Site icon Vistara News

Swachhata Hi Seva: ಯಾರಿವರು? ಮೋದಿ ಜತೆ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದ ಫಿಟ್ನೆಸ್ ಇನ್‌ಫ್ಲುಯೆನ್ಸರ್ ಅಂಕಿತ್‌ ಬೈಯಾನ್‌ಪುರಿಯಾ ?

modi cleaning

modi cleaning

ನವ ದೆಹಲಿ: ಗಾಂಧಿ ಜಯಂತಿ (Gandhi Jayanti) ಪ್ರಯುಕ್ತ ಕೇಂದ್ರ ಸರ್ಕಾರ ಆರಂಭಿಸಿರುವ ಸ್ವಚ್ಛತಾ ಅಭಿಯಾನಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಹಲವು ಮಂದಿ ಇದಕ್ಕೆ ಕೈ ಜೋಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಕರೆ ನೀಡಿದ ಸ್ವಚ್ಛತಾ ಹಿ ಸೇವಾ ಅಭಿಯಾನದ (Swachhata Hi Seva), ಸ್ವಚ್ಛತೆಗಾಗಿ ಶ್ರಮದಾನ (Shramdaan for cleanliness) ಕಾರ್ಯಕ್ರಮಕ್ಕೆ ಕುಸ್ತಿಪಟು, ಫಿಟ್‌ನೆಸ್‌ ಇನ್‌ಫ್ಲುಯೆನ್ಸರ್‌ ಅಂಕಿತ್‌ ಬೈಯಾನ್‌ಪುರಿಯಾ ಬೆಂಬಲ ವ್ಯಕ್ತಪಡಿಸಿ ಗಮನ ಸೆಳೆದಿದ್ದಾರೆ. ಅವರು ಮೋದಿ ಜತೆಗೆ ಪಾರ್ಕ್‌ನಲ್ಲಿ ಕಸ ಗುಡಿಸಿದರು. ಈ ವಿಡಿಯೊವನ್ನು ಮೋದಿ ಹಂಚಿಕೊಂಡಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಮೋದಿ, ʼʼಇವತ್ತು ಇಡೀ ದೇಶ ಶುಚಿತ್ವದ ಕಡೆ ಗಮನ ಹರಿಸಿದೆ. ನಾನು ಮತ್ತು ಅಂಕಿತ್ ಬೈಯಾನ್‌ಪುರಿಯಾ ಇದನ್ನೇ ಮಾಡಿದ್ದೇವೆ. ಸ್ವಚ್ಛತೆಯ ಜತೆಗೆ ನಾವು ಫಿಟ್ನೆಸ್ ಮತ್ತು ಯೋಗಕ್ಷೇಮವನ್ನು ಸಹ ಬೆರೆಸಿದ್ದೇವೆ. ಇದು ಸ್ವಚ್ಛ ಮತ್ತು ಸ್ವಸ್ಥ ಭಾರತ್ ಕಂಪವವನ್ನು ತಿಳಿಸುತ್ತದೆʼʼ ಎಂದು ಬರೆದುಕೊಂಡಿದ್ದಾರೆ.

ಯುವಕರಲ್ಲಿ ಫಿಟ್ನೆಸ್ ಸಂಸ್ಕೃತಿಯನ್ನು ಹೆಚ್ಚಿಸಲು 75 ದಿನಗಳ ಕಠಿಣ ಸವಾಲನ್ನು ಪ್ರಾರಂಭಿಸಿದ ಅಂಕಿತ್ ಬೈಯಾನ್‌ಪುರಿಯಾ ಅವರನ್ನು ಮೋದಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಈ ವಿಡಿಯೊದಲ್ಲಿ ಮೋದಿ ʼʼಸ್ವಚ್ಛತಾ ಅಭಿಯಾನ ಹೇಗೆ ಫಿಟ್ನೆಸ್‌ಗೆ ನೆರವಾಗುತ್ತದೆ?ʼʼ ಎಂದು ಅಂಕಿತ್‌ ಬಳಿ ಕೇಳುತ್ತಾರೆ.

ʼʼಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಪರಿಸರದ ಆರೋಗ್ಯ ಉತ್ತಮವಾಗಿದ್ದರೆ ನಾವೂ ಆರೋಗ್ಯವಂತರಾಗಿರುತ್ತೇವೆʼʼ ಎಂದು ಅಂಕಿತ್‌ ಪ್ರತಿಕ್ರಿಯಿಸಿದ್ದಾರೆ. ʼʼದೈಹಿಕ ಕಸರತ್ತಿಗೆ ಎಷ್ಟು ಸಮಯ ಮೀಸಲಿಡುತ್ತೀರಿ?ʼʼ ಎಂದು ಪ್ರಧಾನಿ ಕುತೂಹಲಕ್ಕೆ ಅಂಕಿತ್‌, ʼʼ4-5 ಗಂಟೆʼʼ ಎಂದು ಉತ್ತರಿಸಿದ್ದಾರೆ. ಮೋದಿ ಅವರ ವ್ಯಾಯಾಮದ ರೀತಿಯಿಂದ ಸ್ಫೂರ್ತಿಗೊಂಡಿರುವುದಾಗಿ ಅಂಕಿತ್‌ ತಿಳಿಸುತ್ತಾರೆ. ಅದಕ್ಕೆ ಮೋದಿ, ʼʼನನಗೆ ತುಂಬಾ ವ್ಯಾಯಾಮದ ವಿಧಾನಗಳ ಬಗ್ಗೆ ಅರಿವಿಲ್ಲ. ದಿನದ ಚಟುವಟಿಕೆ ಮಧ್ಯೆ ಕೆಲವು ಸಮಯ ಇದಕ್ಕಾಗಿ ಮೀಸಲಿಡುತ್ತೇನೆʼʼ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Narendra Modi: ಪೊರಕೆ ಹಿಡಿದು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಮೋದಿ; ಕಸ ಗುಡಿಸಿದ ಶಾ, ನಡ್ಡಾ!

ಯಾರು ಈ ಅಂಕಿತ್ ಬೈಯಾನ್‌ಪುರಿಯಾ?

ಹರಿಯಾಣದ ಸೋನಿಪತ್ ಬಯಾನ್ಪುರದ ಅಂಕಿತ್ ಬೈಯಾನ್‌ಪುರಿಯಾ ಮಾಜಿ ದೇಸಿ ಕುಸ್ತಿಪಟುವಾಗಿದ್ದು, ಈಗ ಫಿಟ್‌ನೆಸ್‌ ಇನ್‌ಫ್ಲುಯೆನ್ಸರ್‌ ಆಗಿ ಇಸ್ಟಾಗ್ರಾಮ್‌ನಲ್ಲಿ 4.9 ಕೋಟಿ ಫಾಲೋವರ್ಸ್‌ ಹೊಂದಿದ್ದಾರೆ. ಅವರು 75 ದಿನಗಳ ಕಠಿಣ ಸವಾಲನ್ನು ಪ್ರಾರಂಭಿಸಿದ ಕೇವಲ 28 ದಿನಗಳಲ್ಲಿ 2.5 ಕೋಟಿ ಅಧಿಕ ಫಾಲೋವರ್ಸ್‌ಗಳನ್ನು ಗಳಿಸಿದ್ದಾರೆ. ಈ ಸವಾಲು ಸೆಲ್ಫಿ ತೆಗೆಯುವುದು, ಸಾಕಷ್ಟು ನೀರು ಕುಡಿಯುವುದು, ದೈಹಿಕ ಕಸರತ್ತು, ಕಟ್ಟುನಿಟ್ಟಾದ ಪಥ್ಯ ಮುಂತಾದ ಚಟುವಟಿಕೆಗಳನ್ನು ಒಳಗೊಂಡಿತ್ತು. ಜೂನ್‌ 28ರಂದು ಆರಂಬಭವಾದ ಸವಾಲು ಸೆಪ್ಟಂಬರ್‌ 11ರಂದು ಕೊನೆಗೊಂಡಿತ್ತು. ಪ್ರತಿ ದಿನ ಅವರು ತಮ್ಮ ದಿನಚರಿಯ ವಿಡಿಯೊವನ್ನು ಇಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದರು. ಮೂಲದ ಪ್ರಕಾರ ಅವರ ಪಾಲಕರು ಸಾಮಾನ್ಯ ಕಾರ್ಮಿಕರಾಗಿದ್ದರು. ಅಂಕಿತ್‌ ಅವರ ನಡೆಸುವ ವ್ಯಾಯಾಮ ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯದ ಕಡೆಗೂ ಕೇಂದ್ರೀಕರಿಸಿದೆ ಎನ್ನುವುದು ವಿಶೇಷ.

ದೇಶದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Exit mobile version