ನವ ದೆಹಲಿ: ಯುವಕನೊಬ್ಬ, ಯುವತಿಗೆ ಥಳಿಸಿ ಆಕೆಯನ್ನು ಬಲವಂತದಿಂದ ಕಾರಿನೊಳಕ್ಕೆ (ಕ್ಯಾಬ್) ತಳ್ಳಿ ಕುಳ್ಳರಿಸಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ (Viral Video) ಆಗಿತ್ತು. ಈ ಘಟನೆ ದೆಹಲಿಯ ಮಂಗೋಲ್ಪುರಿ ಫ್ಲೈಓವರ್ ಬಳಿ ನಡೆದಿದ್ದಾಗಿ ವರದಿಯಾಗಿತ್ತು. ವಿಡಿಯೊದಲ್ಲಿ ನಡೆದ ಘಟನೆ ಬಗ್ಗೆ ಈಗ ಯುವತಿಯೇ ಸ್ಪಷ್ಟನೆ ನೀಡಿದ್ದು, ‘ಆತ ನನ್ನ ಮದುವೆಯಾಗುವ ಹುಡುಗ. ಏನೋ ಸ್ವಲ್ಪ ಜಗಳವಾಗಿತ್ತು. ಈಗ ನಮ್ಮಿಬ್ಬರ ಮಧ್ಯೆ ರಾಜಿಯಾಗಿದೆ. ಏನೇ ಆಗಲಿ, ದೆಹಲಿ ಪೊಲೀಸರು ರಕ್ಷಣಾತ್ಮಕವಾಗಿ ವರ್ತಿಸಿದ್ದಾರೆ. ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾಳೆ.
ಮಂಗೋಲ್ಪುರಿ ಫ್ಲೈಓವರ್ನಲ್ಲಿ ಹಲವು ವಾಹನಗಳು ಸಂಚಾರ ಮಾಡುತ್ತಿದ್ದವು. ಅಲ್ಲೊಂದು ಕಾರು ನಿಂತಿತ್ತು. ಅದು ಹಳದಿ ನಂಬರ್ ಪ್ಲೇಟ್ ಹೊಂದಿದ್ದರಿಂದ ಕ್ಯಾಬ್ ಎಂದು ಅಂದಾಜಿಸಲಾಗಿತ್ತು. ಯುವಕನೊಬ್ಬ ಯುವತಿಯನ್ನು ಎಳೆದುಕೊಂಡು ಬಂದು, ಕಾರಿನೊಳಗೆ ನೂಕಿದ್ದ. ಅಷ್ಟಾದ ಮೇಲೆ ತಾನೂ ಕಾರಿನೊಳಕ್ಕೆ ಕುಳಿತುಕೊಂಡು ಆಕೆಗೆ ಹೊಡೆದಿದ್ದ. ಅಲ್ಲಿ ಇನ್ನೊಬ್ಬ ಹುಡುಗನೂ ಇದ್ದ. ಇವಿಷ್ಟನ್ನು ವಿಡಿಯೊದಲ್ಲಿ ನೋಡಬಹುದು.
#SOS | Just Now at Mangolpuri Flyover towards Peeragarhi Chowk.@DelhiPolice @LtGovDelhi @dcpouter @DCWDelhi @dtptraffic pic.twitter.com/ukmVc7Tu1v
— Office of Vishnu Joshi (@thevishnujoshi) March 18, 2023
ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿದ್ದರು. ಹಾಗೇ, ಆ ಕಾರು ಗುರುಗ್ರಾಮ್ನ ರತನ್ ವಿಹಾರಕ್ಕೆ ಸೇರಿದ್ದು ಎಂದು ನಂಬರ್ ಪ್ಲೇಟ್ ಮೂಲಕ ಪತ್ತೆ ಹಚ್ಚಿದ್ದ ದೆಹಲಿ ಪೊಲೀಸರು, ಕ್ಯಾಬ್ ಡ್ರೈವರ್ ವಿಚಾರಣೆ ಮಾಡಲು ಅಲ್ಲಿಗೆ ತಂಡವನ್ನು ಕಳಿಸಿದ್ದರು. ವಾಹನ ಮತ್ತು ವಾಹನ ಚಾಲಕನನ್ನು ಟ್ರೇಸ್ ಮಾಡಿದ್ದರು. ಈ ಇಬ್ಬರು ಹುಡುಗರು ಮತ್ತು ಹುಡುಗಿ ದೆಹಲಿಯ ರೋಹಿಣಿಯಿಂದ ವಿಕಾಸ್ಪುರಿಗೆ ಊಬರ್ ಕ್ಯಾಬ್ನಲ್ಲಿ ಹೋಗುತ್ತಿದ್ದರು ಎಂಬುದು ಗೊತ್ತಾಗಿದೆ. ಮಾರ್ಗಮಧ್ಯೆ ಜಗಳ ಏರ್ಪಟ್ಟಿದೆ. ಆಗ ಹುಡುಗಿ ಅಲ್ಲಿಂದ ಒಬ್ಬಂಟಿಯಾಗಿ ಹೋಗಲು ಯತ್ನಿಸಿದ್ದಾಳೆ. ಅಷ್ಟಕ್ಕೇ ಸಿಟ್ಟಾದ ಆ ಹುಡುಗ ಅಷ್ಟು ಕ್ರೂರವಾಗಿ ವರ್ತಿಸಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Viral Video: ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ ರೈನಾ-ಪಠಾಣ್ ಜೋಡಿ; ವಿಡಿಯೊ ವೈರಲ್
ವಿಡಿಯೊ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರಿಂದ ಸಾಕಷ್ಟು ಟೀಕೆಗಳು ಹರಿದುಬಂದಿದ್ದವು. ರಾಷ್ಟ್ರರಾಜಧಾನಿಯಲ್ಲಿ ಮಹಿಳೆಯರಿಗೆ ಸುರಕ್ಷತೆಯೇ ಇಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು. ಯುವತಿಯನ್ನು ಆತ ಏನು ಮಾಡಿದ? ಎಂಬಿತ್ಯಾದಿ ಪ್ರಶ್ನೆಗಳೂ ಉದ್ಭವ ಆಗಿದ್ದವು. ಅದರಲ್ಲೂ ರಾಷ್ಟ್ರರಾಜಧಾನಿಯಿಂದ ಇತ್ತೀಚೆಗೆ ಮಹಿಳೆಯರ ದೇಹ ತುಂಡುತುಂಡಾದ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಆತಂಕ ಎದುರಾಗಿತ್ತು.