ಕೊಚ್ಚಿ: ಇತ್ತೀಚೆಗೆ ಸಮಾಜದಲ್ಲಿ ಯೂಸ್ ಆ್ಯಂಡ್ ಥ್ರೋ (ಒಂದು ಸಲ ಬಳಸಿ, ಬಿಸಾಡುವ) ಸಂಸ್ಕೃತಿ ಹೆಚ್ಚಾಗುತ್ತಿದೆ. ಇದನ್ನು ಈಗಿನ ಪೀಳಿಗೆಯವರು ತಮ್ಮ ವೈವಾಹಿಕ ಜೀವನಕ್ಕೂ ಅಳವಡಿಸಿಕೊಳ್ಳುತ್ತಿರುವುದು ಖೇದಕರ ಎಂದು ಕೇರಳ ಹೈಕೋರ್ಟ್ ಹೇಳಿದೆ. 51 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ವಿಚ್ಛೇದನಾ ಅರ್ಜಿಯನ್ನು ತಿರಸ್ಕರಿಸಿದ ಕೇರಳ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಎ.ಮುಹಮ್ಮದ್ ಮುಸ್ತಾಕ್ ಮತ್ತು ಸೋಫಿ ಥಾಮಸ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ‘ಈಗಿನ ಪೀಳಿಗೆಯ ಜನರು ಮದುವೆ ಒಂದು ಕೆಟ್ಟ ಸಂಪ್ರದಾಯ ಎಂದು ಭಾವಿಸಿದ್ದಾರೆ. ಹೀಗಾಗಿ ಲಿವ್ ಇನ್ ರಿಲೇಶನ್ಶಿಪ್’ಗಳು ಜಾಸ್ತಿಯಾಗುತ್ತಿವೆ. ಜನರಲ್ಲಾಗುತ್ತಿರುವ ಮಾನಸಿಕ ಬದಲಾವಣೆ, ಸಮಾಜದ ಮನಸಾಕ್ಷಿಯನ್ನು ಕದಡುತ್ತಿರುವುದು ವಿಷಾದನೀಯ’ ಎಂದೂ ಹೇಳಿದೆ.
ತನ್ನ ಪತ್ನಿಯಿಂದ ಹಿಂಸೆಯಾಗುತ್ತಿದೆ, ನನಗೆ ವಿಚ್ಛೇದನ ಬೇಕು ಎಂದು 51 ವರ್ಷದ ವ್ಯಕ್ತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಎ.ಮುಹಮ್ಮದ್ ಮುಸ್ತಾಕ್ ಮತ್ತು ನ್ಯಾ. ಸೋಫಿ ಥಾಮಸ್ ಆಗಸ್ಟ್ 24ರಂದು ತೀರ್ಪು ನೀಡಿದ್ದಾರೆ. ‘ಅರ್ಜಿದಾರರಿಗೆ 2017ರಿಂದಲೂ ಇನ್ನೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇರುವುದು ದೃಢವಾಗಿದೆ. ಹಾಗಿದ್ದಾಗ್ಯೂ ಇವರ ಪತ್ನಿಗೆ ವಿಚ್ಛೇದನ ನೀಡಲು ಸಂಪೂರ್ಣ ಮನಸ್ಸಿಲ್ಲ. ಪತಿ ಮರಳಿ ಬಂದರೆ, ಅವರೊಂದಿಗೆ ಬದುಕಲು ಸಿದ್ಧನಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ದಂಪತಿಗೆ ಮೂವರು ಪುತ್ರಿಯರೂ ಇದ್ದಾರೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅರ್ಜಿ ತಿರಸ್ಕರಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಅಂದ ಹಾಗೇ, ಪ್ರಸ್ತುತ ಕೇಸ್ನಲ್ಲಿ ಈ ದಂಪತಿ 2009ರಲ್ಲಿ ಸೌದಿ ಅರೇಬಿಯಾದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ವಿವಾಹ ಆಗಿದ್ದರು. ಮೂಲತಃ ಆಲಪ್ಪುಳ ಜಿಲ್ಲೆಯವರಾದ ದಂಪತಿ, ಸೌದಿ ಅರೇಬಿಯಾದಲ್ಲಿ ವಾಸವಾಗಿದ್ದರು. 2018ರಲ್ಲಿ ಪತಿ ವಿಚ್ಛೇದನ ಬೇಕು ಎಂದು ಒಂದು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತನಗೆ ಪತ್ನಿಯಿಂದ ಹಿಂಸೆಯಾಗುತ್ತಿದೆ ಎಂಬುದು ಅವರ ಆರೋಪವಾಗಿತ್ತೇ ಹೊರತು, ಅದನ್ನು ಸಾಬೀತು ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕೌಟುಂಬಿಕ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು. ಅಷ್ಟಲ್ಲದೆ, ಅವರ ತಾಯಿ ಕೂಡ ತನ್ನ ಸೊಸೆಯ ಪರವಾಗಿಯೇ ನಿಂತಿದ್ದರು. ಹೀಗಾಗಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ನಲ್ಲೂ ಕೂಡ ಆ ವ್ಯಕ್ತಿ ತನಗೆ ಪತ್ನಿಯಿಂದ ಯಾವ ರೀತಿಯ ಹಿಂಸೆ ಆಗುತ್ತಿದೆ ಎಂಬುದನ್ನು ಹೇಳಲು ವಿಫಲರಾಗಿದ್ದರು.
ಹೀಗಾಗಿ ಕೇರಳ ಹೈಕೋರ್ಟ್ ಕೂಡ ಅರ್ಜಿಯನ್ನು ವಜಾ ಮಾಡಿದೆ. ಹಾಗೇ, ತೀರ್ಪು ನೀಡುವಾಗ ಕೆಲವು ಪ್ರಮುಖ ಅಂಶಗಳನ್ನು ಗಮನಿಸಿದೆ. ‘ಈಗಿನ ಜನರು ಸ್ವಚ್ಛಂದ ಬದುಕು ಬಯಸುತ್ತಿದ್ದಾರೆ. ತಾವು ಕಟ್ಟುಪಾಡುಗಳಿಲ್ಲದ ಮುಕ್ತ ಜೀವನ ನಡೆಸಲು ಮದುವೆಯೇ ಅಡ್ಡಿ ಎಂದು ಭಾವಿಸುತ್ತಿದ್ದಾರೆ. ಈ ಕಾಲದ ಹುಡುಗರು WIFE ಎಂಬ ಪದವನ್ನು Worry Invited For Ever (ಪತ್ನಿ ಎಂದರೆ ಶಾಶ್ವತ ಚಿಂತೆಯನ್ನು ಆಹ್ವಾನಿಸಿದಂತೆ) ಎಂಬುದಾಗಿ ಸಂಕ್ಷೇಪಣ ಮಾಡಿಕೊಂಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದೆ.
ಇದನ್ನೂ ಓದಿ: Kerala High Court | ಪ್ರತಿ ಮುಸಲ್ಮಾನರ ಮನೆ ಮುಂದೆ ಮಸೀದಿ ನಿರ್ಮಿಸುತ್ತ ಹೋದರೆ ಹೇಗೆ? ಕೇರಳ ಹೈಕೋರ್ಟ್ ಗರಂ