ನವ ದೆಹಲಿ: ಬೀಡಾಡಿ ನಾಯಿಗಳಿಂದ ಆಗುತ್ತಿರುವ ಅವಘಡಗಳು ಒಂದೆರಡಲ್ಲ. ಅದೆಷ್ಟೋ ಜನರ, ಅದರಲ್ಲೂ ಪುಟ್ಟ ಮಕ್ಕಳ ಪ್ರಾಣವನ್ನೂ ಬೀದಿನಾಯಿಗಳು ತೆಗೆದಿವೆ. ಹಲವರು ಬೀದಿ ನಾಯಿಗಳ ದಾಳಿಗೆ ಗಂಭೀರವಾಗಿ ಗಾಯಗೊಂಡಿದ್ದೂ ಇದೆ. ಹೀಗಾಗಿ ಬೀಡಾಡಿ ನಾಯಿಗಳು ಮತ್ತು ಅವು ತಂದೊಡ್ಡುತ್ತಿರುವ ಅಪಾಯವನ್ನು ತಡೆಯುವ ಅಗತ್ಯತೆ ಬಗ್ಗೆ ಸುಪ್ರೀಂಕೋರ್ಟ್ ಹೇಳಿದೆ. ‘ಬೀದಿ ನಾಯಿಗಳಿಗೆ ಆಹಾರ ಹಾಕುವವರು, ಅವುಗಳ ವ್ಯಾಕ್ಸಿನೇಶನ್ ಬಗ್ಗೆಯೂ ಜವಾಬ್ದಾರಿ ತೆಗೆದುಕೊಳ್ಳಬೇಕು. ಅಷ್ಟೇ ಅಲ್ಲ, ಈ ಬೀದಿ ನಾಯಿಗಳು ಯಾರ ಮೇಲಾದರೂ ದಾಳಿ ಮಾಡಿ ಗಾಯಗೊಳಿಸಿದಾಗ, ಅವರ ಚಿಕಿತ್ಸೆಯ ವೆಚ್ಚವನ್ನೂ ಇವರೇ ಭರಿಸಬೇಕಾಗುತ್ತದೆ’ ಎಂದೂ ಹೇಳಿದೆ.
ಕೇರಳದಲ್ಲಿ ಬೀದಿ ನಾಯಿಗಳ ಮಿತಿಮೀರಿದ ಹಾವಳಿಗೆ ಸಂಬಂಧಪಟ್ಟ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ನ್ಯಾ.ಸಂಜೀವ್ ಖನ್ನಾ, ನ್ಯಾ. ಜೆ.ಕೆ.ಮಹೇಶ್ವರಿ ಅವರನ್ನೊಳಗೊಂಡ ಪೀಠ, ‘ಶ್ವಾನಪ್ರೇಮಿಗಳು ಅನೇಕರು ಇದ್ದಾರೆ. ಬೀದಿ ನಾಯಿಗಳಿಗೆ ಆಹಾರ ಹಾಕುವವರು, ತಾವು ಪ್ರತಿನಿತ್ಯ ತಿಂಡಿ ಕೊಡುವ ನಾಯಿಗಳ ಮೇಲೆ ಸಂಖ್ಯೆಯನ್ನು ಬರೆದೋ ಅಥವಾ ಏನಾದರೂ ಗುರುತು ಹಾಕಿಯೋ ಇಟ್ಟುಕೊಳ್ಳಬಹುದು. ಅವುಗಳಿಗೆ ಕಾಲಕಾಲಕ್ಕೆ ನೀಡಬೇಕಾದ ಲಸಿಕೆಯನ್ನು ಹಾಕಿಸುವ ಜವಾಬ್ದಾರಿಯ ಜತೆ, ಆ ನಾಯಿಗಳು ಯಾರಿಗಾದರೂ ಕಚ್ಚಿದಾಗ ಅದನ್ನು ಗಮನಿಸಿ ಅವರ ಚಿಕಿತ್ಸಾ ವೆಚ್ಚವನ್ನೂ ಭರಿಸಬೇಕು’ ಎಂದು ಹೇಳಿದೆ. ಹೀಗಂತ ಸುಪ್ರೀಂಕೋರ್ಟ್ ಲಿಖಿತ ಆದೇಶ ಕೊಟ್ಟಿಲ್ಲ, ಬದಲಾಗಿ ಮೌಖಿಕವಾಗಿ ಸೂಚನೆ ನೀಡಿದೆ.
‘ಬೀದಿನಾಯಿಗಳನ್ನು ಕೊಲ್ಲುವುದನ್ನು ಅನೇಕರು ವಿರೋಧಿಸುತ್ತಾರೆ. ಅದೇನೋ ಸರಿ, ಆದರೆ ಈ ನಾಯಿಗಳಿಂದಲೂ ಅಷ್ಟೇ ಸಮಸ್ಯೆಯಾಗುತ್ತಿದೆ ಎಂಬುದೂ ಸತ್ಯ. ಬೀದಿ ನಾಯಿಗಳು ಕೆಲವೊಮ್ಮೆ ಹಸಿವಾಗಿಯೋ ಅಥವಾ ಇನ್ನೇನೋ ಕಾಯಿಲೆ, ಇನ್ಫೆಕ್ಷನ್ನಿಂದಾಗಿಯೂ ಕಿರಿಕಿರಿಯಾಗಿ ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಅದರಲ್ಲೂ ರೇಬಿಸ್ ಇರುವ ಶ್ವಾನಗಳು ಇನ್ನೂ ಅಪಾಯಕಾರಿ. ಹೀಗಾಗಿ ಶ್ವಾನ ಪ್ರಿಯರು ಬರೀ ಆಹಾರ ಹಾಕದೆ, ಉಳಿದ ಜವಾಬ್ದಾರಿಯನ್ನೂ ತೆಗೆದುಕೊಳ್ಳಲಿ’ ಎಂದೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಹೇಳಿದ್ದಾರೆ.
ಈ ಬೀದಿ ನಾಯಿಗಳ ಸಮಸ್ಯೆ ಸಾರ್ವತ್ರಿಕ ಎಂಬಂತಾಗಿದೆ. ಅದರಲ್ಲೂ ಕೇರಳ, ಮುಂಬೈ ಮತ್ತಿತರ ಪ್ರದೇಶಗಳಲ್ಲಿ ಇದು ಮಿತಿಮೀರಿದೆ. ಬೀಡಾಡಿ ನಾಯಿಗಳು ಭಯಾನಕವಾಗಿ ದಾಳಿ ಮಾಡುತ್ತವೆ. ಪುಟ್ಟ ಮಕ್ಕಳನ್ನು ಕಿತ್ತು ತಿನ್ನುತ್ತವೆ. ಇತ್ತೀಚೆಗೆ 12 ವರ್ಷದ ಹುಡುಗಿಯೊಬ್ಬಳು ಬೀದಿ ನಾಯಿಗಳು ಕಚ್ಚಿಯೇ ಮೃತಪಟ್ಟಿದ್ದಳು.
ಇದನ್ನೂ ಓದಿ: Twin Tower Demolition | ಬೀದಿ ನಾಯಿಗಳನ್ನು ಹುಡುಕಿ ರಕ್ಷಣೆ ಮಾಡಿದ ಎನ್ಜಿಒ ಸಿಬ್ಬಂದಿ