ಸಂಘರ್ಷ, ರಕ್ತದ ಮಧ್ಯೆಯೇ ನಡೆದಿದ್ದ ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆ ಫಲಿತಾಂಶ ( West Bengal Panchayat Polls Results) ಇಂದು ಹೊರಬೀಳಲಿದೆ. ಬೆಳಗ್ಗೆ 8ಗಂಟೆಯಿಂದ ಬಿಗಿ ಭದ್ರತೆ ಮಧ್ಯೆ ಮತ ಎಣಿಕೆ ಕಾರ್ಯ ( ಭರದಿಂದ ಸಾಗುತ್ತಿದೆ. ಜುಲೈ 8ರಂದು ಚುನಾವಣೆ ದಿನ ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ಹಿಂಸಾಚಾರ, ಗಲಾಟೆ (West Bengal Violence) ನಡೆದಿತ್ತು. ಎಲ್ಲೆಲ್ಲೂ ಗುಂಡು-ಬಾಂಬ್ಗಳ ಶಬ್ದವೇ ಕೇಳುತ್ತಿತ್ತು. ಅಂದು ನಡೆದಿದ್ದ ಹಿಂಸಾಚಾರದಲ್ಲಿ ಒಟ್ಟು 18 ಮಂದಿ ಮೃತಪಟ್ಟಿದ್ದರು. ಜು.8ರಂದು 61,636 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಆದರೆ ಅವ್ಯವಸ್ಥೆ-ಸಂಘರ್ಷ ಮಿತಿಮೀರಿ ನಡೆದಿದ್ದ 697 ಬೂತ್ಗಳಲ್ಲಿ ಜು.10ರಂದು ಮರು ಮತದಾನವಾಗಿತ್ತು (West Bengal Panchayat Election Result).
ಈ ಎರಡೂ ಹಂತದ ಮತದಾನದ ಮತ ಎಣಿಕೆ ಇಂದು ನಡೆಯುತ್ತಿದ್ದು, ಸದ್ಯ ತೃಣಮೂಲ ಕಾಂಗ್ರೆಸ್ 1629 ಕ್ಷೇತ್ರಗಳಲ್ಲಿ, ಬಿಜೆಪಿ 364 ಪಂಚಾಯಿತಿಗಳಲ್ಲಿ, ಸಿಪಿಐ (ಎಂ) 362 ಮತ್ತು ಕಾಂಗ್ರೆಸ್ 118 ಪಂಚಾಯಿತಿಗಳಲ್ಲಿ ಮುನ್ನಡೆ ಸಾಧಿಸಿದೆ. ಇಲ್ಲಿ ಒಟ್ಟು 73,887 ಪಂಚಾಯಿತಿ ಸೀಟ್ಗಳಿದ್ದು, 2.06 ಲಕ್ಷ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 5.67 ಕೋಟಿ ಜನರು ಮತಚಲಾಯಿಸಿದ್ದರು. 2018ರ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಶೇ.95ರಷ್ಟು ಪಂಚಾಯಿತಿ ಕ್ಷೇತ್ರಗಳನ್ನು ಗೆದ್ದಿಕೊಂಡಿತ್ತು. ಅದರಲ್ಲೂ ಶೇ.34ಪಂಚಾಯಿತಿಗಳಲ್ಲಿ ಅವಿರೋಧವಾಗಿ ಗೆದ್ದಿತ್ತು. ಟಿಎಂಸಿ ಅಭ್ಯರ್ಥಿಗಳ ಎದುರು ಬೇರೆ ಪಕ್ಷದ ಅಭ್ಯರ್ಥಿಗಳೇ ಇರಲಿಲ್ಲ. ಆದರೆ ಈ ಸಲ ಬಿಜೆಪಿ, ಕಾಂಗ್ರೆಸ್, ಸಿಪಿಐ (ಎಂ) ಪಕ್ಷಗಳು ತೀವ್ರ ಸ್ಪರ್ಧೆಯೊಡ್ಡಿವೆ.
ಇದನ್ನೂ ಓದಿ: West Bengal Election: 42 ಸಾವು, ಹಿಂಸಾಚಾರ ಕಂಡ ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆ ಫಲಿತಾಂಶ ಇಂದು
ಇಂದೂ ಅಲ್ಲಲ್ಲಿ ಗಲಾಟೆ
ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆ ಮತ ಎಣಿಕೆ ದಿನವಾದ ಇಂದೂ ಕೂಡ ಹಲವು ಕಡೆಗಳಲ್ಲಿ ಗಲಾಟೆ, ಗಲಭೆ ನಡೆಯುತ್ತಿದೆ. ಡೈಮೆಂಡ್ ಹಾರ್ಬರ್ನಲ್ಲಿರುವ ಮತ ಎಣಿಕೆ ಕೇಂದ್ರದ ಹೊರಗೆ ದೊಡ್ಡದಾದ ಗುಂಪೊಂದು ಸೇರಿ ಪ್ರತಿಭಟನೆ ನಡೆಸುತ್ತಿದೆ. ಅಲ್ಲಿ ಯಾವುದೇ ಸರ್ಕಾರಿ ವಾಹನ ಸಂಚಾರ ಮಾಡಲು ಬಿಡುತ್ತಿಲ್ಲ. ಬಂದ ವಾಹನಗಳನ್ನೆಲ್ಲ ಪ್ರತಿಭಟನಾಕಾರರು ತಡೆಯುತ್ತಿದ್ದಾರೆ. ಕಚ್ಚಾ ಬಾಂಬ್ ಸ್ಫೋಟವಾಗಿದೆ. ಹಾಗೇ, ಕೂಚ್ ಬೆಹಾರ್ನಲ್ಲಿ ಟಿಎಂಸಿ ಅಭ್ಯರ್ಥಿ ರಿಕು ರಾಯ್ ರಾಜ್ಭರ್ ಅವರು ಮತಪತ್ರಗಳನ್ನು ಹರಿದಿದ್ದಾರೆ, ಅದರ ಮೇಲೆಲ್ಲ ಮಸಿ ಚೆಲ್ಲಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೂಚ್ ಬೆಹಾರ್ನಲ್ಲಿ ಕೇವಲ ಎರಡು ಪಂಚಾಯಿತಿ ಕ್ಷೇತ್ರಗಳಲ್ಲಿ ಮಾತ್ರ ಟಿಎಂಸಿ ಮುನ್ನಡೆ ಸಾಧಿಸಿದ್ದಕ್ಕೆ ಅವರು ಹೀಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಇಲ್ಲಿ 98 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸದ್ಯ ರಿಕು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.