ನವ ದೆಹಲಿ: ಭಾರತ್ ಜೋಡೋ ಯಾತ್ರೆ ಪ್ರಾರಂಭವಾಗಿ ಮೂರು ತಿಂಗಳಾಯಿತು. ರಾಹುಲ್ ಗಾಂಧಿ ನೇತೃತ್ವದಲ್ಲಿ ನಿರಂತರವಾಗಿ ಪಾದಯಾತ್ರೆ ನಡೆಯುತ್ತಿದೆ. ತಮಿಳುನಾಡು, ಕೇರಳ, ಕರ್ನಾಟಕ, ರಾಜಸ್ಥಾನಗಳನ್ನೆಲ್ಲ ಸಂಚರಿಸಿ ಈಗ ರಾಷ್ಟ್ರರಾಜಧಾನಿಗೆ ಕಾಲಿಟ್ಟಿದೆ. ಹೀಗೆ ಮೂರುತಿಂಗಳ ಪಾದಯಾತ್ರೆಯಲ್ಲಿ ನಾವೊಂದು ವಿಷಯ ಗಮನಿಸಬೇಕು. ರಾಹುಲ್ ಗಾಂಧಿಯವರು ಬಿಳಿ ಬಣ್ಣದ ಟಿ ಶರ್ಟ್ ಧರಿಸಿಯೇ ಕಾಲ್ನಡಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಂತೂ ದೆಹಲಿಯಲ್ಲಿ ವಿಪರೀತ ಚಳಿ ಬೀಳುತ್ತಿದ್ದರೂ ಬರೀ ಟೀ ಶರ್ಟ್ ಧರಿಸಿ, ಅದರ ಮೇಲೊಂದು ಜರ್ಕಿನ್, ಸ್ವೆಟರ್ ಕೂಡ ಹಾಕಿಕೊಳ್ಳದೆ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ.
ಯಾಕೆ ಹೀಗೆ? ಚಳಿಯಾಗುತ್ತಿದ್ದರೂ ಟಿ ಶರ್ಟ್ ಬಿಟ್ಟು ಬೇರೆ ಬಟ್ಟೆ ಯಾಕೆ ಧರಿಸುತ್ತಿಲ್ಲ ಎಂಬುದನ್ನು ರಾಹುಲ್ ಗಾಂಧಿ, ದೆಹಲಿ ಕೆಂಪುಕೋಟೆ ಬಳಿ ಸಾರ್ವಜನಿಕರನ್ನು ಉದೇಶಿಸಿ ಮಾತನಾಡುವಾಗ ತಿಳಿಸಿದ್ದಾರೆ. ‘ನಾನು ಹೀಗೆ ಟಿ ಶರ್ಟ್ ಧರಿಸಿ ಪಾದಯಾತ್ರೆ ನಡೆಸುತ್ತಿದ್ದಾಗ ಮಾಧ್ಯಮ ಪ್ರತಿನಿಧಿಗಳು ಬಂದು ನನ್ನ ಬಳಿ ಕೇಳುತ್ತಾರೆ. ಇಷ್ಟು ಚಳಿ ಬೀಳುತ್ತಿದ್ದರೂ ನೀವ್ಯಾಕೆ ಬರಿ ಟಿ ಶರ್ಟ್ನಲ್ಲಿ ಪಾದಯಾತ್ರೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸುತ್ತಾರೆ. ಆದರೆ ಅವರು ಇದೇ ಪ್ರಶ್ನೆಯನ್ನು ಯಾಕೆ ರೈತರ ಬಳಿಯೋ, ಕೂಲಿ ಕಾರ್ಮಿಕರ ಬಳಿಯೋ, ಬಡ ಮಕ್ಕಳ ಬಳಿಯೋ ಹೋಗಿ ಕೇಳುವುದಿಲ್ಲ?’ ಎಂದು ಪ್ರಶ್ನಿಸಿದ್ದಾರೆ. ಅಂದರೆ ‘ಬಡವರು, ರೈತರು, ಕೂಲಿ ಕಾರ್ಮಿಕರೆಲ್ಲ ಬಿಸಿಲು, ಮಳೆ, ಚಳಿಯಲ್ಲೇ ಕಷ್ಟಪಡುತ್ತಿದ್ದಾರೆ. ಈ ಭಾರತ್ ಜೋಡೋ ಯಾತ್ರೆಯಲ್ಲಿ ನಾನು ಅವರೆಲ್ಲರನ್ನೂ ಪ್ರತಿಬಿಂಬಿಸುತ್ತಿದ್ದೇನೆ’ ಎಂಬ ಅರ್ಥದಲ್ಲಿ ರಾಹುಲ್ ಗಾಂಧಿ ಈ ಮಾತುಗಳನ್ನಾಡಿದ್ದಾರೆ.
‘ನಾನು ಈಗಾಗಲೇ 2800 ಕಿಲೋಮೀಟರ್ ದೂರ ನಡೆದೆ. ಆದರೆ ಇದೇನೂ ದೊಡ್ಡ ವಿಷಯವಲ್ಲ. ರೈತರು ಒಂದು ದಿನಕ್ಕೆ ಅದೆಷ್ಟೋ ಕಿಲೋಮೀಟರ್ ದೂರ ನಡೆಯುತ್ತಾರೆ. ಕೂಲಿ ಕಾರ್ಮಿಕರು, ಕಾರ್ಖಾನೆಯ ಕೆಲಸಗಾರರು..ಹೀಗೆ ಶ್ರಮಿಕ ವರ್ಗದವರು ಪ್ರತಿದಿನ ನಡೆಯುತ್ತಾರೆ. ಅವರಿಗೂ ಚಳಿಯಾಗುತ್ತದೆ..ಸೆಖೆಯಾಗುತ್ತದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: Jagdish Tytler | ಟೀಕೆ ಹಿನ್ನೆಲೆ ಭಾರತ್ ಜೋಡೋ ಯಾತ್ರೆಯಿಂದ ಹಿಂದೆ ಸರಿದ ಸಿಖ್ ವಿರೋಧಿ ದಂಗೆ ಆರೋಪಿ ಟೈಟ್ಲರ್