Site icon Vistara News

Draupadi Murmu | ಬುಡಕಟ್ಟು ಜನಾಂಗದ ಪ್ರಥಮ ರಾಷ್ಟ್ರಪತಿ ಮುರ್ಮು; ಕುಟುಂಬ, ರಾಜಕೀಯ ಹಿನ್ನೆಲೆ ಏನು?

draupadi murmu

ನವ ದೆಹಲಿ: ಇಂದು ರಾಷ್ಟ್ರದಲ್ಲೊಂದು ಇತಿಹಾಸ ಸೃಷ್ಟಿಯಾಗಿದೆ. ಇದೇ ಮೊದಲ ಬಾರಿಗೆ ಬುಡಕಟ್ಟು ಜನಾಂಗದ ಪ್ರತಿನಿಧಿ ಅದರಲ್ಲೂ ಮಹಿಳೆಯೊಬ್ಬರು ಈ ರಾಷ್ಟ್ರದ ಅತ್ಯುನ್ನತ ಸ್ಥಾನ, ರಾಷ್ಟ್ರಪತಿ ಹುದ್ದೆಗೆ ಏರಿದ್ದಾರೆ. ಸಂತಾಲ್‌ ಜನಾಂಗಕ್ಕೆ ಸೇರಿದ ದ್ರೌಪದಿ ಮುರ್ಮು ಜಾರ್ಖಂಡ್‌ ಮಾಜಿ ರಾಜ್ಯಪಾಲರು. ಜುಲೈ 18ಕ್ಕೆ ಚುನಾವಣೆ ನಡೆದು, 21ಕ್ಕೆ ಮತ ಎಣಿಕೆ ನಡೆದು ಮುರ್ಮು ಆಯ್ಕೆಯಾಗಿದ್ದರು. ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ದ್ರೌಪದಿ ಮುರ್ಮು ಯಾರು? ಅವರ ಕುಟುಂಬ-ರಾಜಕೀಯ ಹಿನ್ನೆಲೆಯೇನು? ಇಲ್ಲಿದೆ ಸಮಗ್ರ ಮಾಹಿತಿ..

1958ರಲ್ಲಿ ಜನಿಸಿದ ಮುರ್ಮು ಅವರಿಗೆ ಈಗ 64 ವರ್ಷ. ಒಡಿಶಾದ ಮಯೂರ್‌ಭಂಜ್‌ ಎಂಬಲ್ಲಿನ ಬುಡಕಟ್ಟು ಸಮುದಾಯದಲ್ಲಿ ಜನಿಸಿದ್ನದಾರೆ. ಬಿಎ ವರೆಗೂ ಶಿಕ್ಷಣ ಪಡೆದಿದ್ದು, ರಾಜಕಾರಣ ಸೇರುವ ಮುನ್ನ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. 1997ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. 1997ರಲ್ಲಿ ರಾಯ್‌ರಂಗ್‌ಪುರದಲ್ಲಿ ಕೌನ್ಸಿಲರ್‌ ಆಗಿ ಆಯ್ಕೆಯಾದರು. 2000ದಲ್ಲಿ ಇದೇ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾದರು. ನವೀನ್‌ ಕುಮಾರ್‌ ಪಾಟ್ನಾಯಿಕ್‌ ಅವರ ಸಚಿವ ಸಂಪುಟದಲ್ಲಿ ಸಾರಿಗೆ, ವಾಣಿಜ್ಯ, ಮೀನುಗಾರಿಕೆ ಸಚಿವರಾಗಿ ಕಾರ್ಯ ನಿರ್ವಹಿಸಿದರು. 2004ರಲ್ಲಿ ಮತ್ತೆ ಶಾಸಕಿಯಾಗಿ ಆರಿಸಿ ಬಂದರು. 2006ರಲ್ಲಿ ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಛಾದ ಅಧ್ಯಕ್ಷೆಯಾದರು.

2015ರಲ್ಲಿ ಮುರ್ಮು ಅವರನ್ನು ಜಾರ್ಖಂಡ್‌ನ ರಾಜ್ಯಪಾಲರನ್ನಾಗಿ ಆಯ್ಕೆ ಮಾಡಲಾಯಿತು. ನರೇಂದ್ರ ಮೋದಿ ಹಾಗೂ ಅಟಲ್‌ ಬಿಹಾರಿ ವಾಜಪೇಯಿ ಅವರು ಇವರ ನೆಚ್ಚಿನ ರಾಜಕೀಯ ನಾಯಕರು. ಶ್ಯಾಮ್‌ಚರಣ್‌ ಮುರ್ಮು ಎಂಬವರನ್ನು ಮದುವೆಯಾಗಿದ್ದು, ಪತಿ ಬದುಕಿಲ್ಲ. ಇತಿಶ್ರೀ ಮುರ್ಮು ಎಂಬ ಮಗಳಿದ್ದಾರೆ. ಇನ್ನಿಬ್ಬರು ಗಂಡುಮಕ್ಕಳು ಮೃತಪಟ್ಟಿದ್ದಾರೆ. ಇವರ ಹೆಸರು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಳೆದ ಎರಡು ಸರದಿಯಲ್ಲೂ ಕೇಳಿಬಂದಿತ್ತು. ಈ ಬಾರಿ ಈಶಾನ್ಯ ಭಾರತದ ಹಿನ್ನೆಲೆ, ಬುಡಕಟ್ಟು ಹಾಗೂ ಮಹಿಳಾ ಹಿನ್ನೆಲೆ- ಇವೆಲ್ಲವೂ ಮುರ್ಮು ಅವರಿಗೆ ಪೂರಕವಾಗಿ ಒದಗಿಬರಲಿವೆ.

ಯಾರು ಈ ಸಂತಾಲ್‌ಗಳು
ಸಂತಾಲ್ ಎಂದರೆ ಅಕ್ಷರಶಃ ಶಾಂತ, ಶಾಂತಿಯುತ ಎಂದರ್ಥ. ಸಂತ ಎಂದರೆ ಶಾಂತ ಮತ್ತು ಅಲಾ ಎಂದರೆ ಮನುಷ್ಯ. ಸಂತಾಲ್‌ ಬುಡಕಟ್ಟಿನ ಮಂದಿ ಬಳಸುವ ಭಾಷೆ ಸಂತಾಲಿ. ಸಂತಾಲರು ಭಾರತದಲ್ಲಿ ಭಾರತದಲ್ಲಿ ಮೂರನೇ ಅತಿ ದೊಡ್ಡ ಪರಿಶಿಷ್ಟ ಬುಡಕಟ್ಟು ಸಮುದಾಯ. ಮೊದಲಿನ ಎರಡು ಸಮುದಾಯಗಳು ಕ್ರಮವಾಗಿ ಗೊಂಡರು ಹಾಗೂ ಭಿಲ್ಲರು. ಸಂತಾಲರ ಸಮುದಾಯ ಹೆಚ್ಚಾಗಿ ಒಡಿಶಾ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಹಂಚಿಹೋಗಿವೆ. ದ್ರೌಪದಿ ಮುರ್ಮು ಅವರ ತವರು ಜಿಲ್ಲೆ ಮಯೂರ್‌ಭಂಜ್, ಸಂತಾಲರು ಹೆಚ್ಚು ದಟ್ಟವಾಗಿರುವ ಜಿಲ್ಲೆಗಳಲ್ಲಿ ಒಂದು. ಸಂತಾಲರು ಮೂಲತಃ ಅಲೆಮಾರಿ ಜನಾಂಗ. ಮುಂದೆ ಛೋಟಾನಾಗ್ಪುರ ಪ್ರಸ್ತಭೂಮಿಯಲ್ಲಿ ನೆಲೆನಿಂತರು. 18ನೇ ಶತಮಾನದ ಬಳಿಕ ಬಿಹಾರ, ಒಡಿಶಾ, ಪ.ಬಂಗಾಳಗಳಿಗೆ ಹಬ್ಬಿದರು.

ಈಶಾನ್ಯ ಭಾರತದ ಬುಡಕಟ್ಟು ಸಮುದಾಯಗಳಲ್ಲಿ ಸಾಕ್ಷರತೆಯ ಪ್ರಮಾಣ ತುಂಬಾ ಕಡಿಮೆ. ಆದರೆ ಸಂತಾಲರು ಹೆಚ್ಚಿನ ಸಾಕ್ಷರತೆ ಹೊಂದಿದ್ದಾರೆ. 1960ರಿಂದ ನಡೆಯುತ್ತಿರುವ ಶಿಕ್ಷಣ ಜಾಗೃತಿಯ ಕಾರಣದಿಂದ ಸಮುದಾಯದ ಅನೇಕರು ಶಿಕ್ಷಣ ಪಡೆದು ಭಾರತೀಯ ಸಮಾಜದ ಕೆನೆಪದರ ಪ್ರವೇಶಿಸಿದ್ದಾರೆ. ಉದಾಹರಣೆಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಂತಾಲರು. ಪ್ರಸ್ತುತ ಮಹಾಲೇಖಪಾಲ (ಕಂಟ್ರೋಲರ್ ಮತ್ತು ಆಡಿಟರ್ ಜನರಲ್) ಆಗಿರುವ ಗಿರ್ಶ್‌ ಚಂದ್ರ ಮುರ್ಮು ಅವರು ಸಂತಾಲ್.‌ ಪ್ರಸ್ತುತ ಕೇಂದ್ರ ಜಲಶಕ್ತಿ ಸಚಿವ ಬಿಸೇಶ್ವರ ತುಡು ಅವರು ಕೂಡ ಇದೇ ಸಮುದಾಯ ಹಾಗೂ ಮಯೂರ್‌ಭಂಜ್ ಜಿಲ್ಲೆಯವರು. ಈ ಹಿನ್ನೆಲೆಯಲ್ಲಿ ಕೆಲವು ಸುದ್ದಿ ವರದಿಗಳು ಪ್ರಸ್ತುತ ಕಾಲವನ್ನು “ಸಂತಾಲ್‌ ಸಮುದಾಯದ ಸುವರ್ಣ ಯುಗʼ ಎಂದು ಕರೆದಿವೆ.

ಅವರ ಸಾಮಾಜಿಕ ಉನ್ನತಿಯ ಹೊರತಾಗಿಯೂ, ಸಂತಾಲರು ಸಾಮಾನ್ಯವಾಗಿ ತಮ್ಮ ಸಾಂಸ್ಕೃತಿಕ ಬೇರುಗಳೊಂದಿಗೆ ನಂಟು ಹೊಂದಿದ್ದಾರೆ. ಇವರು ಪ್ರಕೃತಿ ಆರಾಧಕರು. ಜಹೆರ್ ಎಂದು ಕರೆಯಲಾಗುವ ಪವಿತ್ರ ತೋಪುಗಳಲ್ಲಿ ನಮನ ಸಲ್ಲಿಸುವುದನ್ನು ಕಾಣಬಹುದು. ಅವರ ಸಾಂಪ್ರದಾಯಿಕ ಉಡುಗೆಯೆಂದರೆ ಪುರುಷರಿಗೆ ಧೋತಿ ಮತ್ತು ಗಮುಚ್ಚ. ಮಹಿಳೆಯರಿಗೆ ಸಾಮಾನ್ಯವಾಗಿ ನೀಲಿ ಮತ್ತು ಹಸಿರು ಸೀರೆ. ಇವರು ಸಾಮಾನ್ಯವಾಗಿ ಹಚ್ಚೆಗಳನ್ನು ಹಾಕುತ್ತಾರೆ.

ಸಂತಾಲ್ ಸಮಾಜದಲ್ಲಿ ವಿಚ್ಛೇದನ ನಿಷೇಧವಲ್ಲ. ದಂಪತಿಯಲ್ಲಿ ಯಾರು ಬೇಕಾದರೂ ವಿಚ್ಛೇದನ ಕೇಳಬಹುದು. ಹೆಂಡತಿ ಮಾಟಗಾತಿಯಾಗಿದ್ದರೆ, ಪದೇ ಪದೆ ತವರುಮನೆಗೆ ಹೋಗುತ್ತಿದ್ದರೆ, ಮಾತು ಕೇಳದಿದ್ದರೆ ಗಂಡ ವಿಚ್ಛೇದನ ಕೇಳಬಹುದು. ಹೆಂಡತಿ ತನ್ನನ್ನು ಗಂಡ ಸಾಕುವುದಿಲ್ಲ ಎನಿಸಿದರೆ, ಬೇರೊಬ್ಬನನ್ನು ಮದುವೆಯಾಗಬೇಕು ಎನಿಸಿದರೆ ವಿಚ್ಛೇದನ ಕೇಳಬಹುದು. ಅಂಥ ಸಂದರ್ಭದಲ್ಲಿ ಆಕೆಯನ್ನು ಮದುವೆಯಾಗುವ ಪುರುಷ ಹಳೆಯ ಗಂಡನಿಗೆ ಪರಿಹಾರ ಕೊಡಬೇಕಾಗುತ್ತದೆ.

ರಾಜಕೀಯವಾಗಿ ಅಜಾತಶತ್ರು ದ್ರೌಪದಿ ಮುರ್ಮು
ದ್ರೌಪದಿ ಮುರ್ಮು ಅವರನ್ನು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಅತ್ಯುತ್ತಮ ಕಾರ್ಯತಂತ್ರ ಎನ್ನಬಹುದು. ಬಿಜೆಪಿಯ ಮಾಸ್ಟರ್‌ ಸ್ಟ್ರೋಕ್‌ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಕಳೆದ ಬಾರಿ ರಾಮನಾಥ್‌ ಕೋವಿಂದ್‌ ಅವರನ್ನು ರಾಷ್ಟ್ರಪತಿಯಾಗಿ ತಂದು ಒಂದು ರಾಜಕೀಯ ಸಂದೇಶವನ್ನು ಬಿಜೆಪಿ ದೇಶಕ್ಕೆ ನೀಡಿತ್ತು. ಈ ಸಲದ್ದೂ ಅಂಥದೇ ಇನ್ನೊಂದು ಸಂದೇಶ. ಕಳೆದ ಬಾರಿ ಅದು ದಲಿತರನ್ನು ಸೆಳೆದಿದ್ದರೆ, ಈ ಬಾರಿ ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರನ್ನು ಏಕಕಾಲಕ್ಕೆ ಸೆಳೆಯುವಂತಿದೆ. ಹೀಗಾಗಿ ಎನ್‌ಡಿಎಯಲ್ಲಿ ಇರದ ರಾಜಕೀಯ ಪಕ್ಷಗಳೂ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಿವೆ. ಲೋಕಸಭೆಯಲ್ಲಿ ೨೭ ಸ್ಥಾನಗಳು ಬುಡಕಟ್ಟು ಸಮುದಾಯಕ್ಕೆ ಮೀಸಲಾಗಿವೆ. ೨೦2೪ರ ಲೋಕಸಭೆ ಚುನಾವಣೆಯಲ್ಲಿ ಇದು ಗಣನೀಯ ಪ್ರಭಾವವನ್ನೇ ಬೀರಬಹುದು. ದ್ರೌಪದಿ ಮುರ್ಮು ಅವರು ರಾಜಕೀಯವಾಗಿ ಯಾವುದೇ ಶತ್ರುಗಳಿಲ್ಲದ ವ್ಯಕ್ತಿ. ಪ್ರತಿಪಕ್ಷಗಳಿಗೂ ಇವರನ್ನು ವಿರೋಧಿಸಲು ಕಾರಣಗಳಿಲ್ಲ.

ಇದನ್ನೂ ಓದಿ: Draupadi Murmu Oath Ceremony| ರಾಜ್‌ಘಾಟ್‌ನಲ್ಲಿ ಗಾಂಧೀಜಿಗೆ ನಮನ ಸಲ್ಲಿಸಿದ ದ್ರೌಪದಿ ಮುರ್ಮು

Exit mobile version