Site icon Vistara News

ಬಿಜೆಪಿ-ಆರ್​ಎಸ್​ಎಸ್​ ಯಾಕೆ ಜೈ ಸಿಯಾ ರಾಮ್​ ಘೋಷಣೆ ಕೂಗೋದಿಲ್ಲ; ವ್ಯಂಗ್ಯ ಮಾಡಿ ಕಾರಣ ತಿಳಿಸಿದ ರಾಹುಲ್ ಗಾಂಧಿ

Bomb Threat for Rahul Gandhi

ಭೋಪಾಲ್​: ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ರಾವಣನಿಗೆ ಹೋಲಿಸಿದ್ದರು. ಈಗ ರಾಹುಲ್ ಗಾಂಧಿ ‘ರಾಮ’ನ ಹೆಸರಲ್ಲಿ ಬಿಜೆಪಿ ಮತ್ತು ಆರ್​ಎಸ್​ಎಸ್​​ನ್ನು ಟೀಕಿಸಿದ್ದಾರೆ. ‘ಜೈ ಶ್ರೀರಾಮ್​​’ ಮತ್ತು ‘ಜೈ ಸಿಯಾ ರಾಮ್​’ ಎಂಬ ಘೋಷಣೆಗಳ ಮಧ್ಯೆ ಇರುವ ವ್ಯತ್ಯಾವನ್ನು ಬಿಜೆಪಿ-ಆರ್​ಎಸ್​ಎಸ್​​ಗೆ ಪಾಠ ಮಾಡಿದ್ದಾರೆ.

ಮಧ್ಯಪ್ರದೇಶದಲ್ಲಿ, ಭಾರತ್​ ಜೋಡೋ ಯಾತ್ರೆಯಲ್ಲಿ ಮಾತನಾಡಿದ ಅವರು ‘ಗಾಂಧೀಜಿಯವರು ಹೇ ರಾಮ್​ ಎನ್ನುತ್ತಿದ್ದರು. ರಾಮ ಎಂದರೆ ಕೇವಲ ದೇವರಲ್ಲ, ಪ್ರೀತಿ, ಸಹೋದರತ್ವ, ಗೌರವ ಮತ್ತು ತಪಸ್ಸಿನ ಸಂಕೇತ. ಇಂಥ ರಾಮ ನಮ್ಮೊಳಗೇ ಇದ್ದಾನೆ ಮತ್ತು ನಾವು ಅವನನ್ನು ಅನುಸರಿಸಬೇಕು ಎಂಬುದು ಇದರ ಅರ್ಥ’ ಎಂದು ಹೇಳಿದ ರಾಹುಲ್​ ಗಾಂಧಿ, ‘ಜೈ ಸಿಯಾ ರಾಮ್​’ ಎಂಬ ಘೋಷಣೆಯನ್ನು ನಾವೆಲ್ಲ ಸಾಮಾನ್ಯವಾಗಿ ಬಳಸುತ್ತೇವೆ. ಅಂದರೆ ಸೀತಾ ಮತ್ತು ರಾಮ ಇಬ್ಬರೂ ಒಂದೇ. ರಾಮನ ಜೀವನ ಮಾರ್ಗ, ಶ್ರೀರಾಮ ತನ್ನ ಪತ್ನಿ ಸೀತಾಳಿಗಾಗಿ ಏನೆಲ್ಲ ಮಾಡಿದ? ಸೀತಾ ದೇವಿಯನ್ನು ಅದೆಷ್ಟು ಗೌರವದಿಂದ ನಡೆಸಿಕೊಂಡ ಎಂಬ ಭಾವಾರ್ಥವನ್ನು ಈ ಘೋಷಣೆ ಒಳಗೊಂಡಿದೆ. ಇಂಥ ಸೀತಾ-ರಾಮರನ್ನು ಒಟ್ಟಿಗೇ ಸ್ಮರಿಸಬೇಕು. ಹೀಗಾಗಿ ಜೈ ಸಿಯಾ ರಾಮ್​ ಎನ್ನುವ ಘೋಷಣೆ ಮಾಡಬೇಕು ಎಂದು ಹೇಳಿದರು.

ಹಾಗೇ, ಜೈ ಶ್ರೀರಾಮ್​ ಘೋಷಣೆಯ ಅರ್ಥ ವಿವರಿಸಿದ ಅವರು, ‘ಜೈ ಶ್ರೀರಾಮ್​ ಎಂದರೆ ಶ್ರೀರಾಮನ ಸ್ಮರಣೆ. ಆದರೆ ರಾಮನನ್ನು ಸೀತಾ ಮಾತೆ ಸಹಿತವೇ ಪೂಜಿಸಬೇಕು, ಭಜಿಸಬೇಕು ಎಂದು ನನಗೆ ವಿದ್ವಾಂಸರು ಹೇಳಿದ್ದಾರೆ. ಬಿಜೆಪಿಯವರು ಯಾಕೆ ಯಾವಾಗಲೂ ‘ಜೈ ಶ್ರೀರಾಮ್​’ ಎನ್ನುತ್ತಾರೆ. ಅವರು ಯಾಕೆ ‘ಜೈ ಸಿಯಾ ರಾಮ್ ಅಥವಾ ಹೇ ರಾಮ್​’​ ಅನ್ನೋದಿಲ್ಲ ಎಂದು ನೀವು ಪ್ರಶ್ನೆ ಮಾಡಿ ಎಂದು ನನ್ನ ಬಳಿ ಪಂಡಿತರು ಕೇಳಿದ್ದಾರೆ ಎಂದು ರಾಹುಲ್​ ಗಾಂಧಿ ಹೇಳಿಕೊಂಡಿದ್ದಾರೆ.

ಬಿಜೆಪಿಯವರು ಯಾಕೆ ಇವೆರಡೂ ಸ್ಲೋಗನ್ ಹೇಳುವುದಿಲ್ಲ ಎಂಬುದಕ್ಕೂ ರಾಹುಲ್​ ಗಾಂಧಿಯೇ ವಿವರಣೆ ಕೊಟ್ಟಿದ್ದಾರೆ. ‘ಆರ್​ಎಸ್​ಎಸ್​ನಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನವಿಲ್ಲ. ಅವರು ಎಂದಿಗೂ ಶ್ರೀರಾಮನ ಜೀವನವನ್ನು ಮಾರ್ಗದರ್ಶನವನ್ನಾಗಿ, ಆದರ್ಶವನ್ನಾಗಿ ಇಟ್ಟುಕೊಂಡಿಲ್ಲ. ಆರ್​ಎಸ್​ಎಸ್​ನವರೇ ಬಹುಪಾಲು ಜನ ಬಿಜೆಪಿಗೆ ಬಂದಿದ್ದರಿಂದ, ಬಿಜೆಪಿಯಲ್ಲೂ ಅದೇ ಸಂಸ್ಕೃತಿ ಮುಂದುವರಿದಿದೆ. ಹೀಗಾಗಿ ಬಿಜೆಪಿ ಮತ್ತು ಆರ್​ಎಸ್​ಎಸ್​ನವರು ಜೈ ಸಿಯಾ ರಾಮ್​ ಎಂದಾಗಲೀ, ಹೇ ರಾಮ್​ ಎಂದಾಗಲಿ ಘೋಷಣೆ ಕೂಗುವುದಿಲ್ಲ. ಸಮಾಜದ ಯಾವುದೇ ವರ್ಗಕ್ಕೂ ಶ್ರೀರಾಮ ತಾರತಮ್ಯ ತೋರಿಸಲಿಲ್ಲ. ಸಮಾಜನ್ನು ಒಂದುಗೂಡಿಸುವ ಕೆಲಸ ಮಾಡಿದ. ರೈತರು, ಉದ್ಯಮಿಗಳು, ಕಾರ್ಮಿಕರು, ಶ್ರಮಿಕರು ಎಲ್ಲರಿಗೂ ನ್ಯಾಯ ಒದಗಿಸಿದ. ಆದರೆ ಬಿಜೆಪಿಯವರು ಏನು ಮಾಡುತ್ತಿದ್ದಾರೆ?’ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ ‘ಇನ್ನು ಮುಂದೆ ಸೀತೆಯನ್ನೂ ಜಪಿಸಿ, ಜೈ ಸಿಯಾ ರಾಮ್​, ಹೇ ರಾಮ್​ ಮತ್ತು ಜೈ ಶ್ರೀರಾಮ್​ ಎಂಬ ಮೂರು ಘೋಷಣೆಗಳನ್ನೂ ಕೂಗಿ’ ಎಂದು ಆರ್​ಎಸ್​ಎಸ್​ ಮತ್ತು ಬಿಜೆಪಿಗೆ ಸಲಹೆ ನೀಡಿದ್ದಾರೆ.

ರಾಹುಲ್​ ಗಾಂಧಿ ಭಾಷಣದ ವಿಡಿಯೊವನ್ನು ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡ ಕಾಂಗ್ರೆಸ್​ ‘ಸೀತೆ ಇಲ್ಲದೆ ಶ್ರೀರಾಮ ಅಪೂರ್ಣ. ಶ್ರೀರಾಮ ಸೀತೆಗಾಗಿಯೇ ಯುದ್ಧ ಮಾಡಿದ. ಇಬ್ಬರ ಹೆಸರನ್ನೂ ಒಟ್ಟಿಗೇ ಹೇಳಬೇಕು ಎಂದೇ ನಾವು ಜೈ ಸಿಯಾ ರಾಮ್​ ಎನ್ನುತ್ತೇವೆ. ಈ ಮೂಲಕ ಸೀತೆಯನ್ನೂ ಜಪಿಸುತ್ತೇವೆ ಮತ್ತು ಎಲ್ಲ ಮಹಿಳೆಯರೂ ಸೀತೆಯಂತೆ ಪರಿಗಣಿಸುತ್ತೇವೆ ಎಂದು ಕ್ಯಾಪ್ಷನ್​ ಬರೆದಿದೆ. ಹಾಗೇ, ಕೊನೆಯಲ್ಲಿ ಜೈ ಸಿಯಾ ರಾಮ್​ ಎಂಬ ಘೋಷಣೆಯನ್ನು ಬರೆದಿದೆ.

ಇದನ್ನೂ ಓದಿ: Video| ಭಾರತ್​ ಜೋಡೋ ಯಾತ್ರೆಗೆ ನಟಿ ಸ್ವರಾ ಭಾಸ್ಕರ್​ ಸಾಥ್​; ರಾಹುಲ್ ಗಾಂಧಿ ಜತೆ ಮಾತು-ನಡಿಗೆ

Exit mobile version