ಕೋಲ್ಕೊತಾ: ಪಾಕಿಸ್ತಾನ ಆಕ್ರಮಿತ ಪ್ರದೇಶ(ಪಿಒಕೆ)ವು ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ವಿವಾದಲ್ಲಿರುವ ಭೂಮಿ. ಭಾರತವು ಆ ಸ್ಥಳವನ್ನು ಭಾರತದ ಅವಿಭಾಜ್ಯ ಅಂಗವೆಂದು ಗುರುತಿಸಿ, ಅದಕ್ಕೆ ಪಿಒಕೆ ಎಂದು ಕರೆಯುತ್ತಿದ್ದರೆ, ಪಾಕಿಸ್ತಾನ ಅದನ್ನು ತಮ್ಮ ಸ್ಥಳವೆಂದು ಹೇಳುತ್ತಿದ್ದು, ಅದಕ್ಕೆ ಆಜಾದ್ ಕಾಶ್ಮೀರ್(ಸ್ವತಂತ್ರ ಕಾಶ್ಮೀರ) ಎಂದು ಕರೆಯುತ್ತಿದೆ. ಹೀಗಿರುವ ಪಶ್ಚಿಮ ಬಂಗಾಳದ (West Bengal) ಶಿಕ್ಷಣ ಇಲಾಖೆಯು ಹತ್ತನೇ ತರಗತಿ ವಿದ್ಯಾರ್ಥಿಗಳ ಮಾದರಿ ಪ್ರಶ್ನೆ ಪತ್ರಿಕೆಯಲ್ಲಿ ಪಿಒಕೆಯನ್ನು ಆಜಾದ್ ಕಾಶ್ಮೀರ ಎಂದು ಹೆಸರಿಸುವ ಮೂಲಕ ವಿವಾದವನ್ನು ಸೃಷ್ಟಿಸಿಕೊಂಡಿದೆ.
ಇದನ್ನೂ ಓದಿ: Jansmapark Abhiyan | ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಗೆಲ್ಲುವ ಪಟ್ಟು! 2024ರ ಚುನಾವಣೆ ತಯಾರಿಯ ಬ್ಲೂಪ್ರಿಂಟ್
ಪ್ರತಿ ವರ್ಷ ಪಶ್ಚಿಮ ಬಂಗಾಳದ ಶಿಕ್ಷಣ ಇಲಾಖೆಯು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆಂದು ಮಾದರಿ ಪ್ರಶ್ನೆ ಪತ್ರಿಕೆಗಳುಳ್ಳ ಪುಸ್ತಕವನ್ನು ಬಿಡುಗಡೆ ಮಾಡುತ್ತದೆ. ಅದಕ್ಕೆ ರಾಜ್ಯಾದ್ಯಂತ ಇರುವ ಸರ್ಕಾರಿ ಶಾಲೆಗಳು ಪ್ರಶ್ನೆಗಳನ್ನು ಕಳುಹಿಸಿಕೊಡುತ್ತವೆ. ಈ ಬಾರಿ ಬಿಡುಗಡೆ ಮಾಡಲಾಗಿರುವ ಪುಸ್ತಕ 132ನೇ ಪುಟದಲ್ಲಿನ ಒಂದು ಪ್ರಶ್ನೆ ವಿವಾದಕ್ಕೆ ಕಾರಣವಾಗಿದೆ. ಅದರಲ್ಲಿ ವಿದ್ಯಾರ್ಥಿಗಳಿಗೆ ಭಾರತದ ಭೂಪಟದಲ್ಲಿ ಆಜಾದ್ ಕಾಶ್ಮೀರವನ್ನು ಗುರುತಿಸಿ ಎಂದು ಕೇಳಲಾಗಿದೆ.
ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ, ಪ್ರಶ್ನೆಯಲ್ಲಿರುವ “ಆಜಾದ್ ಕಾಶ್ಮೀರ”ವನ್ನು ಕೇವಲ “ಕಾಶ್ಮೀರ” ಎಂದು ಓದಿಕೊಳ್ಳಬೇಕೆಂದು ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: Mamta Mohandas | ಕ್ಯಾನ್ಸರ್ ಗೆದ್ದ ಬೆನ್ನಲ್ಲೇ ವಿಟಿಲಿಗೋ ಕಾಯಿಲೆಯಿಂದ ಬಳಲುತ್ತಿರುವ ನಟಿ ಮಮತಾ ಮೋಹನ್ ದಾಸ್
ಪ್ರಶ್ನೆ ಪತ್ರಿಕೆಯಲ್ಲಾಗಿರುವ ಈ ತಪ್ಪು ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ. “ಈ ಬುದ್ಧಿಯು ಮಮತಾ ಬ್ಯಾನರ್ಜಿ ಅವರ ಸರ್ಕಾರದ ಪ್ರತ್ಯೇಕತಾವಾದವನ್ನು ತೋರಿಸುತ್ತದೆ. ಈ ಸರ್ಕಾರ ಕೇವಲ ಉಗ್ರರಿಗೆ ಬೆಂಬಲಿಸುವುದಷ್ಟೇ ಅಲ್ಲದೆ ಮಕ್ಕಳ ಮನಸ್ಸಿನಲ್ಲಿ ದೇಶ ವಿರೋಧಿ ಭಾವನೆ ಬಿತ್ತುವುದಕ್ಕೂ ಪ್ರಯತ್ನಿಸುತ್ತಿದೆ” ಎಂದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ದಿಲೀಪ್ ಘೋಷ್ ಆಕ್ರೋಶ ಹೊರಹಾಕಿದ್ದಾರೆ. ಈ ವಿಚಾರವಾಗಿ ಶಿಕ್ಷಣ ಇಲಾಖೆಯು ಪ್ರತಿಕ್ರಿಯಿಸಿದ್ದು, “ಪ್ರಶ್ನೆ ಪತ್ರಿಕೆಯಲ್ಲಾಗಿರುವ ತಪ್ಪಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಪ್ರಶ್ನೆಯನ್ನು ಕಳುಹಿಸಿದವರ ವಿರುದ್ಧ ತನಿಖೆ ನಡೆಸಿ, ಕ್ರಮ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದೆ.