ನವ ದೆಹಲಿ: ರಾಜಕಾರಣಿಗಳು ಮಾತನಾಡುವ ಭರದಲ್ಲಿ ವಿವಾದ ಸೃಷ್ಟಿಸುವುದು, ಬಳಿಕ ತಮ್ಮ ಹೇಳಿಕೆ ತಿರುಚಿದ್ದಾರೆ ಎನ್ನುವುದು, ವಿರೋಧ ಜಾಸ್ತಿಯಾಗುತ್ತಿದ್ದಂತೆ ಹೇಳಿಕೆ ವಾಪಸ್ ಪಡೆದು ವಿಷಾದ ವ್ಯಕ್ತಪಡಿಸುವುದೆಲ್ಲ ನಡೆಯುತ್ತಿರುತ್ತದೆ. ಈಗ ಹೀಗೆ ವಿವಾದವನ್ನೊಂದು ಸೃಷ್ಟಿಸಿ, ಟೀಕೆಗೆ ಗುರಿಯಾದವರ ಸಾಲಿಗೆ ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್ ಸಚಿವ ಅಖಿಲ್ ಗಿರಿ ಸೇರಿದ್ದಾರೆ. ಇವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ರೂಪದ ಬಗ್ಗೆ ಮಾತನಾಡಿದ ವಿಡಿಯೊ ವೈರಲ್ ಆಗುತ್ತಿದೆ. ಬಿಜೆಪಿ ಪಕ್ಷವಷ್ಟೇ ಅಲ್ಲ, ವಿಡಿಯೊ ನೋಡಿದ ಜನಸಾಮಾನ್ಯರೂ ಅಖಿಲ್ ಗಿರಿ ವಿರುದ್ಧ ತಿರುಗಿಬಿದ್ದಿದ್ದಾರೆ.
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅಖಿಲ್ ಗಿರಿ, ಬಿಜೆಪಿ ನಾಯಕ ಸುವೇಂದು ಅಧಿಕಾರಿಯನ್ನು ವ್ಯಂಗ್ಯ ಮಾಡಲು ಹೋಗಿ, ದ್ರೌಪದಿ ಮುರ್ಮುರನ್ನು ಅಣುಕಿಸಿದ್ದಾರೆ. ‘ನಾನು ನೋಡಲು ಚೆನ್ನಾಗಿಲ್ಲ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳುತ್ತಾರೆ. ನನ್ನ ಬಿಡಿ, ಸುವೇಂದು ಅಧಿಕಾರಿ ಏನು ಸೌಂದರ್ಯವಂತರಾ? ನಾವು ಯಾವತ್ತೂ ಒಬ್ಬರ ಅಂದ-ಚೆಂದ ನೋಡಿ ಅವರ ಸಾಮರ್ಥ್ಯವನ್ನು ಅಳೆಯಬಾರದು. ನಮ್ಮ ರಾಷ್ಟ್ರಪತಿಯವರನ್ನು ನೋಡಿ? ಅವರು ಹೇಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಅಖಿಲ್ ಗಿರಿ ಹೇಳುವುದನ್ನು ವಿಡಿಯೊದಲ್ಲಿ ಕೇಳಬಹುದು.
ಅಖಿಲ್ ಗಿರಿ ವಿಡಿಯೊವನ್ನು ಶೇರ್ ಮಾಡಿಕೊಂಡಿರುವ ಪಶ್ಚಿಮ ಬಂಗಾಳ ಬಿಜೆಪಿ ಘಟಕ, ‘ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಇಡೀ ಪಕ್ಷ ಬುಡಕಟ್ಟು ಜನಾಂಗದ ವಿರೋಧಿಗಳು. ದ್ರೌಪದಿ ಮುರ್ಮು ಅವರು ಬುಡಕಟ್ಟು ಜನಾಂಗದಿಂದ ಬಂದವರು. ಅವರ ಬಗ್ಗೆ ತೃಣಮೂಲ ಸಚಿವ ಟೀಕಾತ್ಮಕ ಮಾತುಗಳನ್ನಾಡುತ್ತಾರೆ. ಆ ಕಾರ್ಯಕ್ರಮದಲ್ಲಿ ರಾಜ್ಯದ ಮಹಿಳಾ ಕಲ್ಯಾಣ ಸಚಿವೆ ಶಶಿ ಪಂಕ ಉಪಸ್ಥಿತರಿದ್ದರು. ಅವರ ಎದುರೇ ಒಬ್ಬ ಬುಡಕಟ್ಟು ಮಹಿಳೆಯ ಸೌಂದರ್ಯ, ರೂಪವನ್ನು ಟಿಎಂಸಿ ಸಚಿವ ಟೀಕಿಸಿದ್ದಾರೆ’ ಎಂದು ಹೇಳಿದೆ. ವಿಡಿಯೊ ನೋಡಿದ ಜನಸಾಮಾನ್ಯರೂ ಕೂಡ ಅಖಿಲ್ ಗಿರಿ ಮಾತುಗಳನ್ನು ವಿರೋಧಿಸಿದ್ದಾರೆ.
ಇದನ್ನೂ ಓದಿ: ಕಲಿತ ಶಾಲೆ, ಉಳಿದುಕೊಂಡಿದ್ದ ಹಾಸ್ಟೆಲ್‌ಗೆ ಭೇಟಿ ನೀಡಿ, ಭಾವುಕರಾಗಿ ಕಣ್ಣೀರು ಹಾಕಿದ ರಾಷ್ಟ್ರಪತಿ ದ್ರೌಪದಿ ಮುರ್ಮು