ನವ ದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಹಲವು ವಿಷಯಗಳನ್ನು ಚರ್ಚಿಸಿದರು. ‘ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಕ್ಕೆ ಕೊಡಲು ಬಾಕಿ ಇರುವ 1,00,968.44 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಬೇಕು’ ಎಂಬ ಜ್ಞಾಪನಾ ಪತ್ರವನ್ನು ಪ್ರಧಾನಿಗೆ ಸಲ್ಲಿಸಿದರು. ನಂತರ ಅವರು ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಭೇಟಿಯಾಗಲಿದ್ದಾರೆ. ಮಮತಾ ಬ್ಯಾನರ್ಜಿ ನಾಲ್ಕು ದಿನಗಳ ದೆಹಲಿ ಪ್ರವಾಸದಲ್ಲಿದ್ದು, ಆಗಸ್ಟ್ 7ರಂದು ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿ, ವಾಪಸ್ ಆಗಮಿಸಲಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗುರುವಾರ (ಆಗಸ್ಟ್ 4) ದೆಹಲಿಗೆ ತೆರಳಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪಾಲ್ಗೊಳ್ಳಲು ಬಂದಿರುವ ತಮ್ಮ ಪಕ್ಷದ ಸಂಸದರನ್ನು ಭೇಟಿಯಾಗಿ, ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಪೂರಕವಾದ ವಿಚಾರಗಳೂ ಚರ್ಚೆಗೆ ಬಂದಿವೆ. ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಇಡಿಯಿಂದ ಬಂಧನವಾಗಿದೆ. ಅವರನ್ನು ಪಕ್ಷದಿಂದಲೇ ಅಮಾನತು ಮಾಡಲಾಗಿದೆ. ಹಾಗೇ, ಪಶ್ಚಿಮ ಬಂಗಾಳದಲ್ಲಿ ಸಂಪುಟ ವಿಸ್ತರಣೆಯಾಗಿ, ಬಿಜೆಪಿ ಮಾಜಿ ಸಚಿವ ಬಾಬುಲ್ ಸುಪ್ರಿಯೋ ಸೇರಿ 9 ಮಂದಿ ಹೊಸದಾಗಿ ದೀದಿ ಸಂಪುಟ ಸೇರಿದ್ದಾರೆ. ಈ ಬೆಳವಣಿಗೆಗಳ ಮಧ್ಯೆಯೇ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ.
ಇದನ್ನೂ ಓದಿ: ದೀದಿ ಸಂಪುಟ ಸೇರಿದ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ; 9 ಮಂದಿ ಪ್ರಮಾಣ ವಚನ ಸ್ವೀಕಾರ