ಕೋಲ್ಕೊತಾ: ಪಶ್ಚಿಮ ಬಂಗಾಳದ ಹೌರಾ ಹಾಗೂ ಹೂಗ್ಲಿಯಲ್ಲಿ ರಾಮನವಮಿ ಮೆರವಣಿಗೆ ವೇಳೆ ಭಾರಿ ಹಿಂಸಾಚಾರ ನಡೆದಿದೆ. ಮೆರವಣಿಗೆ ಮೇಲೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚುವುದು ಹಾಗೂ ಅಂಗಡಿ ಮುಂಗಟ್ಟುಗಳನ್ನು ಧ್ವಂಸಗೊಳಿಸುವುದು ಸೇರಿ ಹಲವು ರೀತಿಯಲ್ಲಿ ಹಿಂಸಾಚಾರ (Bengal Violence) ನಡೆದಿದೆ. ಇನ್ನು ಹಿಂಸಾಚಾರ ಪ್ರಕರಣವು ರಾಜಕೀಯ ಮೇಲಾಟಕ್ಕೆ ಕಾರಣವಾಗಿದ್ದು, ಅಲ್ಪಸಂಖ್ಯಾತರ ಪ್ರದೇಶಗಳಿಗೆ ಅನುಮತಿ ಪಡೆಯದೆ ಬಿಜೆಪಿ ಮೆರವಣಿಗೆ ಹೋಗಿದ್ದೇ ತಪ್ಪು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯು ಮಮತಾ ಬ್ಯಾನರ್ಜಿ ವಿರುದ್ಧ ಆರೋಪ ಮಾಡಿದೆ. ಇದರ ಬೆನ್ನಲ್ಲೇ, ಪಶ್ಚಿಮ ಬಂಗಾಳ ಮೌಲ್ವಿಯೊಬ್ಬರು ಮುಸ್ಲಿಮರು ನಡೆಸಿದ ಕಲ್ಲುತೂರಾಟವನ್ನು ಸಮರ್ಥಿಸಿಕೊಂಡಿದ್ದಾರೆ.
“ಆಜಾನ್ ಕೂಗುವ ಸಮಯದಲ್ಲಿಯೇ ಹಿಂದುಗಳು ಏಕೆ ರಾಮನವಮಿ ಮೆರವಣಿಗೆ ಕೈಗೊಳ್ಳಬೇಕಿತ್ತು? ಆಜಾನ್‌ಗಿಂತ ಮೊದಲು ಅಥವಾ ಆಜಾನ್ ನಂತರದಲ್ಲಿ ಮೆರವಣಿಗೆ ನಡೆಸಬಹುದಿತ್ತು. ಆ ಮೂಲಕ ಹಿಂಸಾಚಾರವನ್ನು ಅವರು ತಡೆಯಬೇಕಿತ್ತು. ಆದರೆ, ಆಜಾನ್ ಕೂಗುವ ಸಮಯದಲ್ಲಿಯೇ ಮೆರವಣಿಗೆ ಸಾಗಿ ಬಂದ ಹಿನ್ನೆಲೆಯಲ್ಲಿ ಹಿಂಸಾಚಾರ ನಡೆದಿದೆ” ಎಂದು ಮುಸ್ಲಿಮರು ನಡೆಸಿದ ಕಲ್ಲು ತೂರಾಟವನ್ನು ಫುರ್ಫುರಾ ಶರೀಫ್ ಮೌಲ್ವಿ ಪಿರ್ಜಾದಾ ನಿಜಾಮುದ್ದೀನ್ ಹುಸೇನ್ ಸಮರ್ಥಿಸಿಕೊಂಡಿದ್ದಾರೆ. ಎಬಿಪಿ ನ್ಯೂಸ್ ಜತೆ ಮಾತನಾಡುವ ವೇಳೆ ಅವರು ಹಿಂಸಾಚಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಮುಸ್ಲಿಮರೇ ಗುರಿ, ನಡೆಯುತ್ತಿದೆ ಪಿತೂರಿ
“ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರನ್ನು ಗುರಿಯಾಗಿಸಲಾಗುತ್ತಿದೆ. ಆಜಾನ್ ಕೂಗುವಾಗ ಇಲ್ಲವೇ ಉಪವಾಸ (ರೋಜಾ) ಅಂತ್ಯಗೊಳಿಸುವಾಗಲೇ ಮೆರವಣಿಗೆ ಕೈಗೊಳ್ಳುವುದರ ಹಿಂದೆ ಬಿಜೆಪಿ ಕೈವಾಡವಿದೆ. ರಾಜ್ಯದಲ್ಲಿ ಭಾರಿ ದೊಡ್ಡ ರಾಜಕೀಯ ನಡೆಯುತ್ತಿದೆ. ರಾಜನೀತಿಯ ಯೋಜನೆ ರೂಪಿಸಲಾಗುತ್ತಿದೆ” ಎಂದು ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಶ್ಚಿಮ ಬಂಗಾಳದ ಹೌರಾದಲ್ಲಿ ಮಾರ್ಚ್ 30ರಂದು ರಾಮನವಮಿ ಮೆರವಣಿಗೆ ಸಾಗುವಾಗ ಕಲ್ಲು ತೂರಾಟ ನಡೆಸಲಾಗಿತ್ತು. ಮನೆಯ ಚಾವಣಿ ಮೇಲಿನಿಂದ ಕಲ್ಲು ತೂರಾಟ ಮಾಡಲಾಗಿತ್ತು. ಇದರಿಂದಾಗಿ ಹೌರಾದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇನ್ನು ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಅವರು ಮಾತನಾಡಿದ್ದಾರೆ. “ರಾಮನವಮಿಯ ಮೆರವಣಿಗೆ ಐದು ದಿನಗಳವರೆಗೆ ನಡೆಸಿದ್ದು ಏಕೆ? ಇಂತಹ ಆಚರಣೆಗಳನ್ನು ಒಂದು ದಿನ ನಡೆಸಿ, ಒಂದೇ ದಿನದಲ್ಲಿ ಮೆರವಣಿಗೆ ಮುಗಿಸಬೇಕು. ಇದಕ್ಕೆ ನಮ್ಮ ವಿರೋಧವೇನೂ ಇಲ್ಲ. ಆದರೆ, ಐದು ದಿನಗಳವರೆಗೆ ಮೆರವಣಿಗೆ ನಡೆಸಬಾರದು. ಮೆರವಣಿಗೆ ವೇಳೆ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಬಾರದು. ಆದರೆ, ಬಿಜೆಪಿಯು ಉದ್ದೇಶಪೂರ್ವಕವಾಗಿಯೇ ಅನುಮತಿ ಇಲ್ಲದೆ ಅಲ್ಪಸಂಖ್ಯಾತರ ಪ್ರದೇಶಗಳಲ್ಲಿ ಮೆರವಣಿಗೆ ನಡೆಸಿದೆ. ರಿಶ್ರಾದಲ್ಲಿ ಮಾರ್ಚ್ 2ರಂದು ಹೀಗೆಯೇ ಶಸ್ತ್ರಾಸ್ತ್ರಗಳ ಸಮೇತ ಬಿಜೆಪಿ ಮೆರವಣಿಗೆ ನಡೆಸಿದೆ” ಎಂದು ಆರೋಪಿಸಿದ್ದಾರೆ. ಅತ್ತ ಬಿಜೆಪಿಯು, ಪಶ್ಚಿಮ ಬಂಗಾಳವು ಪಾಕಿಸ್ತಾನವಾಗಿ ಬದಲಾಗುತ್ತಿದೆ ಎಂದು ದೂರಿದೆ.
ಇದನ್ನೂ ಓದಿ: ಮುಸ್ಲಿಮರ ಪ್ರದೇಶಗಳಲ್ಲಿ ರಾಮನವಮಿ ಮೆರವಣಿಗೆಯೇ ತಪ್ಪು; ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ