Site icon Vistara News

ಮಹುವಾ vs ನಿರ್ಮಲಾ; ನಿಜವಾದ ‘ಪಪ್ಪು’ಯಾರು?-ಬಿಜೆಪಿ ಮತ್ತು ಟಿಎಂಸಿ ನಡುವೆ ಶುರುವಾಯ್ತು ಗಲಾಟೆ

Who is Real Pappu TMC Vs BJP

ನವ ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಬಿಜೆಪಿ ನಾಯಕರು ‘ಪಪ್ಪು’ ಎಂದು ಕರೆದು ಟೀಕಿಸುವುದು ಜಗಜ್ಜಾಹೀರಾಗಿದೆ. ಕಾಂಗ್ರೆಸ್​ ವಿರೋಧಿಗಳೂ ಕೂಡ ಅವರನ್ನು ಹಾಗೇ ಹಂಗಿಸುತ್ತಾರೆ. ಆದರೀಗ ‘ಪಪ್ಪು’ ಎಂಬ ಪದ ಪ್ರಯೋಗದ ಮೂಲಕ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು ವಾಗ್ವಾದ ನಡೆಸಿಕೊಳ್ಳುತ್ತಿವೆ. ಅದೂ ಈಗ ‘ಪಪ್ಪು’ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿರುವುದು ಟಿಎಂಸಿ ನಾಯಕಿ ಮೊಹುವಾ ಮೊಯಿತ್ರಾ ಮತ್ತು ಬಿಜೆಪಿ ನಾಯಕಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಧ್ಯೆ !

ದೇಶದ ಆರ್ಥಿಕತೆ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸೋತಿದೆ ಎಂದು ಮಂಗಳವಾರ ಲೋಕಸಭೆಯಲ್ಲಿ ವಾಗ್ದಾಳಿ ನಡೆಸಿದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆರ್ಥಿಕತೆಗೆ ಸಂಬಂಧಪಟ್ಟಂತೆ ಕೆಲವು ಅಂಕಿ-ಅಂಶಗಳನ್ನು ಉಲ್ಲೇಖಿಸಿ, ‘ಆರ್ಥಿಕತೆ ಚೇತರಿಕೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ ಅಂಕಿ-ಅಂಶಗಳು ನಮ್ಮೆದುರು ಎಲ್ಲವನ್ನೂ ಬಿಚ್ಚಿಡುತ್ತವೆ. ‘ಪಪ್ಪು’ ಎಂಬ ಶಬ್ದವನ್ನು ಹುಟ್ಟುಹಾಕಿದ್ದೇ ಬಿಜೆಪಿ ಕೇಂದ್ರ ಸರ್ಕಾರ. ಅತಿಯಾದ ಅಸಮರ್ಥತೆ, ವಿಫಲತೆಯನ್ನು ಸೂಚಿಸಲು ಬಿಜೆಪಿ ನಾಯಕರು ಈ ಪದ ಬಳಸುತ್ತಾರೆ. ಆದರೆ ಆರ್ಥಿಕ ಕ್ಷೇತ್ರದ ವಿಫಲತೆ ತೋರಿಸುವ ಅಂಕಿ-ಅಂಶಗಳು ಪಪ್ಪು ಯಾರೆಂದು ನಮಗೆ ಸ್ಪಷ್ಟ ಚಿತ್ರಣ ಕೊಡುತ್ತಿವೆ’ ಎಂದು ಮಹುವಾ ಹೇಳಿದ್ದರು.

ಭಾರತದ ಆರ್ಥಿಕತೆ ಬೆಳೆಯುತ್ತಿದೆ ಎಂದು ನರೇಂದ್ರ ಮೋದಿ ಸರ್ಕಾರ ಸುಳ್ಳು ಮಾಹಿತಿ ಹಬ್ಬಿಸುತ್ತಿದೆ. ನಿರ್ಮಲಾ ಸೀತಾರಾಮನ್​ ಅವರು ದಯವಿಟ್ಟು ಆರ್ಥಿಕತೆ ಮೇಲೆ ಹಿಡಿತ ಸಾಧಿಸಬೇಕು ಎಂದು ಹೇಳಿದ್ದ ಮಹುವಾ ‘ನ್ಯಾಶನಲ್​ ಸ್ಟ್ಯಾಟಿಸ್ಟಿಕ್ಸ್​ ಆಫೀಸ್​(NSO)ಬಿಡುಗಡೆ ಮಾಡಿದ್ದ ದತ್ತಾಂಶಗಳನ್ನು ಉಲ್ಲೇಖಿಸಿ ‘ಕೈಗಾರಿಕಾ ಉತ್ಪಾದನೆ ಸೂಚ್ಯಂಕ ನಿರ್ಧರಿಸುವ 17 ಉದ್ಯಮ ವಲಯಗಳು ಋಣಾತ್ಮಕ ಬೆಳವಣಿಗೆ ದಾಖಲಿಸಿವೆ. ವಿದೇಶಿ ವಿನಿಮಯದ ಮೀಸಲು ವರ್ಷಸದಲ್ಲಿ 72 ಶತಕೋಟಿ ಡಾಲರ್​ ಕುಸಿದಿದೆ’ ಎಂದು ಲೋಕಸಭೆಯಲ್ಲಿ ತಿಳಿಸಿದ್ದರು.

ನಿರ್ಮಲಾ ಸೀತಾರಾಮನ್​ ತಿರುಗೇಟು
ಹೀಗೆ ಬಿಜೆಪಿ ಕೇಂದ್ರ ಸರ್ಕಾರವನ್ನೇ ಪಪ್ಪು ಎಂದ ಮಹುವಾ ಅವರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬುಧವಾರ ಲೋಕಸಭೆಯಲ್ಲಿ ಖಡಕ್​ ತಿರುಗೇಟು ಕೊಟ್ಟಿದ್ದಾರೆ. ‘ಪಪ್ಪು’ವನ್ನು ನಾವು ಪಶ್ಚಿಮ ಬಂಗಾಳದಲ್ಲೂ ನೋಡಬಹುದು. ಜನರು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪಕ್ಷಕ್ಕೆ ಸಿಕ್ಕ ಜನಾದೇಶವೆಂಬ ‘ಬೆಂಕಿ ಕಡ್ಡಿ’ಗಳು ರಾಜ್ಯವನ್ನು ಲೂಟಿ ಮಾಡಲು ಮತ್ತು ಬೆಂಕಿ ಹಚ್ಚಲು ಬಳಕೆಯಾಗುತ್ತಿರುವುದು ದುರಂತ’ ಎಂದು ಹೇಳಿದ್ದಾರೆ. ‘ಯಾವತ್ತೂ ಜನರು ರಾಜಕೀಯ ಪಕ್ಷಗಳ ಕೈಯಿಗೆ ಕೊಡುವುದು ಬೆಂಕಿಕಡ್ಡಿಗಳನ್ನೇ. ಅದನ್ನು ಬಳಸಿಕೊಳ್ಳುವುದು ರಾಜಕೀಯ ಪಕ್ಷಗಳ ಕೈಯಲ್ಲೇ ಇರುತ್ತದೆ. ಆ ಬೆಂಕಿಕಡ್ಡಿಗಳಿಂದ ಅನಾಹುತ ಆದರೆ ಅದಕ್ಕೆ ಹೊಣೆ ರಾಜಕೀಯ ಪಕ್ಷಗಳೇ ಹೊರತು, ಅದನ್ನು ಕೊಟ್ಟ ಜನರು ಖಂಡಿತ ಅಲ್ಲ. ಈ ವಿಚಾರದಲ್ಲಿ ಪಶ್ಚಿಮ ಬಂಗಾಳ ಸರ್ಕಾರ ‘ಪಪ್ಪು’ ಎಂದು ನಿರ್ಮಲಾ ಸೀತಾರಾಮನ್​ ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನೂತನ ನಿವಾಸಕ್ಕೆ ಕರ್ತವ್ಯ ಭ್ರಷ್ಟರ ಮಠ ಎಂದು ಹೆಸರಿಡಿ; ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ವ್ಯಂಗ್ಯ

Exit mobile version