ಮುಂಬೈ: ಕಳೆದ ಭಾನುವಾರ ನಡೆದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿರುವಾಗಲೇ ಪಕ್ಷದ ನಾಯಕ ಅಜಿತ್ ಪವಾರ್ (Ajit Pawar) ಅವರು ಎದ್ದುಹೋದ ಕುರಿತು ಹಲವು ವದಂತಿಗಳು ಹಬ್ಬುತ್ತಿರುವ ಬೆನ್ನಲ್ಲೇ, “ನಾನು ಹಾಗೆ ಎದ್ದು ಹೋಗಿದ್ದು ವಾಷ್‌ರೂಮ್‌ಗೆ” ಎಂದು ಅಜಿತ್ ಪವಾರ್ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ವದಂತಿಗಳಿಗೆ ತಮಾಷೆಯ ಉತ್ತರದ ಮೂಲಕವೇ ಸ್ಪಷ್ಟನೆ ನೀಡಿದ್ದಾರೆ.
“ಎನ್‌ಸಿಪಿ ಜತೆಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ಎದ್ದು ವಾಷ್‌ರೂಮ್‌ಗೆ ಹೋಗಿದ್ದೆ ಅಷ್ಟೆ” ಎಂದಿದ್ದಾರೆ. ನೀವೇಕೆ ಸಭೆಯಲ್ಲಿ ಮಾತನಾಡಲಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, “ಸಮಯದ ಅಭಾವದಿಂದ ಮಾತನಾಡಲಿಲ್ಲ. ನಾನೊಬ್ಬನೇ ಅಲ್ಲ, ಸುನೀಲ್ ತಟ್ಕಾರೆ, ವಂದನಾ ಚೌಹಾಣ್ ಸೇರಿ ಹಲವು ನಾಯಕರು ಮಾತನಾಡಲು ಆಗಲಿಲ್ಲ. ಇದಕ್ಕೇ ಬೇರೆ ಅರ್ಥ ಕಲ್ಪಿಸುವುದು ಬೇಡ” ಎಂದು ಹೇಳಿದ್ದಾರೆ.
ಪಕ್ಷದಲ್ಲಿ ನಿರ್ಲಕ್ಷ್ಯಕ್ಕೀಡಾಗುತ್ತಿದ್ದೀರಾ ಎಂಬ ಪ್ರಶ್ನೆಗೆ, “ಪಕ್ಷದಲ್ಲಿ ನನ್ನನ್ನು ನಿರ್ಲಕ್ಷಿಸುತ್ತಿಲ್ಲ. ಭಿನ್ನಾಭಿಪ್ರಾಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನನ್ನನ್ನು ಪಕ್ಷವು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದೆ, ಪ್ರತಿಪಕ್ಷ ನಾಯಕನ ಸ್ಥಾನ ನೀಡಿದೆ” ಎಂದು ತಿಳಿಸಿದ್ದಾರೆ. ಕಳೆದ ಭಾನುವಾರ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಕ್ಷದ ಅಧ್ಯಕ್ಷರನ್ನಾಗಿ ಶರದ್ ಪವಾರ್ ಅವರನ್ನೇ ಮುಂದುವರಿಸಲು ತೀರ್ಮಾನಿಸಲಾಯಿತು. ಇನ್ನು ಸಭೆಯ ಮಧ್ಯೆಯೇ ಅಜಿತ್ ಪವಾರ್ ಎದ್ದು ಹೋದ ಹಿನ್ನೆಲೆಯಲ್ಲಿ ಭಿನ್ನಮತ ಉಂಟಾಗಿದೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ | Sharad Pawar | ಎನ್‌ಸಿಪಿಗೆ ಮತ್ತೆ ಶರದ್ ಪವಾರ್ ಅಧ್ಯಕ್ಷ, ಪಕ್ಷದ ಕಾರ್ಯಕಾರಿಣಿಯಲ್ಲಿ ಅವಿರೋಧವಾಗಿ ಆಯ್ಕೆ