ಪಶ್ಚಿಮ ಬಂಗಾಳದಲ್ಲಿ ಇಂದು ಪಂಚಾಯಿತಿ ಚುನಾವಣೆ (West Bengal Panchayat Election)ನಡೆಯಿತು. ಬೆಳಗ್ಗೆ 7ಗಂಟೆಯಿಂದ ಶುರುವಾದ ಮತದಾನದ ಜತೆಜತೆಗೇ ಹಿಂಸಾಚಾರವೂ (West Bengal Violence) ನಡೆದಿದೆ. ಬೆಳಗ್ಗೆಯಿಂದ ಸಂಜೆವರೆಗೆ 13 ಜನರ ಸಾವಾಗಿದೆ. ರಾಜ್ಯದ ಎಲ್ಲ ಕಡೆ ಚುನಾವಣೆ ಸಂಬಂಧಿ ಹಿಂಸಾಚಾರವೇ ನಡೆದಿದೆ. ಹೀಗೆ ಕೊಲ್ಲಲ್ಪಟ್ಟ 13 ಮಂದಿಯಲ್ಲಿ 8ಜನರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು (TMC Workers Killed). ಮೂವರು ಸಿಪಿಐ (ಎಂ) ಪಕ್ಷದವರು. ಬಿಜೆಪಿಯ ಒಬ್ಬ ಮತ್ತು ಕಾಂಗ್ರೆಸ್ನ ಒಬ್ಬ ಕಾರ್ಯಕರ್ತ ಮೃತಪಟ್ಟಿದ್ದಾರೆ (BJP And Congress Workers).
ಇಂದು ನಡೆದ 13 ಹತ್ಯೆಯಲ್ಲಿ ಮೂವರು ತೃಣಮೂಲ ಕಾಂಗ್ರೆಸ್ ಮತ್ತು ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಸತ್ತಿದ್ದು ಮುರ್ಶಿದಾಬಾದ್ನಲ್ಲಿ. ಕೂಚ್ ಬೆಹಾರ್ನಲ್ಲಿ ಬಿಜೆಪಿಯ ಒಬ್ಬ ಮತ್ತು ತೃಣಮೂಲ ಕಾಂಗ್ರೆಸ್ನ ಒಬ್ಬ ಕಾರ್ಯಕರ್ತನ ಹತ್ಯೆಯಾಗಿದೆ. ಹಾಗೇ, ಪೂರ್ವ ಬುರ್ದ್ವಾನ್ನಲ್ಲಿ ಸಿಪಿಐ (ಎಂ)ನ ಇಬ್ಬರು, ಟಿಎಂಸಿಯ ಒಬ್ಬ ಕಾರ್ಯಕರ್ತ ಹತೆಗೀಡಾಗಿದ್ದಾರೆ. ಇನ್ನು ಮಾಲ್ಡಾದಲ್ಲಿ ಟಿಎಂಸಿಯ ಒಬ್ಬನ ಮತ್ತು ದಕ್ಷಿಣ 24 ಪರಗಣದಲ್ಲಿ ಮತ್ತೊಬ್ಬನ ಕೊಲೆಯಾಗಿದೆ. ಒಟ್ಟಾರೆ ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆ ರಕ್ತಸಿಕ್ತ ಅಧ್ಯಾಯವಾದಂತೆ ಆಗಿದೆ.
ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದಲೂ ಹಿಂಸಾಚಾರ ನಡೆಯುತ್ತಲೇ ಇದೆ. ಅದರಲ್ಲೂ ಮುರ್ಶಿದಾಬಾದ್, ಮಾಲ್ಡಾದಲ್ಲಿ ಪ್ರತಿದಿನ ಒಬ್ಬರಲ್ಲ ಒಬ್ಬರ ಹತ್ಯೆಯಾಗುತ್ತಿತ್ತು. ಕಚ್ಚಾಬಾಂಬ್, ಗುಂಡಿನ ಸದ್ದು ಮೊಳಗುತ್ತಿತ್ತು. ಇಂದು ಕೂಡ ಮುರ್ಶಿದಾಬಾದ್ನಲ್ಲೇ ಅತಿ ಹೆಚ್ಚು ಕಾರ್ಯಕರ್ತರ ಹತ್ಯೆಯಾಗಿದೆ. ಎಲ್ಲೆಲ್ಲೂ ಬಾಂಗ್-ಗುಂಡಿನ ಸದ್ದು ಕೇಳುತ್ತಿತ್ತು. ವಿವಿಧ ಪಂಚಾಯಿತಿಯ ಮತಗಟ್ಟೆಗಳಿಂದ ಬಿಜೆಪಿ-ಟಿಎಂಸಿ ಕಾರ್ಯಕರ್ತರು ಮತಪೆಟ್ಟಿಗೆ ಹಿಡಿದು ಓಡಿದ ಘಟನೆಯೂ ನಡೆಯಿತು. ಮತಪತ್ರಗಳನ್ನು ಸುಟ್ಟಿದ್ದು, ಸಿಕ್ಕಸಿಕ್ಕ ವಾಹನಗಳಿಗೆ ಬೆಂಕಿ ಇಟ್ಟಿದ್ದು, ಮತ ಹಾಕಲು ಬಂದ ಮತದಾರರ ಮೇಲೆ ದಾಳಿ ಮಾಡಿಸಿದ ಘಟನೆಗಳೂ ಪಶ್ಚಿಮ ಬಂಗಾಳದಿಂದ ವರದಿಯಾಗಿದೆ.
ಇದನ್ನೂ ಓದಿ: Panchayat Polls: ಪಶ್ಚಿಮ ಬಂಗಾಳದಲ್ಲಿ ಬೀಳುತ್ತಿವೆ ಹೆಣಗಳು; ಸ್ವತಂತ್ರ ಅಭ್ಯರ್ಥಿ ಮಗಳ ಹಣೆಗೆ ಗುಂಡೇಟು!
2 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು
ಪಶ್ಚಿಮ ಬಂಗಾಳದ ಒಟ್ಟು 73,887 ಪಂಚಾಯಿತಿಗಳಿಗೆ ಇಂದು ಚುನಾವಣೆ ನಡೆದಿದೆ. ಸುಮಾರು 2.06 ಲಕ್ಷ ಅಭ್ಯರ್ಥಿಗಳು ಕಣದಲ್ಲಿ ಇದ್ದರು. ಇಂದು ಬಿಗಿ ಭದ್ರತೆ ವಹಿಸಲಾಗಿತ್ತು. ಕೇಂದ್ರ ಮೀಸಲು ಪಡೆಗಳು ಮತ್ತು ರಾಜ್ಯ ಪೊಲೀಸರ ಕಟ್ಟುನಿಟ್ಟಿನ ಭದ್ರತೆ ಮಧ್ಯೆಯೂ ಹಿಂಸಾಚಾರ ನಡೆದಿದೆ. ಚುನಾವಣೆ ಎಂಬುದು ಅವ್ಯವಸ್ಥೆಯ ಗೂಡಾಗಿತ್ತು. 2018ರ ಪಂಚಾಯಿತಿ ಚುನಾವಣೆಲ್ಲೂ ಹಿಂಸಾಚಾರ ನಡೆದಿತ್ತು. ಆಗ ಟಿಎಂಸಿ ಪಕ್ಷ ಅತಿಹೆಚ್ಚು ಸ್ಥಾನಗಳಲ್ಲಿ ಗೆದ್ದಿತ್ತು.