ಕೋಲ್ಕತ್ತ: ಪಶ್ಚಿಮ ಬಂಗಾಳಕ್ಕೂ-ಕಾಳಿ ದೇವಿಗೂ ಅವಿನಾಭಾವ ಸಂಬಂಧ. ʼಜೈ ಕಾಳಿ..ಕಲ್ಕತ್ತಾ ವಾಲಿʼ ಎಂಬ ನಾಣ್ಣುಡಿಯೂ ಪ್ರಸಿದ್ಧವಾಗಿದೆ. ಅಲ್ಲಿ ಕಾಳಿ, ದುರ್ಗಾ ಮಾತೆಯ ಪೂಜೆ ಬಹುದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಪಶ್ಚಿಮ ಬಂಗಾಳದ ಸಂಸ್ಕೃತಿ-ಪರಂಪರೆಯನ್ನೆಲ್ಲ ಕಾಳಿ ಮಾತೆ ಆಕ್ರಮಿಸಿಕೊಂಡಿದ್ದಾಳೆ ಎಂದರೂ ತಪ್ಪಾಗಲಾರದು. ಆಕೆಯನ್ನೊಂದು ಉಗ್ರ ದೇವತೆಯನ್ನಾಗಿ, ರಕ್ಕಸ ಸಂಹಾರಿಣಿಯಾಗಿ ಪೂಜೆ ಮಾಡುವ ಜತೆ ಅದೆಷ್ಟೋ ಜನರು ಕಾಳಿಯೇ ತಮ್ಮ ಅಮ್ಮ ಎಂದು ನಂಬುತ್ತಾರೆ. ಅಷ್ಟೇ ಅಲ್ಲ, ಇನ್ನೂ ಹಲವರಿಗೆ ಕಾಳಿ ಮಾತೆ ತಮ್ಮ ಮನೆಯ ಸದಸ್ಯರಲ್ಲಿ ಒಬ್ಬಳು ಎಂಬ ಭಾವನೆಯೂ ಇದೆ.
ಪಶ್ಚಿಮ ಬಂಗಾಳದಲ್ಲಿ 100ಕ್ಕೂ ಹೆಚ್ಚು ಕಾಳಿ ದೇವಸ್ಥಾನಗಳು ಇವೆ. ಒಂದೊಂದು ದೇಗುಲಕ್ಕೂ ಅದರದ್ದೇ ಆದ ಪೌರಾಣಿಕ ಮಹತ್ವ ಇದೆ. ದಂತ ಕತೆಯೂ ಇದೆ. ಹಾಗೇ, ಒಂದೊಂದು ದೇವಾಲಯದಲ್ಲೂ ಒಂದೊಂದು ಕಾಳಿ ಪೂಜೆಗಾಗಿ ಒಂದೊಂದು ಆಚರಣೆಯೂ ಇದೆ. ಅದರಲ್ಲೂ ಕಾಳಿಘಾಟ್, ತಾರಾಪೀಠ್ ಮತ್ತು ದಕ್ಷಿಣೇಶ್ವರಗಳಲ್ಲೆಲ್ಲ ಕಾಳಿ ಮಾತೆ ಪೂಜೆ ವಿಭಿನ್ನವಾಗಿ ನಡೆಯುತ್ತಿದೆ.
ಕಾಳಿ ಘಾಟ್: ಇದು ಸುಮಾರು 200 ವರ್ಷಗಳ ಹಳೇ ದೇವಸ್ಥಾನ. ದೇಶದ 51 ಶಕ್ತಿಪೀಠಗಳಲ್ಲಿ ಒಂದು. ಇಲ್ಲಿ ಪ್ರತಿದಿನ ಪ್ರಾಣಿಬಲಿ ಆಗಲೇಬೇಕು. ಒಬ್ಬರಲ್ಲ ಒಬ್ಬ ಭಕ್ತರು ದೇವಿಗೆ ಬಲಿ ಕೊಡಲೆಂದು ಪ್ರಾಣಿಗಳನ್ನು ತಂದೇ ತರುತ್ತಾರೆ. ಅವರ ನಂಬಿಕೆ ಅದು ಎಂದು ಇಲ್ಲಿನ ಅರ್ಚಕರೇ ಹೇಳುತ್ತಾರೆ. ಇನ್ನೊಂದೇನೆಂದರೆ ಹೀಗೆ ಬಲಿಕೊಟ್ಟ ಪ್ರಾಣಿಯ ಮಾಂಸವನ್ನು ಅಡುಗೆ ಮಾಡಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಕೊಡಲಾಗುತ್ತದೆ. ಇಲ್ಲಿನ ಮೂಲ ದೇವಿಗೆ ಸಸ್ಯಾಹಾರಿ ನೈವೇದ್ಯವನ್ನೇ ಕೊಡಲಾಗುತ್ತದೆ. ಆದರೆ ಅವಳೊಂದಿಗೆ ಇರುವ ಸಹಚಾರಿಣಿಯರಾದ ಡಾಕಿನಿ-ಯೋಗಿನಿಯರಿಗೆ ಕಡ್ಡಾಯವಾಗಿ ಪ್ರಾಣಿ ಬಲಿಯಾಗಬೇಕು.
ತಾರಾಪೀಠ್, ಬಿರ್ಬುಮ್: ತಾರಾಪೀಠ್ ಎಂಬುದು ಪಶ್ಚಿಮ ಬಂಗಾಳದ ಇನ್ನೊಂದು ಶಕ್ತಿ ಪೀಠ. ಇಲ್ಲಿ ತಾರಾ ದೇವಿ ನೈವೇದ್ಯಕ್ಕೆ ಮೀನು ಮತ್ತು ಮಾಂಸಗಳನ್ನು ಕೊಡಲಾಗುತ್ತದೆ. ಅಷ್ಟೇ ಅಲ್ಲ, ಇಲ್ಲಿ ಕರಣ ಸುಧಾ ಅಥವಾ ಮದ್ಯವನ್ನೂ ಕೂಡ ದೇವಿಗೆ ಕೊಡಲೇಬೇಕು. ಇದರೊಂದಿಗೆ ಹಣ್ಣುಗಳ ನೈವೇದ್ಯವೂ ಆಗುತ್ತದೆ. ಅದರೊಂದಿಗೆ ಶ್ರೀ ರಾಮಕೃಷ್ಣ ದಕ್ಷಿಣೇಶ್ವರ ದೇವಸ್ಥಾನದಲ್ಲಿರುವ ದೇವಿಗೆ ಕೂಡ ನಿತ್ಯವೂ ಪ್ರಾಣಿಬಲಿ, ಮೀನು ನೈವೇದ್ಯ ಮಾಡಲಾಗುತ್ತದೆ.
ತಾಂಥನಿಯಾ ಕಾಳಿಬರಿ, ಕೋಲ್ಕತ್ತ: ಥಾಂಥನಿಯಾದಲ್ಲಿರುವ ಕಾಳಿ ದೇವಸ್ಥಾನ 300 ವರ್ಷ ಹಳೇದು. ಇದು ಕೋಲ್ಕತ್ತದ ಉತ್ತರ ಭಾಗದಲ್ಲಿದೆ. ಈ ದೇವಿಗೆ ಮೀನು ಇಲ್ಲದೆ ನೈವೇದ್ಯ ಪೂರ್ಣವಾಗುವುದೇ ಇಲ್ಲ. ಹಾಗೇ, ಪ್ರತಿ ಹುಣ್ಣಿಮೆ ದಿನ ಪ್ರಾಣಿ ಬಲಿಯಾಗುತ್ತದೆ. ದೇವಸ್ಥಾನದಿಂದಲೇ ಇಲ್ಲಿ ಬಲಿ ಪೂಜೆ ನಡೆಯುತ್ತದೆ. ಅದರ ಹೊರತಾಗಿ ಹಲವು ಭಕ್ತರು ಹರಕೆ ರೂಪದಲ್ಲಿ ತಂದು ಪ್ರಾಣಿಗಳನ್ನು ಬಲಿಕೊಡುತ್ತಾರೆ.
ಯಾಕೆ ಪ್ರಾಣಿ ಬಲಿ, ಮೀನು ನೈವೇದ್ಯ?
ತಾರಾಪೀಠ್ ಸೇರಿ ಇನ್ನೂ ಹಲವು ಕಡೆಗಳಲ್ಲಿ ಕಾಳಿ ದೇವಿಗೆ ಮಾಂಸಾಹಾರ, ಸಸ್ಯಾಹಾರಗಳನ್ನು ನೈವೇದ್ಯಕ್ಕೆ ನೀಡುತ್ತಾರೆ. ಯಾಕೆ ಹೀಗೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ಅದೊಂದು ನಂಬಿಕೆ. ತುಂಬ ಪುರಾತನ ಕಾಲದಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ಅಂದಹಾಗೇ, ಈ ಮದ್ಯ-ಮಾಂಸಗಳ ಅರ್ಪಣೆ ಪದ್ಧತಿ ಇರುವುದು ತಂತ್ರ ಸಾಧನದಲ್ಲಿ. ಆ ತಂತ್ರಪೂಜೆಯಲ್ಲಿ ಪಾಲ್ಗೊಳ್ಳುವರಿಗೆ ಮಾತ್ರ ಅದಕ್ಕೆ ನಿಖರವಾದ ಕಾರಣ ಗೊತ್ತು. ಉಳಿದವರೆದ್ದಲ್ಲ ನಂಬಿಕೆ ಎಂದು ವಿದ್ವಾಂಸರಾದ ನೃಸಿಂಗ ಪ್ರಸಾದ್ ಭಾದುರಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಿತ್ತಾಟವಿಲ್ಲದೆ ಸ್ಥಳಾಂತರಗೊಂಡ ದರ್ಗಾ; ಕಾಳಿ ಮಾತೆ ದೇಗುಲದ ಗೋಪುರ ಧ್ವಜ ಹಾರಿಸಿದ ಪ್ರಧಾನಿ