Site icon Vistara News

ಅತೀಕ್​-ಅಶ್ರಫ್​​ನನ್ನು ಆಸ್ಪತ್ರೆಗೆ ಕಾಲ್ನಡಿಗೆಯಲ್ಲಿ ಕರೆದುಕೊಂಡು ಹೋಗಿದ್ದೇಕೆ?; ಸುಪ್ರೀಂಕೋರ್ಟ್​ ಪ್ರಶ್ನೆ

Why were Atiq Ahmed taken in an ambulance to the hospital Ask Supreme court to UP Government

#image_title

ಲಖನೌ: ಉತ್ತರ ಪ್ರದೇಶದ ಗ್ಯಾಂಗ್​ಸ್ಟರ್​ ಅತೀಕ್​ ಅಹ್ಮದ್ (Atiq Ahmed Murder​​) ಮತ್ತು ಆತನ ಸಹೋದರ ಅಶ್ರಫ್​ ಅಹ್ಮದ್​​ನ ಹತ್ಯೆ ಕೇಸ್​​ನ್ನು ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ (Supreme Court)​ ‘ಅತೀಕ್​ ಅಹ್ಮದ್​ ಮತ್ತು ಅಶ್ರಾಫ್​​ನನ್ನು ಯಾಕೆ ಆಸ್ಪತ್ರೆ ಬಾಗಿಲಿನವರೆಗೂ ಆ್ಯಂಬುಲೆನ್ಸ್​ನಲ್ಲಿ ಕರೆದೊಯ್ಯಲಾಗಿಲ್ಲ? ಪೊಲೀಸ್ ವಾಹನವನ್ನು ಆಸ್ಪತ್ರೆಯ ಗೇಟ್​ಗಿಂತಲೂ ಸ್ವಲ್ಪ ದೂರ ನಿಲ್ಲಿಸಿ, ಅಲ್ಲಿಂದ ಯಾಕೆ ನಡೆಸಿಕೊಂಡು ಹೋಗಲಾಯಿತು?‘ ಎಂದು ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದೆ. ಹಾಗೇ, ಈ ಬಗ್ಗೆ ಇನ್ನು ಮೂರು ವಾರದಲ್ಲಿ ವರದಿ ನೀಡುವಂತೆ ಸೂಚಿಸಿದೆ. ಅಷ್ಟೇ ಅಲ್ಲ ‘ಅತೀಕ್ ಅಹ್ಮದ್ ಮತ್ತು ಅಶ್ರಾಫ್​ ಹತ್ಯೆಯನ್ನು ನಾವು ಟಿವಿಯಲ್ಲಿ ನೋಡಿದ್ದೇವೆ. ಆ ಶೂಟರ್​ಗಳಿಗೆ ಅದೇ ದಿನ ಅತೀಕ್ ಮತ್ತು ಅಶ್ರಾಫ್​ನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾರೆ ಎಂಬುದು ಹೇಗೆ ಗೊತ್ತಾಯಿತು?’ ಎಂದೂ ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ.

ಬಿಎಸ್​​ಪಿ ಶಾಸಕ ರಾಜು ಪಾಲ್​ ಹತ್ಯೆಯ ಆರೋಪಿಗಳಾದ ಗ್ಯಾಂಗ್​ಸ್ಟರ್​/ರಾಜಕಾರಣಿ ಅತೀಕ್​ ಅಹ್ಮದ್​ ಮತ್ತು ಆತನ ತಮ್ಮ ಅಶ್ರಾಫ್ ಅಹ್ಮದ್​ನ ಹತ್ಯೆಯ ಬೆನ್ನಲ್ಲೇ ವಕೀಲ ವಿಶಾಲ್​ ತಿವಾರಿ ಎಂಬುವರು ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದ್ದರು. 2017ರಿಂದ ಉತ್ತರ ಪ್ರದೇಶದಲ್ಲಿ 183 ಎನ್​ಕೌಂಟರ್​ಗಳಾಗಿವೆ. ಈ ಎನ್​ಕೌಂಟರ್​​ಗಳ ಸತ್ಯಾಸತ್ಯತೆ ಬಗ್ಗೆ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದರು. ಹಾಗೇ, ಇತ್ತೀಚೆಗೆ ನಡೆದ ಅತೀಕ್​ ಅಹ್ಮದ್ ಮತ್ತು ಅಶ್ರಾಫ್ ಅಹ್ಮದ್​ ಹತ್ಯೆ, ಅದಕ್ಕೂ ಮೊದಲು ನಡೆದ ಅತೀಕ್ ಪುತ್ರ ಅಸಾದ್​ ಅಹ್ಮದ್ ಎನ್​ಕೌಂಟರ್​ನ್ನು ತನಿಖೆ ನಡೆಸುವಂತೆಯೂ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದರು. ಒಟ್ಟಾರೆ ಎನ್​ಕೌಂಟರ್​​ಗಳ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಬೇಕು ಎಂದೂ ಬೇಡಿಕೆಯಿಟ್ಟಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್​.ರವೀಂದ್ರ ಭಟ್​ ಮತ್ತು ದೀಪಾಂಕರ್​ ದತ್ತಾ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ: Atiq Ahmad : ಅತೀಕ್‌ ಅಹ್ಮದ್‌ ಪರ ಘೋಷಣೆ ಕೂಗುವವರಿಗೆ ಕಂಡಲ್ಲಿ ಗುಂಡಿಕ್ಕಬೇಕು ಎಂದು ಖಂಡಿಸಿದ ಕೇಂದ್ರ ಸಚಿವ

ಇಂದು ನ್ಯಾಯಾಲಯದಲ್ಲಿ ಉತ್ತರಿಸಿದ ಉತ್ತರ ಪ್ರದೇಶ ಸರ್ಕಾರ ‘ಅತೀಕ್​ ಮತ್ತು ಅಶ್ರಾಫ್​ ಹತ್ಯೆ ಕೇಸ್​ ತನಿಖೆ ನಡೆಸಲು ನ್ಯಾಯಾಂಗ ಆಯೋಗವನ್ನು ರಚಿಸಲಾಗಿದೆ. ಆದರೂ ಅರ್ಜಿದಾರರು ತನಿಖಾ ಆಯೋಗ ರಚಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಸರ್ಕಾರವನ್ನೇ ಅನುಮಾನಿಸುತ್ತಿದ್ದಾರೆ. ಕೋರ್ಟ್​ನ ಆದೇಶದಂತೆ ಅತೀಕ್​ ಅಹ್ಮದ್​ ಮತ್ತು ಅಶ್ರಫ್​ನನ್ನು ಎರಡು ದಿನಗಳಿಗೆ ಒಮ್ಮೆ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವಿಷಯ ಮಾಧ್ಯಮದವರಿಗೆ ಗೊತ್ತೇ ಇದೆ. ಅತೀಕ್ ಮತ್ತು ಅವನ ಇಡೀ ಕುಟುಂಬದವರು ಕಳೆದ 30ವರ್ಷಗಳಿಂದಲೂ ಹಲವು ಕ್ರೈಂಗಳನ್ನು ನಡೆಸಿದ್ದಾರೆ. ಆದರೂ ಅವರಿಬ್ಬರು ಹತ್ಯೆಗೀಡಾಗಿದ್ದು ದುರಂತ. ಶೂಟರ್​ಗಳನ್ನು ನಾವೀಗಾಗಲೇ ಬಂಧಿಸಿದ್ದೇವೆ’ ಎಂದು ಉತ್ತರ ಪ್ರದೇಶ ಸರ್ಕಾರದ ಪರ ವಕೀಲ ಮುಕುಲ್ ರೋಹಟಗಿ ಕೋರ್ಟ್​​ನಲ್ಲಿ ವಾದಿಸಿದ್ದಾರೆ.

Exit mobile version