ಲಕ್ಷದ್ವೀಪದ ಸಂಸದನಾಗಿದ್ದ ಎನ್​​ಸಿಪಿ ನಾಯಕ ಮೊಹಮ್ಮದ್​ ಫೈಜಲ್​ ಪಿಪಿ ಅವರು, 2009ರಲ್ಲಿ ನಡೆದಿದ್ದ ಹತ್ಯೆ ಪ್ರಕರಣವೊಂದರಲ್ಲಿ ಅಪರಾಧಿ ಎಂದು ಸಾಬೀತಾಗಿ, 10ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಜನವರಿಯಲ್ಲಿ ಈ ತೀರ್ಪು ಹೊರಬಿದ್ದ ಬೆನ್ನಲ್ಲೇ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಗಿತ್ತು. ಈಗ ರಾಹುಲ್ ಗಾಂಧಿ ಕೂಡ ಅನರ್ಹರಾಗಿದ್ದು, ಅವರ ಕ್ಷೇತ್ರ ಖಾಲಿ ಇದೆ..

ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ಅನರ್ಹತೆ ವಿರುದ್ಧ ಸಿಡಿದೆದ್ದ ಕಾಂಗ್ರೆಸ್​; ದೇಶಾದ್ಯಂತ ಆಂದೋಲನ, ವಯಾನಾಡ್​​ನಲ್ಲಿ ಕರಾಳ ದಿನ

ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ 2014ರಲ್ಲಿ ಗೆದ್ದಿದ್ದ ರಾಹುಲ್ ಗಾಂಧಿ 2019ರಲ್ಲಿ ಅಮೇಠಿ ಮತ್ತು ವಯಾನಾಡು ಎರಡೂ ಕಡೆ ಸ್ಪರ್ಧಿಸಿದ್ದರು. ಅಮೇಠಿಯಲ್ಲಿ ಬಿಜೆಪಿ ನಾಯಕಿ ಸ್ಮೃತಿ ಇರಾನಿ ವಿರುದ್ಧ ಸೋತು, ವಯಾನಾಡಲ್ಲಿ ಗೆದ್ದುಕೊಂಡಿದ್ದರು. ಆದರೆ ಅಲ್ಲಿಯೂ ಅವರು ಸಂಸದನಾಗಿ ಐದು ವರ್ಷ ಪೂರೈಸಲು ಆಗಲಿಲ್ಲ. ಸದ್ಯ ಅವರಿಗೆ ಸೂರತ್​ ಕೋರ್ಟ್​ನ ತೀರ್ಪಿನ ವಿರುದ್ಧ ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು 30 ದಿನ ಕಾಲಾವಕಾಶ ಇದೆ. ಅಷ್ಟರಲ್ಲಿ ಮನವಿ ಸಲ್ಲಿಸಿ ಅವರು ಶಿಕ್ಷೆಯನ್ನು ರದ್ದುಗೊಳಿಸಿಕೊಳ್ಳಬೇಕು ಇಲ್ಲವೆ, ಸೂರತ್​ ಕೋರ್ಟ್ ಆದೇಶಕ್ಕೆ ತಡೆ ತರಬೇಕು. 30 ದಿನಗಳಲ್ಲಿ ಇದಾಗದೆ ಇದ್ದರೆ, ಅವರು ಎರಡು ವರ್ಷಗಳ ಜೈಲು ಶಿಕ್ಷೆ ಅವಧಿ ಸೇರಿ ಒಟ್ಟು 8ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. 2024 ಅಷ್ಟೇ ಅಲ್ಲ, 2029ರ ಲೋಕಸಭಾ ಚುನಾವಣೆಯಿಂದಲೂ ರಾಹುಲ್ ಗಾಂಧಿ ಹೊರಗೆ ಉಳಿಯಬೇಕಾಗುತ್ತದೆ.

Exit mobile version