ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅನಾಥ ಮಕ್ಕಳಿಗಾಗಿ ಮೀಸಲಾಗಿದ್ದ ಪಿಎಂ ಕೇರ್ಸ್ ನಿಧಿ ಸೇರಿದಂತೆ ಯೋಜನೆಗಳ ಪ್ರಯೋಜನಗಳನ್ನು ಎಲ್ಲಾ ಅನಾಥರಿಗೆ ವಿಸ್ತರಿಸಲು ಮಾರ್ಗಗಳಿವೆಯೇ ಎಂದು ಸುಪ್ರೀಂ (Supreme Court) ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಶುಕ್ರವಾರ ಕೇಂದ್ರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮ್ಜಿತ್ ಬ್ಯಾನರ್ಜಿ ಅವರಿಗೆ ಈ ವಿಷಯದಲ್ಲಿ ಸೂಚನೆಗಳನ್ನು ಪಡೆಯುವಂತೆ ಸಲಹೆ ನೀಡಿದೆ.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಪೋಷಕರು ಮೃತಪಟ್ಟ ಅನಾಥರಿಗಾಗಿ ನೀವು ಸೂಕ್ತ ನೀತಿಯನ್ನು ತಂದಿದ್ದೀರಿ. ಪೋಷಕರು ಅಪಘಾತದಲ್ಲಿ ಅಥವಾ ಅನಾರೋಗ್ಯದಿಂದ ಸತ್ತರೂ ಅನಾಥ ಮಕ್ಕಳು ಅನಾಥರೆ. ಈ ಯೋಜನೆಗಳನ್ನು ಎಲ್ಲ ಅನಾಥ ಮಕ್ಕಳಿಗೆ ಕಲ್ಪಿಸಲು ಸಾಧ್ಯವೇ ಎಂಬುದನ್ನು ಗಮನಹರಿಸಬೇಕು ಎಂದು ನ್ಯಾಯಪೀಠ ಕೇಳಿದೆ. .
ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅನಾಥ ಮಕ್ಕಳಿಗಾಗಿ ಮೀಸಲಾಗಿರುವ ಪಿಎಂ ಕೇರ್ಸ್ ನಿಧಿ ಸೇರಿದಂತೆ ಯೋಜನೆಗಳ ಪ್ರಯೋಜನಗಳನ್ನು ಇತರ ಅನಾಥ ಮಕ್ಕಳಿಗೆ ವಿಸ್ತರಿಸಬಹುದೇ ಎಂಬ ಬಗ್ಗೆ ನೀವು ಸೂಚನೆಯನ್ನು ಕೋರಬೇಕು” ಎಂದು ನ್ಯಾಯಪೀಠ ಸಾಲಿಸಿಟರ್ ಜನರಲ್ಗೆ ತಿಳಿಸಿದೆ. ಈ ವಿಷಯದಲ್ಲಿ ನಾಲ್ಕು ವಾರಗಳ ಅವಧಿಯಲ್ಲಿ ನ್ಯಾಯಾಲಯದ ಪ್ರಶ್ನೆಗೆ ಪ್ರತಿಕ್ರಿಯಿಸುವುದಾಗಿ ವಿಕ್ರಮ್ಜಿತ್ ಬ್ಯಾನರ್ಜಿ ಅವರು ಹೇಳಿದ್ದಾರೆ.
ಎಲ್ಲರಿಗೂ ಕೊಡಲು ಅರ್ಜಿದಾರರ ಮನವಿ
ಅರ್ಜಿದಾರರಾದ ಪೌಲೋಮಿ ಪಾವಿನಿ ಶುಕ್ಲಾ, ಸಾಂಕ್ರಾಮಿಕ ರೋಗದ ಸಮಯದಲ್ಲಿ ಅನಾಥ ಮಕ್ಕಳಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರಯೋಜನಗಳನ್ನು ನೀಡಲಾಗಿದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಇತರ ಅನಾಥ ಮಕ್ಕಳಿಗೆ ಇದೇ ರೀತಿಯ ಪ್ರಯೋಜನಗಳನ್ನು ನೀಡಬಹುದು ಎಂದು ಕೋರಿದ್ದರು.
ಇದನ್ನೂ ಓದಿ : Name Change : ಮೊಘಲರ ಕಾಲದ ಔರಂಗಾಬಾದ್ ಇನ್ನು ಸಂಭಾಜಿನಗರ್, ಉಸ್ಮಾನಾಬಾದ್ಗೆ ಧಾರಾಶಿವ್ ಎಂದು ಹೆಸರು
ದೆಹಲಿ ಮತ್ತು ಗುಜರಾತ್ ಎರಡು ರಾಜ್ಯಗಳು ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 2 (ಡಿ) ಅಡಿಯಲ್ಲಿ ಸರ್ಕಾರಿ ಆದೇಶವನ್ನು ಹೊರಡಿಸುವ ಮೂಲಕ ಶಿಕ್ಷಣ ಹಕ್ಕು ಕಾಯ್ದೆಯ ಪ್ರಯೋಜನಗಳನ್ನು ಒದಗಿಸುತ್ತಿವೆ. ಇದನ್ನು ಇತರ ರಾಜ್ಯಗಳಲ್ಲಿಯೂ ಮಾಡಬಹುದು ಎಂದು ಶುಕ್ಲಾ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಈ ಮನವಿಯನ್ನು ಗಮನಿಸಿದ ನ್ಯಾಯಪೀಠ, ಆರ್ ಟಿಇ ಕಾಯ್ದೆಯ ಸೆಕ್ಷನ್ 2(ಡಿ)ಯಲ್ಲಿ ‘ ಇತರ ಗುಂಪು’ ಎಂಬ ಪದವನ್ನು ಪರಿಗಣಿಸುವಂತೆ ಮತ್ತು ಸೂಕ್ತ ನಿರ್ದೇಶನಗಳನ್ನು ನೀಡುವ ಮೂಲಕ ಎಲ್ಲಾ ಅನಾಥರಿಗೆ ಪ್ರಯೋಜನಗಳನ್ನು ವಿಸ್ತರಿಸುವುದನ್ನು ಪರಿಗಣಿಸುವಂತೆ ಕೇಂದ್ರಕ್ಕೆ ಸೂಚಿಸಿತು.
ಅರ್ಜಿ ಸಲ್ಲಿಸಿದ ವರ್ಷವಾದ 2018ರಲ್ಲಿ ತಮ್ಮ ಮನವಿಯ ಬಗ್ಗೆ ನೋಟಿಸ್ ನೀಡಲಾಗಿದೆ. ಆದರೆ ಐದು ವರ್ಷಗಳ ನಂತರವೂ ಕೇಂದ್ರವು ಇನ್ನೂ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿಲ್ಲ ಎಂದು ಶುಕ್ಲಾ ಅವರು ನ್ಯಾಯಪೀಠದ ಮುಂದೆ ಹೇಳಿದರು.
“2018ರಲ್ಲಿ ನಾನು ಈ ಅರ್ಜಿ ಸಲ್ಲಿಸಿದಾಗ ಕಾನೂನು ಅಧ್ಯಯನ ಮಾಡುತ್ತಿದ್ದೆ. ಐದು ವರ್ಷಗಳು ಕಳೆದಿವೆ, ನಾನು ಪುಸ್ತಕ ಬರೆದಿದ್ದೇನೆ. ಈಗ ಮದುವೆಯಾಗಿದ್ದೇನೆ. ಆದರೆ ಇನ್ನೂ ಕೇಂದ್ರವು ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿಲ್ಲ” ಎಂದು ಅವರು ಹೇಳಿದರು.
ಈ ವಿಷಯದಲ್ಲಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್ ಅವರು, ಶಾಲಾ ಪ್ರವೇಶದಲ್ಲಿ ಇತರ ಮಕ್ಕಳಿಗೆ ನೀಡಿರುವಂತೆ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯೂಎಸ್) ಶೇಕಡಾ 20 ರಷ್ಟು ಕೋಟಾದ ಪ್ರಯೋಜನವನ್ನು ಅನಾಥ ಮಕ್ಕಳಿಗೆ ವಿಸ್ತರಿಸಬೇಕು ಎಂದು ಕೋರಿಕೊಂಡರು.
ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 2 (ಡಿ) ಅಂಶದ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ನ್ಯಾಯಪೀಠವು ಬ್ಯಾನರ್ಜಿಗೆ ಅವರಿಗೆ ಸೂಚಿಸಿತು.