Site icon Vistara News

Parliament Winter Session| ಇಂದಿನಿಂದ ಸಂಸತ್​ ಚಳಿಗಾಲದ ಅಧಿವೇಶನ; ಕೆಲವೇ ಹೊತ್ತಲ್ಲಿ ಕಲಾಪ ಪ್ರಾರಂಭ

Winter Session Of Parliament Start from Today

ನವ ದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ (ಡಿ.7) ಪ್ರಾರಂಭವಾಗಲಿದ್ದು, ಮೂರು ವಾರಗಳು ಅಂದರೆ ಡಿಸೆಂಬರ್​ 29ರವರೆಗೆ ನಡೆಯಲಿದೆ. ಇಂದು ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಡಿ.8ರಂದು ಗುಜರಾತ್​-ಹಿಮಾಚಲ ಪ್ರದೇಶಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಹೀಗಾಗಿ ಅಧಿವೇಶನದ ಪ್ರಾರಂಭದ ದಿನಗಳ ಕಲಾಪಗಳಲ್ಲಿ ಈ ಚುನಾವಣಾ ಕಾವು ಪ್ರತಿಧ್ವನಿಸುವ ಸಾಧ್ಯತೆ ಇದೆ.

ಈ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಒಟ್ಟು 25 ಮಸೂದೆಗಳನ್ನು ಅಂಗೀಕಾರ ಮಾಡುವ ಸಿದ್ಧತೆಯಲ್ಲಿ ತೊಡಗಿದೆ ಎನ್ನಲಾಗಿದೆ. ಅದರಲ್ಲಿ ಏಳು ಹಳೇ ಮಸೂದೆಗಳೇ ಆಗಿದ್ದು, ಹಿಂದಿನ ಸೆಷನ್ಸ್​​ಗಳಲ್ಲಿ ಪಾಸ್​ ಆಗದೆ ಉಳಿದವು ಮತ್ತು 16 ಹೊಸ ಮಸೂದೆಗಳು ಎಂದು ಹೇಳಲಾಗಿದೆ. ಈ ಮಧ್ಯೆ ಪ್ರತಿಪಕ್ಷಗಳು ವಿವಿಧ ವಿಷಯಗಳನ್ನು ಇಟ್ಟುಕೊಂಡು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಸಜ್ಜಾಗಿವೆ. ಅದರಲ್ಲೂ ಪ್ರಮುಖವಾಗಿ ತನಿಖಾ ದಳಗಳ ದುರುಪಯೋಗದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಲಿವೆ ಎಂದೂ ಹೇಳಲಾಗಿದೆ.

ಇಂದು ಚಳಿಗಾಲದ ಅಧಿವೇಶನ ಪ್ರಾರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳ ಜತೆ ಮಾತನಾಡುವ ಸಾಧ್ಯತೆ ಇದೆ. ಹಾಗೇ ಇಂದು ಬೆಳಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್​ ಜೋಶಿ ನೇತೃತ್ವದಲ್ಲಿ ಸರ್ವ ಪಕ್ಷಗಳ ಸಭೆ ನಡೆದಿದ್ದು, ಅದರಲ್ಲಿ ಲೋಕಸಭಾ ಪ್ರತಿಪಕ್ಷ ನಾಯಕ ರಂಜನ್ ಅಧೀರ್​ ಚೌಧರಿ ಸೇರಿ ಹಲವು ನಾಯಕರು ಪಾಲ್ಗೊಂಡಿದ್ದಾರೆ. ಈ ಬಾರಿ ಶಾಂತಿಯುತವಾಗಿ ಕಲಾಪ ನಡೆಸೋಣ. ಯಾವುದೇ ವಿಚಾರ ಇರಲಿ ಫಲಪ್ರದ ಚರ್ಚೆ ಮಾಡೋಣ ಎಂದು ಕೇಂದ್ರ ಸರ್ಕಾರ ಪ್ರತಿಪಕ್ಷಗಳಲ್ಲಿ ಮನವಿ ಮಾಡಿದೆ.

ಇದನ್ನೂ ಓದಿ: Parliament Winter Session | ಸಂಸತ್ ಚಳಿಗಾಲದ ಅಧಿವೇಶನ ಡಿಸೆಂಬರ್​ 7ರಿಂದ ಪ್ರಾರಂಭ; ಕಲಾಪಕ್ಕೆ 17 ದಿನಗಳು ಲಭ್ಯ

Exit mobile version