Site icon Vistara News

Modi Birthday | ಶಾಂಘೈ ಶೃಂಗಸಭೆಯಲ್ಲಿ ಎದುರು ಸಿಕ್ಕರೂ ಮೋದಿಗೆ ಬರ್ತ್​ ಡೇ ವಿಶ್​ ಮಾಡಲಿಲ್ಲ ಪುಟಿನ್​; ಯಾಕೆ?

Vladimir Putin not wish PM Modi For His Birthday Why

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು 72ನೇ ವರ್ಷದ ಹುಟ್ಟಿದ ಹಬ್ಬ (Modi Birthday) ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ನಿನ್ನೆ ಶುಕ್ರವಾರ (ಸೆ.16) ಅವರು ಉಜ್ಬೇಕಿಸ್ತಾನ್​​ದ ಸಮರ್​ಕಂಡ್​​ನಲ್ಲಿ ಇದ್ದರು. ಅಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆ (SCO)ದಲ್ಲಿ ಭಾಗವಹಿಸಿದ್ದರು. ಈ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​, ಚೀನಾ ಅಧ್ಯಕ್ಷ ಷಿ ಜಿನ್​​ಪಿಂಗ್​, ಇರಾನ್​ ನೂತನ ಅಧ್ಯಕ್ಷ ಇಬ್ರಾಹಿಂ ರೈಸಿ, ಉಜ್ಬೆಕಿಸ್ತಾನದ ಅಧ್ಯಕ್ಷ ಶೌಕತ್ ಮಿರಿಝಿಯೊಯೆವ್ ಮತ್ತಿತರ ಗಣ್ಯರು ಪಾಲ್ಗೊಂಡು ಪರಸ್ಪರ ದ್ವಿಪಕ್ಷೀಯ ಮಾತುಕತೆಗಳೆಲ್ಲ ನಡೆದವು.

ಶುಕ್ರವಾರ (ಸೆ.16) ಈ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಪಾಲ್ಗೊಂಡ ಜಾಗತಿಕ ನಾಯಕರು, ಪ್ರಮುಖರೆಲ್ಲ ಪ್ರಧಾನಿ ನರೇಂದ್ರ ಮೋದಿಗೆ ಮುಂಚಿತವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಸೆ.17ರಂದು ಪ್ರಧಾನಿ ಹುಟ್ಟುಹಬ್ಬವಿದ್ದರೂ, ಇಂದೇ ಎದುರಿಗೇ ಸಿಕ್ಕಿದ್ದಾರಲ್ಲ, ಶುಭ ಹಾರೈಸೋಣ ಎಂದು ಎಲ್ಲರೂ ಮೋದಿಯವರ ಕೈಕುಲುಕಿ ‘ಹ್ಯಾಪಿ ಬರ್ತ್​ ಡೇ’ ಹೇಳಿದ್ದರು. ಆದರೆ ಉಳಿದವರೆಲ್ಲ ವಿಶ್​ ಮಾಡಿದ್ದರೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಮಾತ್ರ ಪ್ರಧಾನಿ ಮೋದಿಗೆ ಸೆ.16ರಂದು ಹುಟ್ಟುಹಬ್ಬದ ಶುಭಾಶಯ ತಿಳಿಸಿರಲಿಲ್ಲ. ಈ ಬಗ್ಗೆ ಅದಾಗಲೇ ಚರ್ಚೆ ಪ್ರಾರಂಭವಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಎಂದರೆ ಪುಟಿನ್​​ಗೆ ವಿಶೇಷ ಗೌರವ ಇದೆ. ಉತ್ತಮ ಸ್ನೇಹವೂ ಇದೆ. ಹಾಗಿದ್ದಾಗ್ಯೂ ಶೃಂಗಸಭೆಯಲ್ಲಿ ಉಳಿದೆಲ್ಲ ನಾಯಕರೂ ಮೋದಿಗೆ ಮುಂಚಿತವಾಗಿಯೇ ಹುಟ್ಟುಹಬ್ಬದ ವಿಶ್​ ಮಾಡಿದರೂ ಇವರ್ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆಗೆ ನಂತರ ಪುಟಿನ್​ ಉತ್ತರಿಸಿದ್ದಾರೆ. ‘ಪ್ರಧಾನಿ ಮೋದಿ ನನ್ನ ಅತ್ಯುತ್ತಮ ಸ್ನೇಹಿತ. ನನಗೆ ಗೊತ್ತಿದೆ ಸೆಪ್ಟೆಂಬರ್​ 17ಕ್ಕೆ ಅವರ ಹುಟ್ಟಿದ ಹಬ್ಬವಿದೆ ಎಂಬುದು. ಆದರೆ ಉಳಿದವರಂತೆ ನಾನು ಮುಂಚಿತವಾಗಿ ವಿಶ್​ ಮಾಡಲಾರೆ. ಯಾಕೆಂದರೆ ನಮ್ಮ ರಷ್ಯಾ ಸಂಸ್ಕೃತಿಯ ಪ್ರಕಾರ ಜನ್ಮದಿನದ ವಿಶ್​​ನ್ನು ನಾವು ಮೊದಲ ದಿನವಾಗಲಿ, ಮುಂಚಿತವಾಗಲೀ ಮಾಡುವಂತಿಲ್ಲ. ಹಾಗಾಗಿ ಭಾರತಕ್ಕೆ ಒಳ್ಳೆಯದಾಗಲಿ, ಮೋದಿಗೆ ಒಳ್ಳೆಯದಾಗಲಿ ಎಂದಷ್ಟೇ ಹಾರೈಸಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Modi Birthday | ಮೋದಿ ಬರ್ತ್​ ಡೇ ದಿನ ಹುಟ್ಟುವ ಮಕ್ಕಳಿಗೆ ಚಿನ್ನದ ಉಂಗುರ ನೀಡಲಿದೆ ತಮಿಳುನಾಡು ಬಿಜೆಪಿ

Exit mobile version