ನವ ದೆಹಲಿ: ತೃಣಮೂಲ ಕಾಂಗ್ರೆಸ್ನ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಮುಕುಲ್ ರಾಯ್ (Mukul Roy) ಅವರು 2017ರಲ್ಲಿ ಟಿಎಂಸಿ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಡಿ ಕೆಲಸ ಮಾಡಲು ಹೆಮ್ಮೆಯಾಗುತ್ತದೆ ಎಂದು ಹೇಳಿದ್ದ ಅವರು 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಗೆದ್ದರು. ಗೆದ್ದ ಬಳಿಕ ಮತ್ತೆ ಅದೇ ವರ್ಷ ಬಿಜೆಪಿ ತೊರೆದು, ಮಾತೃಪಕ್ಷ ಟಿಎಂಸಿಗೆ ಸೇರಿದ್ದು ಗೊತ್ತೇ ಇದೆ. ಇಂಥ ಮುಕುಲ್ ರಾಯ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅವರೀಗ ಮತ್ತೆ ಬಿಜೆಪಿ ಸೇರಲು ಮುಂದಡಿ ಇಟ್ಟಿದ್ದಾರೆ.
ನನ್ನ ತಂದೆ ಮುಕುಲ್ ರಾಯ್ ನಾಪತ್ತೆಯಾಗಿದ್ದಾರೆ. ಅವರ ಮಾನಸಿಕ ಸ್ಥಿತಿಯೂ ಇತ್ತೀಚೆಗೆ ಸರಿಯಿಲ್ಲ, ಹೀಗಾಗಿ ಆತಂಕವಾಗುತ್ತಿದೆ ಎಂದು ಅವರ ಪುತ್ರ ಸುಬ್ರಾಗ್ಶು ರಾಯ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಅದರ ಬೆನ್ನಲ್ಲೇ ಮುಕುಲ್ ರಾಯ್ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ‘ಇಲ್ಯಾಕೆ ಬಂದಿದ್ದೀರಿ, ಚಿಕಿತ್ಸೆಗಾಗಿಯೇ’ ಎಂದು ಕೇಳಿದ್ದಕ್ಕೆ, ಇಲ್ಲ, ಇಲ್ಲ, ವೈಯಕ್ತಿಕ ಕೆಲಸಕ್ಕೆ ಬಂದಿದ್ದೇನೆ, ನಾನೊಬ್ಬ ಜನಪ್ರತಿನಿಧಿ, ದೆಹಲಿಗೆ ಬರುವ ಕೆಲಸ ಇದ್ದೇ ಇರುತ್ತದೆ ಎಂದಿದ್ದರು. ಇಷ್ಟೆಲ್ಲದರ ಮಧ್ಯೆ ಅವರು ಮತ್ತೆ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಮುಕುಲ್ ರಾಯ್ ಕೂಡ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.
ಇದನ್ನೂ ಓದಿ: Mukul Roy: ತೃಣಮೂಲ ನಾಯಕ ಮುಕುಲ್ ರಾಯ್ ಕಾಣೆಯಾಗಿದ್ದಾರೆಯೇ! ಅವರ ಪುತ್ರ ಹೇಳೋದೇನು?
ಮಂಗಳವಾರ ಬೆಂಗಾಳಿ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಮುಕುಲ್ ರಾಯ್, ‘ನಾನೊಬ್ಬ ಬಿಜೆಪಿ ಶಾಸಕ. ನಾನು ಬಿಜೆಪಿಯೊಂದಿಗೆ ಇರಲು ಇಷ್ಟಪಡುತ್ತೇನೆ. ನಾನು ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲು ಇಚ್ಛಿಸುತ್ತಿದ್ದೇನೆ’ ಎಂದು ಹೇಳಿದ್ದಾಗಿ ವರದಿಯಾಗಿದೆ. ‘ನಾನು ಕೆಲವು ದಿನಗಳ ಕಾಲ ಆರೋಗ್ಯವಾಗಿ ಇರಲಿಲ್ಲ. ಹೀಗಾಗಿ ರಾಜಕೀಯದಿಂದ ದೂರ ಉಳಿದಿದ್ದೆ. ಆದರೆ ಈಗ ಆರೋಗ್ಯವಾಗಿದ್ದು, ರಾಜಕಾರಣದಲ್ಲಿ ಸಕ್ರಿಯನಾಗುತ್ತೇನೆ. ನಾನು ಟಿಎಂಸಿಯೊಟ್ಟಿಗೆ ಇರಲು ಸಾಧ್ಯವೇ ಇಲ್ಲವೆಂದು ಶೇ.100ರಷ್ಟು ವಿಶ್ವಾಸದಿಂದ ಹೇಳುತ್ತಿದ್ದೇನೆ ಮತ್ತು ‘ಬಿಜೆಪಿಗೆ ಸೇರ್ಪಡೆಯಾಗುವಂತೆ ನನ್ನ ಮಗ ಸುಬ್ರಾಂಗ್ಶು’ಗೂ ಸಲಹೆ ನೀಡಿದ್ದೇನೆ’ ಎಂದು ಮುಕುಲ್ ಅವರು ತಿಳಿಸಿದ್ದಾರೆ ಎಂದು ಮುಕುಲ್ ರಾಯ್ ಹೇಳಿದ್ದಾಗಿ ಬಂಗಾಳಿ ಸುದ್ದಿ ಮಾಧ್ಯಮ ವರದಿ ಮಾಡಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷ ಕೊಳಕು ರಾಜಕಾರಣ ಮಾಡುತ್ತಿದೆ. ಟಿಎಂಸಿ ನಾಯಕರನ್ನು ಸೆಳೆಯುತ್ತಿದೆ ಎಂದು ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಸೋವನ್ದೇಬ್ ಛಟ್ಟೋಪಾಧ್ಯಾಯ ಅವರು ಆರೋಪ ಮಾಡಿದ್ದರು. ಅದರ ಬೆನ್ನಲ್ಲೇ ಈಗ ಮುಕುಲ್ ರಾಯ್ ಬಿಜೆಪಿ ಸೇರ್ಪಡೆ ಸುದ್ದಿ ಹೊರಬಿದ್ದಿದೆ.