ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ ನಾಯಕ ಅನುಬ್ರತಾ ಮಂಡಲ್ರನ್ನು ಇಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದಿಂದ ಬಾಂಗ್ಲಾದೇಶಕ್ಕೆ ಹಸುಗಳ ಕಳ್ಳಸಾಗಣೆ ಕೇಸ್ಗೆ ಸಂಬಂಧಪಟ್ಟು ಅವರು ಅರೆಸ್ಟ್ ಆಗಿದ್ದಾರೆ. ವಿಚಾರಣೆಗೆ ಬನ್ನಿ ಎಂದು 9-10 ಬಾರಿ ಸಮನ್ಸ್ ಕೊಟ್ಟರೂ, ನಿರ್ಲಕ್ಷ್ಯ ಮಾಡಿದ ಅನುಬ್ರತಾರನ್ನು ಸಿಬಿಐ ಅಧಿಕಾರಿಗಳು ಇಂದು ಅವರ ಮನೆಗೇ ಬಂದು ಕರೆದುಕೊಂಡು ಹೋಗಿದ್ದಾರೆ. ಇವರು ಟಿಎಂಸಿಯಲ್ಲಿ ಪ್ರಮುಖ ನಾಯಕ ಮತ್ತು ಮಮತಾ ಬ್ಯಾನರ್ಜಿಯ ಅತ್ಯಾಪ್ತರಲ್ಲಿ ಒಬ್ಬರು. ಯಾವುದೇ ಮಂತ್ರಿ, ಶಾಸಕ ಅಲ್ಲದೆ ಹೋದರೂ ಪಕ್ಷದಲ್ಲಿ ಪ್ರಬಲ ನಾಯಕ.
ಬೀರ್ಭೂಮ್ ಜಿಲ್ಲೆಯಲ್ಲಿ ಅದೆಷ್ಟರ ಮಟ್ಟಿಗೆ ಇವರ ಪ್ರಭಾವ ಇತ್ತು ಎಂದರೆ, ಸ್ಥಳೀಯವಾಗಿ ಬಾಹುಬಲಿ ನಾಯಕ ಎಂದೇ ಪ್ರಸಿದ್ಧರಾಗಿದ್ದರು. ಇವರ ಬೆಂಬಲಿಗರು ಪ್ರೀತಿಯಿಂದ ಕೇಷ್ತೋ ದಾ ಎಂದೇ ಕರೆಯುತ್ತಿದ್ದರು. (ಈ ಹೆಸರನ್ನು ಭಗವಾನ್ ಶ್ರೀಕೃಷ್ಣ, ಭಗವಾನ್ ಹನುಮಾನ್ಗೆ ಉಲ್ಲೇಖಿಸಲಾಗುತ್ತದೆ). ಇಡೀ ಬೀರ್ಭೂಮ್ ಜಿಲ್ಲೆಯಲ್ಲಿ ಏನೇ ಕೆಲಸ ಆಗಬೇಕು ಎಂದರೂ ಅನುಬ್ರತಾ ಒಪ್ಪಿಗೆ ಬೇಕೇಬೇಕು ಎಂಬುದು ಅಲ್ಲಿನವರ ಹೇಳಿಕೆ. ಅಂದಹಾಗೇ, ಅನುಬ್ರತಾಗೆ ಹೈಪೋಕ್ಸಿಯಾ ಕಾಯಿಲೆ ಇದ್ದು, ಸದಾ ಆಕ್ಸಿಜನ್ನ್ನು ಜತೆಗೆ ಇಟ್ಟುಕೊಂಡೇ ಇರುತ್ತಾರೆ.
ವಿವಾದ ಬೆನ್ನಿಗೇ ಇದೆ !
ಅನುಬ್ರತಾ ಮಂಡಲ್ ವಿವಾದಕ್ಕೆ ಪರ್ಯಾಯ ಎಂಬಂತೆ ಬದುಕಿದವರು. 2013ರ ಪಂಚಾಯತ್ ಚುನಾವಣೆಯ ವೇಳೆ ಮಂಡಲ್ ತಮ್ಮ ಕಾರ್ಯಕರ್ತರಿಗೆ ವಿಚಿತ್ರ ಆದೇಶ ಕೊಟ್ಟು ಸುದ್ದಿಯಾಗಿದ್ದರು. ಚುನಾವಣೆಯ ಸ್ವತಂತ್ರ ಅಭ್ಯರ್ಥಿಗಳ ಮನೆ ಮೇಲೆ ಮುಲಾಜಿಲ್ಲದೆ ಬಾಂಬ್ ಹಾಕಿ ಎಂದು ಸೂಚಿಸಿದ್ದರು. ಅದೇ ಕೆಲಸವನ್ನೇ ಟಿಎಂಸಿ ಕಾರ್ಯಕರ್ತರು ಮಾಡಿ, ವ್ಯಕ್ತಿಯೊಬ್ಬರ ಜೀವ ಹೋಗಿತ್ತು. ಚುನಾವಣೆ ಸಂದರ್ಭ ಬಂತು ಎಂದರೆ ಸಾಕು ಈ ವ್ಯಕ್ತಿಯ ಮೇಲೆ ಕಣ್ಣಿಡುವುದೇ ಒಂದು ಕೆಲಸವಾಯಿತು. ಟಿಎಂಸಿ ವಿರೋಧಿಸುವವರ ಮನೆ ಮೇಲೆ ರಾತ್ರಿ ದಾಳಿ ಮಾಡಿಸುವುದು, ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂಬ ಹಠದಿಂದ ಗಲಭೆ ಎಬ್ಬಿಸುವುದೇ ಇವರ ಕಾಯಕವಾಗಿತ್ತು. ಚುನಾವಣೆ ಸಂದರ್ಭದಲ್ಲಿ ಮಂಡಲ್ ದಾಂಧಲೆ ಎಬ್ಬಿಸದಂತೆ ಕಣ್ಣಿಡುವ ಸಲುವಾಗಿಯೇ ನ್ಯಾಯಾಲಯ, ವಿಶೇಷ ಅಧಿಕಾರಿಗಳನ್ನು ನೇಮಕ ಕೂಡ ಮಾಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, 2021ರ ವಿಧಾನಸಭೆ ಚುನಾವಣೆ ವೇಳೆ, ಮಮತಾ ಬ್ಯಾನರ್ಜಿಯವರ khela hobe (ಆಟ ಶುರುವಾಗಿದೆ-The game is On) ಎಂಬ ಘೋಷಣೆಯನ್ನು ಅತ್ಯಂತ ಜನಪ್ರಿಯಗೊಳಿಸಿದವರು ಇವರು.
ಇತ್ತೀಚೆಗಷ್ಟೇ ಮಮತಾ ಬ್ಯಾನರ್ಜಿ ಆಪ್ತ ಪಾರ್ಥ ಚಟರ್ಜಿಯನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಈಗ ಬಲಗೈ ಬಂಟನಂತಿದ್ದ ಅನುಬ್ರತಾರನ್ನು ಸಿಬಿಐ ಅರೆಸ್ಟ್ ಮಾಡಿದೆ. ಈ ಮಧ್ಯೆ ಕಲ್ಲಿದ್ದಲು ಹಗರಣದಲ್ಲಿ 8 ಐಪಿಎಸ್ ಅಧಿಕಾರಿಗಳಿಗೆ ಇಡಿ ಸಮನ್ಸ್ ಕೊಟ್ಟಿದೆ. ಅದರ ಮೂಲ ಕೂಡ ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಕಾಲಬುಡದಲ್ಲೇ ಇದೆ. ಇನ್ನು ಈ ಜಾನುವಾರುಗಳ ಅಕ್ರಮ ಸಾಗಣೆ ಕೇಸ್ನಲ್ಲಿ ಈಗಾಗಲೇ ಅನುಬ್ರತಾ ಆಪ್ತ ಸೇಗಲ್ ಹುಸೇನ್ ಅರೆಸ್ಟ್ ಆಗಿದ್ದಾನೆ. ಈತನ ಬಳಿ 100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಇರುವುದು ಪತ್ತೆಯಾಗಿದೆ.
ಇದನ್ನೂ ಓದಿ: Anubrata Mondal | ಸಿಎಂ ಮಮತಾ ಬ್ಯಾನರ್ಜಿ ಆಪ್ತ ಅನುಬ್ರತಾ ಮಂಡಲ್ರನ್ನು ಬಂಧಿಸಿದ ಸಿಬಿಐ