Site icon Vistara News

ಮುರ್ಮು VS ಸಿನ್ಹಾ: ಇಂದು ಹೊರಬೀಳಲಿದೆ ರಾಷ್ಟ್ರಪತಿ ಚುನಾವಣೆ ಫಲಿತಾಂಶ

Murmu Vs Sinha 1

ನವ ದೆಹಲಿ: ಭಾರತದ ಮುಂದಿನ ರಾಷ್ಟ್ರಪತಿ ಯಾರು? ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರೋ, ಪ್ರತಿಪಕ್ಷಗಳ ಒಕ್ಕೂಟದ ಜಂಟಿ ಅಭ್ಯರ್ಥಿ ಯಶವಂತ್‌ ಸಿನ್ಹಾರೋ? ಈ ಪ್ರಶ್ನೆಗೆ ಇಂದು ಉತ್ತರ ಸಿಗುತ್ತದೆ. ಜುಲೈ 18ರಂದು ನಡೆದ ರಾಷ್ಟ್ರಪತಿ ಹುದ್ದೆ ಚುನಾವಣೆಯ ಮತ ಎಣಿಕೆ‌ ಸಂಸತ್ತಿನಲ್ಲಿ ಇಂದು ಬೆಳಗ್ಗೆ 11ಗಂಟೆಯಿಂದ ಪ್ರಾರಂಭವಾಗಲಿದ್ದು, ಸಂಜೆಯವರೆಗೆ ನಡೆಯಲಿದೆ. ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಚುನಾವಣೆಯ ಬ್ಯಾಲೆಟ್‌ ಬಾಕ್ಸ್‌ಗಳು ಈಗಾಗಲೇ ದೆಹಲಿ ತಲುಪಿವೆ. ದ್ರೌಪದಿ ಮುರ್ಮು ಗೆಲುವು ನಿಶ್ಚಿತ ಎಂದೇ ಹೇಳಲಾಗುತ್ತಿದ್ದರೂ ಸಂಜೆ ಹೊತ್ತಿಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. ಹಾಗೊಮ್ಮೆ ದ್ರೌಪದಿ ಮುರ್ಮು ಗೆದ್ದಿದ್ದೇ ಆದರೆ, ಬುಡಕಟ್ಟು ಜನಾಂಗದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಹಾಗೇ, ಪ್ರತಿಭಾ ಪಾಟೀಲ್‌ ನಂತರ ರಾಷ್ಟ್ರಪತಿ ಹುದ್ದೆಗೆ ಏರಿದ ಮೊದಲ ಮಹಿಳೆಯೂ ಆಗಲಿದ್ದಾರೆ.

ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆದಿತ್ತು. ದೆಹಲಿಯ ಸಂಸತ್ತು ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 30 ಮತಕೇಂದ್ರಗಳಲ್ಲಿ ಮತದಾನ ಯಶಸ್ವಿಯಾಗಿ ನಡೆದಿತ್ತು. 771 ಸಂಸದರು ಮತ್ತು 4025 ಶಾಸಕರು ಸೇರಿ ಒಟ್ಟು 4,796 ಅರ್ಹ ಮತದಾರರು ವೋಟ್‌ ಮಾಡಿದ್ದರು. ದೇಶಾದ್ಯಂತ ಒಟ್ಟಾರೆ ಮತದಾನ ಶೇ.99ರಷ್ಟಾಗಿತ್ತು. ಅದರಲ್ಲಿ ಛತ್ತೀಸ್‌ಗಢ, ಗೋವಾ, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ಮಿಜೋರಾಂ, ಪುದುಚೇರಿ, ಸಿಕ್ಕಿಮ್‌, ತಮಿಳು ನಾಡು, ಕೇರಳ, ಗುಜರಾತ್‌, ಹಿಮಾಚಲ ಪ್ರದೇಶದಲ್ಲಿ 100ಕ್ಕೆ 100ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಅಲ್ಲಲ್ಲಿ ನಡೆದಿತ್ತು ಅಡ್ಡಮತದಾನ
ಕಳೆದ ರಾಜ್ಯಸಭೆ ಚುನಾವಣೆಯಂತೆ ರಾಷ್ಟ್ರಪತಿ ಚುನಾವಣೆಯಲ್ಲೂ ಅಡ್ಡಮತದಾನ ನಡೆದಿತ್ತು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಏಳು ಶಾಸಕರು, ಇಬ್ಬರು ಸಂಸದರು ದ್ರೌಪದಿ ಮುರ್ಮುಗೆ ಮತದಾನ ಮಾಡಿಲ್ಲ. ಬದಲಾಗಿ ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್‌ ಸಿನ್ಹಾಗೆ ಮತ ಹಾಕಿದ್ದರು. ಇನ್ನೊಂದೆಡೆ ಕಾಂಗ್ರೆಸ್‌ನ ಶಾಸಕ/ಸಂಸದರು ಸೇರಿ 20 ಜನರು, ಎನ್‌ಸಿಪಿ, ಸಮಾಜವಾದಿ ಪಕ್ಷದ ಶಾಸಕರೂ ಕೆಲವರು ದ್ರೌಪದಿ ಮುರ್ಮು ಅವರಿಗೆ ಮತ ಹಾಕಿದ್ದಾರೆ.

ಇದನ್ನೂ ಓದಿ: ‘ಮಿಸ್ಟರ್​​ ಮತಪೆಟ್ಟಿಗೆ’ ನವದೆಹಲಿಗೆ ಪ್ರಯಾಣಿಸಿದರು! ಇದು ರಾಷ್ಟ್ರಪತಿ ಚುನಾವಣೆ ಸ್ವಾರಸ್ಯ

ಯಾರಿವರು ದ್ರೌಪದಿ ಮುರ್ಮು
64ವರ್ಷದ ದ್ರೌಪದಿ ಮುರ್ಮು ಒಡಿಶಾದ ಮಯೂರ್‌ಭಂಜ್‌ ಎಂಬಲ್ಲಿನ ಬುಡಕಟ್ಟು ಸಮುದಾಯ ಒಂದರಲ್ಲಿ ಜನಿಸಿದವರು. ಬಿಎ ವರೆಗೂ ಶಿಕ್ಷಣ ಪಡೆದಿದ್ದು, ರಾಜಕಾರಣ ಸೇರುವ ಮುನ್ನ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. 1997ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. 2000ದಲ್ಲಿ ರಾಯ್‌ರಂಗ್‌ಪುರ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾದರು. ನವೀನ್‌ ಕುಮಾರ್‌ ಪಾಟ್ನಾಯಿಕ್‌ ಅವರ ಸಚಿವ ಸಂಪುಟದಲ್ಲಿ ಸಾರಿಗೆ, ವಾಣಿಜ್ಯ, ಮೀನುಗಾರಿಕೆ ಸಚಿವರಾಗಿ ಕಾರ್ಯ ನಿರ್ವಹಿಸಿದರು. 2004ರಲ್ಲಿ ಮತ್ತೆ ಶಾಸಕಿಯಾಗಿ ಆರಿಸಿ ಬಂದರು. 2006ರಲ್ಲಿ ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಛಾದ ಅಧ್ಯಕ್ಷೆಯಾದರು. 2015ರಲ್ಲಿ ಮುರ್ಮು ಅವರನ್ನು ಜಾರ್ಖಂಡ್‌ನ ರಾಜ್ಯಪಾಲರನ್ನಾಗಿ ಆಯ್ಕೆ ಮಾಡಲಾಯಿತು.

ಯಶವಂತ್‌ ಸಿನ್ಹಾ ಪರಿಚಯ
85ವರ್ಷದ ಯಶವಂತ್‌ ಸಿನ್ಹಾ ಅವರು ಮೂಲತಃ ಐಎಎಸ್‌ ಅಧಿಕಾರಿ. 1984ರಲ್ಲಿ ಈ ಹುದ್ದೆಗೆ ರಾಜೀನಾಮೆ ಕೊಟ್ಟು ಜನತಾ ದಳ ಸೇರ್ಪಡೆಯಾದರು. ನಂತರ 1996ರಲ್ಲಿ ಬಿಜೆಪಿಗೆ ಸೇರಿ ರಾಷ್ಟ್ರೀಯ ವಕ್ತಾರರಾದರು. ನಂತರ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಆಡಳಿತದಲ್ಲಿ ಅವರು, ಹಣಕಾಸು ಸಚಿವರು, ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಪೂರ್ವ ಅವರು ಬಿಜೆಪಿ ವಿರುದ್ಧ ಅಸಮಾಧಾನಗೊಂಡು ಟಿಎಂಸಿ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ: ಉಪರಾಷ್ಟ್ರಪತಿ ಚುನಾವಣೆ; ರಾಹುಲ್‌, ಪವಾರ್‌ ಜತೆ ತೆರಳಿ ನಾಮಪತ್ರ ಸಲ್ಲಿಸಿದ ಮಾರ್ಗರೆಟ್‌ ಆಳ್ವಾ

Exit mobile version