ನವ ದೆಹಲಿ: ಜಗತ್ತಿನ ಅತ್ಯಂತ ದೊಡ್ಡ ವಜ್ರವಾದ, ಭಾರತೀಯ ಮೂಲದ ಕೊಹಿನೂರ್ ವಜ್ರವನ್ನು ಲಂಡನ್ನಿಂದ ವಾಪಸ್ ತರಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ, ಅದನ್ನು ವಾಪಸ್ ತರಬಹುದಾದ ಮಾರ್ಗವನ್ನು ಹುಡುಕಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇತ್ತೀಚೆಗಷ್ಟೇ ನಿಧನರಾದ ಲಂಡನ್ ರಾಣಿ ಎಲಿಜಬೆತ್-II ಕಿರೀಟದಲ್ಲಿ ಈ ಕೊಹಿನೂರು ವಜ್ರವಿತ್ತು. ಇನ್ನು ಮುಂದೆ ಆ ಕೊಹಿನೂರು ವಜ್ರ ಎಲ್ಲಿರಲಿದೆ ಎಂಬ ಚರ್ಚೆ ಪ್ರಾರಂಭವಾಗಿದೆ. ಈಗಿನ ರಾಜ ಪ್ರಿನ್ಸ್ ಚಾರ್ಲ್ಸ್ ಪತ್ನಿ ಕ್ಯಾಮಿಲ್ಲಾರನ್ನು ಡಚ್ಚಸ್ ಆಫ್ ಕಾರ್ನ್ವಾಲ್ ಎಂದು ಘೋಷಿಸಲಾಗಿದ್ದು, 2023ರ ಮೇ 6ರಂದು ಕ್ವೀನ್ ಆಫ್ ಕಾನ್ಸಾರ್ಟ್ ಆಗಿ ಅಧಿಕೃತವಾಗಿ ಹುದ್ದೆ ವಹಿಸಿಕೊಳ್ಳುತ್ತಾರೆ. ಅಂದಿನ ಸಮಾರಂಭದಲ್ಲಿ ಕ್ಯಾಮಿಲ್ಲಾರಿಗೇ ಈ ಕೊಹಿನೂರು ವಜ್ರವಿರುವ ಕಿರೀಟ ತೊಡಿಸಲಾಗುತ್ತದೆ ಎಂದೂ ಹೇಳಲಾಗುತ್ತಿದೆ.
ಈಗೀಗ ಕೊಹಿನೂರು ವಜ್ರವನ್ನು ಮರಳಿ ಭಾರತಕ್ಕೆ ತರಬೇಕು ಎಂಬ ಆಗ್ರಹ ಹೆಚ್ಚಾಗುತ್ತದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ‘ಕೊಹಿನೂರು ವಜ್ರ ವಾಪಸ್ ತರುವ ಬಗ್ಗೆ ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇದೆ. ಈ ಬಗ್ಗೆ ಮೂರ್ನಾಲ್ಕು ವರ್ಷಗಳ ಹಿಂದೆ ಸಂಸತ್ತಿನಲ್ಲೂ ಪ್ರಸ್ತಾಪ ಮಾಡಲಾಗಿದೆ. ಕಾಲಕಾಲಕ್ಕೆ ಯುಕೆ ಸರ್ಕಾರದೊಂದಿಗೆ ನಾವು ಮಾತುಕತೆ ನಡೆಸುತ್ತಿದ್ದೇವೆ. ಕೊಹಿನೂರು ವಜ್ರದ ವಿಚಾರದಲ್ಲಿ ಒಂದು ತೃಪ್ತಿದಾಯಕ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
105.6 ಕ್ಯಾರೆಟ್ ಡೈಮಂಡ್ವುಳ್ಳ ಕೊಹಿನೂರ್ ವಜ್ರ ಇತಿಹಾಸ ಪ್ರಸಿದ್ಧ. 14ನೇ ಶತಮಾನದಲ್ಲಿ ಭಾರತದಲ್ಲಿ ಸಿಕ್ಕ ಅತ್ಯಮೂಲ್ಯ ವಜ್ರ. ಆದರೆ 1849ರಲ್ಲಿ ಬ್ರಿಟಿಷರು ಭಾರತದ ಪಂಜಾಬ್ನ್ನು ವಶಪಡಿಸಿಕೊಂಡ ನಂತರ ಈ ವಜ್ರ ಅಂದಿನ ರಾಣಿ ವಿಕ್ಟೋರಿಯಾ ಪಾಲಾಯಿತು. ಆಗಿನಿಂದಲೂ ಬ್ರಿಟಿಷ್ ರಾಜಮನೆತನದ ಕಿರೀಟದಲ್ಲಿಯೇ ಇದೆ. ಕೊಹಿನೂರ್ ವಜ್ರ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಇಂದಿಗೂ ಹಲವು ರೀತಿಯ ವಾದಗಳು ಇದ್ದು, ವಿವಾದಗಳು ಅಸ್ತಿತ್ವದಲ್ಲಿವೆ.
ಇದನ್ನೂ ಓದಿ: Kohinoor Diamond | ಕೊಹಿನೂರು ವಜ್ರ, ಟಿಪ್ಪು ಉಂಗುರ ಸೇರಿ ಬ್ರಿಟಿಷರು ಹೊತ್ತೊಯ್ದ ವಿಶ್ವದ ಅಮೂಲ್ಯ ವಸ್ತು ಯಾವವು?