ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಲಿರುವ, ಕೇಂದ್ರ ಸರ್ಕಾರದ ಕೊನೇ ವರ್ಷದ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲಿದ್ದು, ದೇಶವೇ ಕುತೂಹಲದಿಂದ ಕಾಯುತ್ತಿದೆ. ಇಂದು ಬೆಳಗ್ಗೆ 11ಗಂಟೆಗೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಬಜೆಟ್ ಪ್ರತಿ ಓದಲಿದ್ದಾರೆ. ಉದ್ಯೋಗ ಹೆಚ್ಚಳ, ಸಾಮಾಜಿಕ ಕಲ್ಯಾಣ, ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಸುಮಾರು 544 ಶತಕೋಟಿ ವೆಚ್ಚದ ಯೋಜನೆಗಳನ್ನು ಈ ಬಾರಿ ನಿರ್ಮಲಾ ಸೀತಾರಾಮನ್ ಪ್ರಕಟಿಸುವ ನಿರೀಕ್ಷೆಯಿದೆ.
ಏನೆಲ್ಲ ನಿರೀಕ್ಷಿಸಬಹುದು?
ಬಹುಮುಖ್ಯವಾಗಿ ಈ ಸಲ ನಿರ್ಮಲಾ ಸೀತಾರಾಮನ್ ಅವರು ತೆರಿಗೆ ಕಡಿಮೆ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ದೇಶದ ಜನರು ಇದ್ದಾರೆ. ಅಷ್ಟೇ ಅಲ್ಲ, ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಖಾಸಗಿ ಜೆಟ್ಗಳು, ಅತ್ಯಾಧುನಿಕ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಆಭರಣಗಳ ಮೇಲಿನ ಆಮದು ಸುಂಕ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತದಲ್ಲಿ ನಿರುದ್ಯೋಗ ಪ್ರಮಾಣ ಕಳೆದ 16 ತಿಂಗಳುಗಳಲ್ಲಿ ಶೇ.8.3ರಷ್ಟು ಹೆಚ್ಚಾಗಿದೆ. ಹೀಗಾಗಿ ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಖಾತರಿ ನೀಡಬೇಕಾಗಿರುವುದು ಆದ್ಯತೆ ಎಂದು ಹಲವು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಈ ಸಲದ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಗೆ ಅಪಾರ ಪ್ರಮಾಣದ ಹಣ ಮೀಸಲಿಡುವ ಸಾಧ್ಯತೆ ಇದೆ. ಇದರೊಂದಿಗೆ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿ, ಕಡಿಮೆ ಬಾಡಿಗೆಯ ವಸತಿ ವ್ಯವಸ್ಥೆಗಳೂ ಜನರ ನಿರೀಕ್ಷೆ ಪಟ್ಟಿಯಲ್ಲಿ ಸೇರಿವೆ.
ಆರೋಗ್ಯ ಕ್ಷೇತ್ರದಲ್ಲಿ ನೋಡುವುದಾದರೆ ರಾಷ್ಟ್ರದಲ್ಲಿ ನರ್ಸಿಂಗ್ ಮತ್ತು ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಿಸುವುದು, ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮದಡಿ (National Immunisation Program) ಎಚ್ಪಿವಿ ಲಸಿಕೆ ಪರಿಚಯಿಸುವುದು. ಅಷ್ಟೇ ಅಲ್ಲ, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುವುದರ ಜತೆಗೆ ದೇಶದ ಆರೋಗ್ಯ ಕ್ಷೇತ್ರವನ್ನು ಇನ್ನಷ್ಟು ಸುಧಾರಿಸುವ ಯೋಜನೆಗಳು ಈ ಬಜೆಟ್ನಲ್ಲಿ ಬರಬಹುದು ಎಂಬ ನಿರೀಕ್ಷೆಯೂ ಇದೆ.
ಇದನ್ನೂ ಓದಿ: Budget 2023: ಸಂಸತ್ತಿನಲ್ಲಿ ಇಂದು ಕೇಂದ್ರ ಬಜೆಟ್ ಮಂಡನೆ, ಜನಪರ ಘೋಷಣೆ ನಿರೀಕ್ಷೆ