Site icon Vistara News

ಅಸ್ಸಾಂನಲ್ಲಿ ಮದರಸಾಗಳ ಸಂಖ್ಯೆ ಕಡಿಮೆ ಮಾಡುವುದಾಗಿ ತಿಳಿಸಿದ ಸಿಎಂ ಹಿಮಂತ್​ ಬಿಸ್ವಾ ಶರ್ಮಾ; ಸಾಮಾನ್ಯ ಶಿಕ್ಷಣ ನೀಡಲು ನಿರ್ಧಾರ

We Will reduce madarsas Says Assam Chief Minister Himanta Biswa Sarma

ಹಿಮಂತ್​ ಬಿಸ್ವಾ ಶರ್ಮಾ

ಗುವಾಹಟಿ: ಜಮ್ಮು-ಕಾಶ್ಮೀರ ಬಿಟ್ಟರೆ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಜ್ಯ ಅಸ್ಸಾಂ (Assam). ಅಲ್ಲಿನ 3.12 ಕೋಟಿ ಜನಸಂಖ್ಯೆಯಲ್ಲಿ ಶೇ.34ರಷ್ಟು ಮುಸ್ಲಿಮರೇ ಇದ್ದಾರೆ. ಅಲ್ಲಿ ಮದರಸಾಗಳ ಸಂಖ್ಯೆಯೂ ಸಾವಿರದ ಮೇಲ್ಪಟ್ಟೇ ಇದೆ. ಈಗ ಅಸ್ಸಾಂ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ (Himanta Biswa Sarma) ಒಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ರಾಜ್ಯದಲ್ಲಿರುವ ಮದರಸಾಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಮ್ಮ ಸರ್ಕಾರ ತೀರ್ಮಾನಿಸಿದ್ದಾಗಿ ಗುವಾಹಟಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಮದರಸಾಗಳಿಗೂ ನೋಂದಣಿ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಅಸ್ಸಾಂನಲ್ಲಿ ಸರ್ಕಾರಿ ಅನುದಾನಿತ ಮದರಸಾಗಳನ್ನೆಲ್ಲ ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸುವ ಬಿಲ್​ 2021ರಲ್ಲಿ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟಿತ್ತು. ಅದನ್ನು ವಿರೋಧಿಸಿ ಕೆಲವರು ಗುವಾಹಟಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್​ ಸರ್ಕಾರದ ನಿರ್ಧಾರವನ್ನೇ ಎತ್ತಿಹಿಡಿದಿತ್ತು. ಮತ್ತೆ ಅರ್ಜಿದಾರರು ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ದರು. ಹೀಗೆ ಸರ್ಕಾರಿ ಅನುದಾನಿತ ಮದರಸಾಗಳನ್ನೆಲ್ಲ ಮುಚ್ಚುವ ವಿಷಯಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್​ 2022ರ ನವೆಂಬರ್​ನಲ್ಲಿ ಅಸ್ಸಾಂ ಸರ್ಕಾರಕ್ಕೆ ನೋಟಿಸ್ ಕೊಟ್ಟು, ಉತ್ತರವನ್ನೂ ಕೇಳಿದೆ. ಈ ಮಧ್ಯೆ ಹಿಮಂತಾ ಬಿಸ್ವಾ ಶರ್ಮಾ ಮತ್ತೆ ಈ ವಿಷಯ ಪ್ರಸ್ತಾಪಿಸಿ, ಮದರಸಾ ಸಂಖ್ಯೆ ಕಡಿಮೆ ಮಾಡುವ ಮತ್ತು ಮದರಸಾಗಳಲ್ಲಿ ಸಾಮಾನ್ಯ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸುವ ಸಂಬಂಧ ಅಲ್ಪಸಂಖ್ಯಾತ ಮುಖಂಡರ ಜತೆ ಸಮಗ್ರ ಚರ್ಚೆ ನಡೆಸುತ್ತಿದ್ದೇವೆ. ಈ ವಿಚಾರದಲ್ಲಿ ಅವರೂ ನಮಗೆ ಸಹಾಯ ಮಾಡಲು ಒಪ್ಪಿದ್ದಾರೆ. ಹಾಗೇ, ಸಮೀಕ್ಷೆಯನ್ನೂ ನಡೆಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Assam CM Himanta Biswa Sarma | ಅಸ್ಸಾಮ್ ಸಿಎಂ ಹಿಮಂತ್ ಬಿಸ್ವಾ ಶರ್ಮಾಗೆ ಜೆಡ್ ಪ್ಲಸ್ ಸೆಕ್ಯುರಿಟಿ!

ಅಸ್ಸಾಂನಲ್ಲಿ ಇತ್ತೀಚೆಗೆ ಹಲವು ಉಗ್ರ ಘಟಕಗಳ ಮೇಲೆ ಭದ್ರತಾ ಸಿಬ್ಬಂದಿ ದಾಳಿ ನಡೆಸಿದ್ದರು. ಈ ಬಗ್ಗೆ ಇತ್ತೀಚೆಗಷ್ಟೇ ಮಾಹಿತಿ ನೀಡಿದ್ದ ಅಸ್ಸಾಂ ಡಿಜಿಪಿ ಭಾಸ್ಕರ್ ಜ್ಯೋತಿ ಮಹಾಂತಾ ‘2022ರಲ್ಲಿ ಅಸ್ಸಾಂನಲ್ಲಿ ಬಾಂಗ್ಲಾದೇಶ ಮೂಲದ ಉಗ್ರ ಸಂಘಟನೆ ಅನ್ಸಾರುಲ್ ಬಾಂಗ್ಲಾ ತಂಡ (ABT) ಮತ್ತು ಅಲ್​ ಖೈದಾ ಭಾರತೀಯ ಉಪಖಂಡ (AQIS) ಭಯೋತ್ಪಾದಕ ಸಂಘಟನೆಗಳ ಒಟ್ಟು 9 ಘಟಕಗಳನ್ನು ಭೇದಿಸಲಾಗಿದೆ. ಈ ಎಲ್ಲ ಕೇಸ್​​ನಲ್ಲೂ ಒಂದು ಸಾಮಾನ್ಯ ಸಂಗತಿ ಕಂಡುಬಂದಿದ್ದೇನೆಂದರೆ, ಇವರೆಲ್ಲ ಮುಸ್ಲಿಂ ಯುವಕರಲ್ಲಿ ಪ್ರತ್ಯೇಕತೆ, ಭಯೋತ್ಪಾದಕತೆಯನ್ನು ಬಿತ್ತಲು ಮದರಸಾ, ಮಸೀದಿಗಳನ್ನೇ ಬಳಸಿಕೊಳ್ಳುತ್ತಿದ್ದರು. ಅದರಲ್ಲೂ ಚಿಕ್ಕಚಿಕ್ಕ ಮದರಸಾಗಳಲ್ಲಿ ಉಗ್ರ ಮುಖಂಡರ ಬೋಧನೆ ನಡೆಯುತ್ತಿತ್ತು’ ಎಂದು ವಿಚಾರವನ್ನು ತಿಳಿಸಿದ್ದರು. ಅಷ್ಟೇ ಅಲ್ಲ, ‘ಸುಮಾರು 100 ಚಿಕ್ಕಚಿಕ್ಕ ಮದರಸಾಗಳನ್ನು ದೊಡ್ಡ ಮದರಸಾಗಳೊಂದಿಗೆ ವಿಲೀನಗೊಳಿಸುವ ಚರ್ಚೆಯೂ ಸರ್ಕಾರ ಮತ್ತು ಅಲ್ಪಸಂಖ್ಯಾತರ ನಡುವೆ ನಡೆಯುತ್ತಿದೆ’ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಹಿಮಂತ್​ ಬಿಸ್ವಾ ಶರ್ಮಾ ಈ ನಿರ್ಧಾರ ಪ್ರಕಟಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ಸುದ್ದಿಗಳನ್ನು ಓದಲು ಈ ಕೆಳಗಿನ ಲಿಂಕ್​ ಕ್ಲಿಕ್ ಮಾಡಿ: http://vistaranews.com/attribute-category/international/

Exit mobile version