Site icon Vistara News

ರಾಜ್ಯಪಾಲರನ್ನು ಶೂಟ್ ಮಾಡಿ ಕೊಲ್ಲಲು ಉಗ್ರನನ್ನು ಕಳಿಸುತ್ತೇವೆ ಎಂದ ತಮಿಳುನಾಡು ಡಿಎಂಕೆ ನಾಯಕ

Will send terrorist to kill Governor Say DMK Leader

ತಮಿಳುನಾಡಿನದಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಜಟಾಪಟಿ ನಡೆಯುತ್ತಲೇ ಇದೆ. ಕಳೆದ ವಾರ ತಮಿಳುನಾಡು ವಿಧಾನ ಮಂಡಳ ಅಧಿವೇಶನದಲ್ಲಿ ರಾಜ್ಯಪಾಲ ಆರ್​.ಎನ್​.ರವಿ ಭಾಷಣವನ್ನೇನೋ ಮಾಡಿದರು. ಆದರೆ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿದ್ದ ಹಲವು ವಿಷಯಗಳನ್ನು ಕೈಬಿಟ್ಟು, ಬೇರೆಯದ್ದೇ ಮಾತುಗಳನ್ನಾಡಿದರು. ಇದರಿಂದ ಅಸಮಾಧಾನಗೊಂಡ ಸಿಎಂ ಸ್ಟಾಲಿನ್​, ರಾಜ್ಯಪಾಲರ ನಡೆ ವಿರೋಧಿಸಿ ನಿರ್ಣಯ ಮಂಡಿಸಿ, ಅದು ಅಂಗೀಕಾರವೂ ಆಗಿದೆ. ಅಂದಿನಿಂದಲೂ ತಮಿಳುನಾಡು ರಾಜ್ಯಪಾಲ ಆರ್​.ಎನ್​.ರವಿ ಮತ್ತು ಸಿಎಂ ಸ್ಟಾಲಿನ್​ ನಡುವಿನ ಭಿನ್ನಾಭಿಪ್ರಾಯ ಏರುತ್ತಲೇ ಇದೆ. ಆರ್​.ಎನ್​.ರವಿ ಕೂಡ ಒಂದರ ಬೆನ್ನಿಗೆ ಒಂದರಂತೆ ಕಿಡಿ ಹೊತ್ತಿಸುವ ಮಾತುಗಳನ್ನೇ ಆಡುತ್ತಿದ್ದಾರೆ.

ಇಷ್ಟೆಲ್ಲದರ ಮಧ್ಯೆ ತಮಿಳುನಾಡು ಡಿಎಂಕೆ ಪಕ್ಷದ ವಕ್ತಾರ ಶಿವಾಜಿ ಕೃಷ್ಣಮೂರ್ತಿ ಅವರು ತಮ್ಮ ಒಂದು ಹೇಳಿಕೆ ಮೂಲಕ ಇನ್ನೊಂದು ವಿವಾದ ಎಬ್ಬಿಸಿದ್ದಾರೆ. ‘ರಾಜ್ಯಪಾಲರನ್ನು ಶೂಟ್​ ಮಾಡಿ, ಕೊಲ್ಲಲು ನಾವು ಒಬ್ಬ ಉಗ್ರನನ್ನು ಕಳಿಸುತ್ತೇವೆ’ ಎಂದು ಹೇಳಿದ್ದಾರೆ. ಆಗಲೇ ಉರಿಯುತ್ತಿರುವ ಬೆಂಕಿಗೆ ಈ ಮಾತುಗಳು ಇನ್ನಷ್ಟು ತುಪ್ಪ ಸುರಿದಿದೆ.
ಸಭೆಯೊಂದರಲ್ಲಿ ಮಾತನಾಡಿದ ಶಿವಾಜಿ ಕೃಷ್ಣಮೂರ್ತಿ, ‘ರಾಜ್ಯಪಾಲರ ವಿರುದ್ಧ ಮಾತನಾಡಬೇಡಿ, ಅವರನ್ನು ತೆಗಳಬೇಡಿ ಎಂದು ನಮಗೆ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಅವರು ಸರ್ಕಾರದ ಭಾಷಣವನ್ನು ಸರಿಯಾಗಿ ಓದಿದ್ದರೆ ಖಂಡಿತ ಅವರ ಪಾದದ ಬಳಿ ಹೂವುಗಳನ್ನು ಇಟ್ಟು, ಅಭಿನಂದಿಸುತ್ತಿದ್ದೆ. ಆದರೆ ರಾಜ್ಯಪಾಲರು ಭಾಷಣದಲ್ಲಿ ಅಂಬೇಡ್ಕರ್​ ಹೆಸರನ್ನೇ ಕೈಬಿಟ್ಟರು. ಅಂದಮೇಲೆ ಅವರಿಗೆ ಚಪ್ಪಲಿಯಲ್ಲಿ ಹೊಡೆಯುವ ಹಕ್ಕು ನನಗೆ ಇಲ್ಲವೇ? ಅಂಬೇಡ್ಕರ್​ ಹೆಸರು ಹೇಳಲು ಅವರಿಗೆ ಆಗುವುದಿಲ್ಲ ಎಂದಮೇಲೆ, ಅವರು ಕಾಶ್ಮೀರಕ್ಕೆ ಹೋಗಲಿ. ರಾಜ್ಯಪಾಲರನ್ನು ಶೂಟ್ ಮಾಡಿ ಕೊಲ್ಲಲು, ಅಲ್ಲಿಗೇ ಒಬ್ಬ ಉಗ್ರನನ್ನು ಕಳಿಸುತ್ತೇವೆ’ ಎಂದು ಹೇಳಿದ್ದಾರೆ.

ಡಿಎಂಕೆ ನಾಯಕ ಶಿವಾಜಿ ಕೃಷ್ಣಮೂರ್ತಿ ಹೇಳಿಕೆಯನ್ನು ಬಿಜೆಪಿ ನಾಯಕ ನಾರಾಯಣನ್​ ತಿರುಪತಿ ಖಂಡಿಸಿದ್ದಾರೆ. ಅಷ್ಟೇ ಅಲ್ಲ, ಡಿಎಂಕೆ ನಾಯಕನಿಗೆ ಉಗ್ರರೊಂದಿಗೆ ಸಂಪರ್ಕ ಇರುವ ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಳ್ಳಲು ಆಗ್ರಹಿಸಿದ್ದಾರೆ.

ಜನವರಿ 9ರಂದು ವಿಧಾನಸಭೆ ಕಲಾಪ ಆರಂಭದಲ್ಲಿ ರಾಜ್ಯಪಾಲರ ಭಾಷಣ ಮಾಡಿದರು. ಈ ವೇಳೆ, ರಾಜ್ಯಪಾಲ ಆರ್ ಎನ್ ರವಿ, ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ಕೆಲವೊಂದಿಷ್ಟು ಭಾಗಗಳನ್ನು ಕೈ ಬಿಟ್ಟಿದ್ದರು. ವಿಶೇಷವಾಗಿ ಜಾತ್ಯತೀತತೆಯನ್ನು ಉಲ್ಲೇಖಿಸಿ ತಮಿಳುನಾಡು ಶಾಂತಿಯ ಸ್ವರ್ಗವಾಗಿದೆ, ನಾಯಕರಾದ ಪೆರಿಯಾರ್, ಬಿ ಆರ್ ಅಂಬೇಡ್ಕರ್, ಕೆ ಕಾಮರಾಜ್, ಸಿ ಎನ್ ಅಣ್ಣಾದೊರೈ, ಕರುಣಾನಿಧಿ ಸಂಬಂಧಿಸಿದ ಮಾಹಿತಿಯನ್ನು ಅವರು ಓದಲಿಲ್ಲ. ಜತೆಗೆ, ಆಡಳಿತ ಪಕ್ಷದ ದ್ರಾವಿಡಿಯನ್ ಮಾಡೆಲ್ ಸಂಬಂಧ ಇದ್ದ ಮಾಹಿತಿಯನ್ನು ರಾಜ್ಯಪಾಲರು ಓದಲಿಲ್ಲ. ಈ ಕಾರಣದಿಂದ, ಸಿಎಂ ಸ್ಟಾಲಿನ್ ಅವರು ನಿರ್ಣಯವನ್ನು ಮಂಡಿಸಿ, ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಮಾತ್ರವೇ ಪರಿಗಣಿಸುವಂತೆ ಸ್ಪೀಕರ್‌ಗೆ ಕೋರಿದರು. ಇದಕ್ಕೆ ವಿಧಾನಸಭೆ ಒಪ್ಪಿಗೆ ಕೂಡ ನೀಡಿತು. ಅಲ್ಲದೇ, ರಾಜ್ಯಪಾಲರ ನಡೆಯು ವಿಧಾನಸಭೆಯ ಸಂಪ್ರದಾಯದ ವಿರುದ್ಧವಾಗಿದೆ ಎಂದು ಸ್ಟಾಲಿನ್ ಅವರು ಆರೋಪಿಸಿದರು.

ಇದನ್ನೂ ಓದಿ: Tamil Nadu | ರಾಜ್ಯಪಾಲರ ಪೊಂಗಲ್ ಆಮಂತ್ರಣ ಪತ್ರಿಕೆಯಲ್ಲಿ ‘ತಮಿಳುನಾಡು ಸರ್ಕಾರ’ ಮಾಯ!

Exit mobile version