Site icon Vistara News

ಆರ್​ಎಸ್​​ಎಸ್​ ಯಾಕೆ ಸೋಷಿಯಲ್​ ಮೀಡಿಯಾ ಪ್ರೊಫೈಲ್​​ಗೆ ರಾಷ್ಟ್ರಧ್ವಜ ಫೋಟೋ ಹಾಕಿಲ್ಲ?

RSS

ನವ ದೆಹಲಿ: ಆಗಸ್ಟ್​ 2ರಿಂದ 15ರವರೆಗೆ ಸೋಷಿಯಲ್ ಮೀಡಿಯಾಗಳಲ್ಲಿ ರಾಷ್ಟ್ರಧ್ವಜದ ಫೋಟೋ ಹಾಕಿ ಎಂದು ಪ್ರಧಾನಿ ಮೋದಿಯವರು ಕರೆ ಕೊಟ್ಟಿದ್ದರೂ ರಾಷ್ಟ್ರೀಯ ಸ್ವಯಂ ಸಂಘದ ಪ್ರೊಫೈಲ್​ ಆಗಲಿ, ಅದರ ನಾಯಕರ ಪ್ರೊಫೈಲ್​ ಫೋಟೋವಾಗಲೀ ಯಾಕಿನ್ನೂ ಬದಲಾಗಿಲ್ಲ? ರಾಷ್ಟ್ರಧ್ವಜದ ಚಿತ್ರವನ್ನು ಅವರೇಕೆ ಹಾಕಿಲ್ಲ?, ಹರ್​ ಘರ್​ ತಿರಂಗಾ (Har Ghar Tiranga) ಅಭಿಯಾನಕ್ಕೆ ಸಂಘಪರಿವಾರದ ಬೆಂಬಲ ಇಲ್ಲವೇ? ಎಂಬಿತ್ಯಾದಿ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಹರಿದಾಡುತ್ತಿದ್ದವು. ಕೇಂದ್ರ ಸರ್ಕಾರ ಹೇಳಿದ್ದನ್ನು ಆರ್​ಎಸ್​ಎಸ್​​ನವರೇ ಕೇಳೋದಿಲ್ಲಲ್ಲವಲ್ಲ..! ಎಂಬ ಟೀಕೆಯೂ ವ್ಯಕ್ತವಾಗಿತ್ತು. ಅದಕ್ಕೀಗ ಆರ್​ಎಸ್​​ಎಸ್​ ಪ್ರತಿಕ್ರಿಯೆ ನೀಡಿದೆ.

‘ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ಮತ್ತು ಹರ್​ ಘರ್​ ತಿರಂಗಾ ಅಭಿಯಾನಕ್ಕೆ ನಾವು ಸಂಪೂರ್ಣ ಬೆಂಬಲ ಘೋಷಿಸಿದ್ದೇವೆ. ನಮ್ಮ ಸಂಘದ ಕಾರ್ಯಕರ್ತರೂ ಕೂಡ ಈ ಅಭಿಯಾನಗಳಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಕೆಲವು ಖಾಸಗಿ ಕಂಪನಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮಗಳು, ಉಪಕ್ರಮಗಳಲ್ಲೂ ನಾವು ಭಾಗಿಯಾಗಿದ್ದೇವೆ. ಇದರಲ್ಲೆಲ್ಲ ರಾಜಕೀಯ ಬೆರೆಸಬಾರದು’ ಎಂದು ಆರ್​ಎಸ್​ಎಸ್​ನ ಅಖಿಲ ಭಾರತೀಯ ಪ್ರಚಾರ ಪ್ರಮುಖ್​ ಸುನಿಲ್ ಅಂಬೇಕರ್​ ತಿಳಿಸಿದ್ದಾರೆ.

ಸೋಷಿಯಲ್​ ಮೀಡಿಯಾಗಳಲ್ಲಿ ಮಾಡಲಾಗುತ್ತಿರುವ ವ್ಯಂಗ್ಯದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುನಿಲ್ ಅಂಬೇಕರ್, ‘ಇಂಥ ವ್ಯಂಗ್ಯ ಮಾಡುತ್ತಿರುವವರು ಯಾರು ಎಂಬುದು ನಮಗೆ ಗೊತ್ತು. ಆ ಪಕ್ಷದ ಉದ್ದೇಶವೇ ದೇಶವನ್ನು ಒಡೆಯುವುದು’ ಎಂದು ಹೇಳಿದರು. ಹಾಗಂತ ಯಾವುದೇ ಪಕ್ಷದ ಹೆಸರನ್ನೂ ಅವರು ಇಲ್ಲಿ ಹೇಳಲಿಲ್ಲ. ‘ಹಾಗೇ, ಸೋಷಿಯಲ್ ಮೀಡಿಯಾಗಳಲ್ಲಿ ಆಗುತ್ತಿರುವ ಚರ್ಚೆಯ ಬಗ್ಗೆ ತುಂಬ ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮದೇ ಆದ ರೀತಿಯಲ್ಲಿ ನಾವು ಇದನ್ನು ನಿಭಾಯಿಸುತ್ತೇವೆ. ಆಜಾದಿ ಕಾ ಅಮೃತ ಮಹೋತ್ಸವವನ್ನು ಹೇಗೆ ಆಚರಣೆ ಮಾಡಬೇಕು ಎಂದಷ್ಟೇ ನಾವು ಯೋಚಿಸುತ್ತಿದ್ದೇವೆ ಹೊರತು ಬೇರೆ ಯಾವುದರ ಬಗ್ಗೆಯೂ ಚಿಂತಿಸುತ್ತಿಲ್ಲ ಎಂದು ಹೇಳಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಅದರದ್ದೇ ಆದ ನಿಲುವು ಇದೆ. ನಮ್ಮ ಸಿದ್ಧಾಂತವನ್ನು ರಾಜಕೀಯಗೊಳಿಸುವ ಅಗತ್ಯವಿಲ್ಲ ಎಂದೂ ತಿಳಿಸಿದರು.

ರಾಷ್ಟ್ರಧ್ವಜ ವಿನ್ಯಾಸಕರಾದ ಪಿಂಗಳಿ ವೆಂಕಯ್ಯನವರ ಜನ್ಮದಿನ ಆಗಸ್ಟ್​ 2ರಂದು. ಹೀಗಾಗಿ ಆಗಸ್ಟ್​ 2ರಿಂದ 15ರವರೆಗೆ ದೇಶವಾಸಿಗಳು ಸೋಷಿಯಲ್​ ಮೀಡಿಯಾದಲ್ಲಿ ಪ್ರೊಫೈಲ್​ ಫೋಟೋವನ್ನು ರಾಷ್ಟ್ರಧ್ವಜದ ಚಿತ್ರವಾಗಿ ಬದಲಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್​ ಕೀ ಬಾತ್​ ಕಾರ್ಯಕ್ರಮದಲ್ಲಿ ಕರೆಕೊಟ್ಟಿದ್ದರು. ಸ್ವತಃ ತಾವೂ ತಮ್ಮ ಫೇಸ್​ಬುಕ್​, ಟ್ವಿಟರ್​​ನಲ್ಲಿ ಪ್ರೊಫೈಲ್​​ ಬದಲಿಸಿಕೊಂಡಿದ್ದಾರೆ. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಜವಾಹರ್​ ಲಾಲ್​ ನೆಹರೂ ಅವರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ನಿಂತಿರುವ ಫೋಟೋ ಹಾಕಿಕೊಂಡಿದ್ದಾರೆ.

ಇದನ್ನೂ ಓದಿ: Har Ghar Tiranga | ಪ್ರಧಾನಿ ಮೋದಿ ಕರೆಕೊಟ್ಟ ಹರ್​ ಘರ್​ ತಿರಂಗಾಕ್ಕೆ ಭರ್ಜರಿ ಟ್ವಿಸ್ಟ್​ ಕೊಟ್ಟ ಕಾಂಗ್ರೆಸ್​

Exit mobile version