ನವ ದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19ಕ್ಕೆ ಫಲಿತಾಂಶ ಘೋಷಣೆಯಾಗಲಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ರಾಹುಲ್ ಗಾಂಧಿ ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಅದಾದ ನಂತರ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದರು. ಆದರೆ ಈಗ ಪಕ್ಷಕ್ಕೆ ನೂತನ ಅಧ್ಯಕ್ಷರ ಆಯ್ಕೆ ಆಗಲೇಬೇಕಾದ ಪರಿಸ್ಥಿತಿ ಬಂದಿದ್ದರಿಂದ ಚುನಾವಣೆ ನಡೆಸಲು ವರಿಷ್ಠರು ನಿರ್ಧರಿಸಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ಗೆ ಮತ್ತೆ ರಾಹುಲ್ ಗಾಂಧಿಯೇ ಅಧ್ಯಕ್ಷರಾಗುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಇನ್ನೂ ಸ್ಪಷ್ಟವಾಗಿಲ್ಲ. ‘ಮುಂದಿನ ಅಧ್ಯಕ್ಷರು ನೀವೇ ಹೌದಾ?, ನೀವು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಂತೆ ನಿಜನಾ’ ಎಂದು ರಾಹುಲ್ಗಾಂಧಿಯವರನ್ನು ಪ್ರಶ್ನಿಸಿದಾಗ ಅವರೂ ಕೂಡ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ‘ನಾನು ಕಾಂಗ್ರೆಸ್ಗೆ ಮತ್ತೆ ಅಧ್ಯಕ್ಷನಾಗುತ್ತೇನೋ ಇಲ್ಲವೋ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೋ ಇಲ್ಲವೋ ಎಂಬುದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗಲೇ ಗೊತ್ತಾಗುತ್ತದೆ’ ಎಂದು ಉತ್ತರಿಸಿದ್ದಾರೆ.
ಇಂದು ಭಾರತ್ ಜೋಡೋ ಯಾತ್ರೆ ಪಾದಯಾತ್ರೆ ಮಧ್ಯೆ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಅವರ ಬಳಿ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಬಗ್ಗೆ ಪತ್ರಕರ್ತರು ಪ್ರಶ್ನೆ ಮಾಡಿದ್ದಾರೆ. ಆಗ ರಾಹುಲ್ ಗಾಂಧಿ ಏನನ್ನೂ ಸರಿಯಾಗಿ ಹೇಳಲಿಲ್ಲ. ಬಳಿಕ ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿದ ಅವರು ‘ನಾನೊಬ್ಬ ಕಾಂಗ್ರೆಸ್ ಸದಸ್ಯ. ಹೀಗಾಗಿ ಭಾರತ್ ಜೋಡೋ ಯಾತ್ರೆಯಲ್ಲಿ ನಾನೂ ಪಾಲ್ಗೊಂಡಿದ್ದೇನೆ. ಈ ಯಾತ್ರೆಯ ಮೂಲ ಉದ್ದೇಶ ಭಾರತವನ್ನು ಒಗ್ಗೂಡಿಸುವುದು. ಕಾಂಗ್ರೆಸ್ಗೆ ಉಪಯೋಗ ಆಗುತ್ತದೆ ಎಂಬುದೆಲ್ಲ ನಂತರದ್ದು’ ಎಂದು ಹೇಳಿದರು.
ಇದನ್ನೂ ಓದಿ: Bharat Jodo Yatra | ಕಾಂಗ್ರೆಸ್ ಪುನರುಜ್ಜೀವನಕ್ಕೆ ಭಾರತ್ ಜೋಡೋ ಯಾತ್ರೆ ಅತ್ಯವಶ್ಯ: ಸೋನಿಯಾ ಗಾಂಧಿ