ಉತ್ತರ ಪ್ರದೇಶದ ಕಾನ್ಪುರದಲ್ಲಿ ಒತ್ತುವರಿ ಭೂಮಿ ತೆರವು ಕಾರ್ಯಾಚರಣೆ (Anti-Encroachment Drive)ವೇಳೆ ತಾಯಿ-ಮಗಳು ಸಜೀವ ದಹನವಾಗಿ ಮೃತಪಟ್ಟಿದ್ದಾರೆ. ಕಾನ್ಪುರ ದೇಹತ್ ಜಿಲ್ಲೆಯಲ್ಲಿರುವ ಮಾದೌಲಿ ಗ್ರಾಮದಲ್ಲಿ ಒತ್ತುವರಿಯಾಗಿದ್ದ ‘ಗ್ರಾಮ ಸಮಾಜ್’ ಭೂಮಿಯಲ್ಲಿ ತೆರವು ಕಾರ್ಯಾಚರಣೆ ನಡೆಸಲು ಜಿಲ್ಲಾಡಳಿತದ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ತೆರಳಿದ್ದರು. ಈ ವೇಳೆ ತಾಯಿ ಪರಿಮಳಾ ದೀಕ್ಷಿತ್ (45) ಮತ್ತು ಮಗಳು ನೇಹಾ (20) ದಾರುಣ ಅಂತ್ಯ ಕಂಡಿದ್ದಾರೆ. ಸರ್ಕಾರಿ ಜಾಗದಲ್ಲಿಯೇ ಒತ್ತುವರಿ ಮಾಡಿಕೊಂಡು ಗುಡಿಸಲು ನಿರ್ಮಿಸಿಕೊಂಡಿದ್ದರು. ತೆರವು ಮಾಡಲು ಹೋದಾಗ ಪ್ರತಿಭಟನೆ ನಡೆಸಿದ ತಾಯಿ-ಮಗಳು ತಮಗೆ ತಾವೇ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರೆ, ಇತ್ತ ಸ್ಥಳೀಯರು ಅಧಿಕಾರಿಗಳನ್ನು ದೂರಿದ್ದಾರೆ. ತೆರವು ಕಾರ್ಯಾಚರಣೆ ನೆಪದಲ್ಲಿ ಪರಿಮಳಾ ಮತ್ತು ನೇಹಾ ಅವರಿದ್ದ ಗುಡಿಸಲಿಗೆ ಬೆಂಕಿ ಹಚ್ಚಲಾಯಿತು. ಹೀಗಾಗಿ ಇಬ್ಬರೂ ಸಜೀವ ದಹನಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ದೂರು ನೀಡಿದ ಮೃತ ಪರಿಮಳಾ ದೀಕ್ಷಿತ್ ಪತಿ ಕೃಷ್ಣ ಗೋಪಾಲ್ ದೀಕ್ಷಿತ್ ‘ಒತ್ತುವರಿ ತೆರವು ಕಾರ್ಯಾಚರಣೆಗೂ ಮುಂಚಿತವಾಗಿ ನೋಟಿಸ್ ನೀಡಬೇಕು. ಆದರೆ ನಮಗೆ ನೋಟಿಸ್ ನೀಡದೆ, ಏಕಾಏಕಿ ಬಂದು ಕಾರ್ಯಾಚರಣೆ ಶುರುಮಾಡಿದರು. ಈ ಗ್ರಾಮದಲ್ಲಿ ಹಲವು ಕಡೆ ಜೆಸಿಬಿ ಬಳಸಿ ಮನೆಗಳನ್ನು ನೆಲಸಮ ಮಾಡಿದರು. ನಮ್ಮ ಗುಡಿಸಲು ಕೆಡವಿ, ಬೆಂಕಿ ಹಾಕಿದರು. ಆಗ ಪರಿಮಳಾ ಮತ್ತು ನೇಹಾ ಒಳಗೇ ಇದ್ದರು’ ಎಂದು ಆರೋಪಿಸಿದ್ದಾರೆ. ಹಾಗೇ, ಅವರ ಪುತ್ರ ಶಿವಂ ದೀಕ್ಷಿತ್ ಆರೋಪ ಮಾಡಿ ‘ಬುಲ್ಡೋಜರ್ ಚಾಲಕ ಮೊದಲು ನಮ್ಮ ಗುಡಿಸಲನ್ನು ಧ್ವಂಸ ಮಾಡಿದ. ಆಗ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಗಣೇಶ್ವರ್ ಪ್ರಸಾದ್ ಅವರು ಬೆಂಕಿ ಹಚ್ಚುವಂತೆ ಸೂಚಿಸಿದರು. ತಕ್ಷಣವೇ ಕಂದಾಯ ಅಧಿಕಾರಿ ಅಶೋಕ್ ಸಿಂಗ್ ಅವರು ಬೆಂಕಿ ಹಚ್ಚಿಬಿಟ್ಟರು’ ಎಂದು ವಿವರಿಸಿದ್ದಾನೆ.
ಕೇಸ್ ದಾಖಲು
ಪರಿಮಳಾ ಮತ್ತು ನೇಹಾ ಸಾವಿಗೆ ಸಂಬಂಧಪಟ್ಟಂತೆ ಪೊಲೀಸರು 13 ಜನರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು ಮಾಡಿದ್ದಾರೆ. ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್, ಠಾಣಾಧಿಕಾರಿ, ಬುಲ್ಡೋಜರ್ ಆಪರೇಟರ್ ವಿರುದ್ಧ ಕೇಸ್ ದಾಖಲಾಗಿದೆ. ಅವರಲ್ಲೀಗ ಜೆಸಿಬಿ ಚಾಲಕ ದೀಪಕ್ ಬಂಧಿತನಾಗಿದ್ದರೆ, ಕಂದಾಯ ಅಧಿಕಾರಿ ಅಶೋಕ್ ಸಿಂಗ್ ಅಮಾನತುಗೊಂಡಿದ್ದಾರೆ. ಈ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ ಶುರುವಾಗಿತ್ತು. ಅದರಲ್ಲೂ ತಾಯಿ-ಮಗಳು ಸಾವನ್ನಪ್ಪಿದ ಬೆನ್ನಲ್ಲೇ ಜಟಾಪಟಿ ತೀವ್ರಗೊಂಡಿತ್ತು. ಈಗಲೂ ಕೂಡ ಗ್ರಾಮದ ಸುತ್ತ ಪೊಲೀಸ್ ಬಿಗಿ ಭದ್ರತೆ ಇದೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಮಾಜವಾದಿ ಪಕ್ಷ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವನ್ನು ದೂಷಿಸಿದೆ. ಯೋಗಿ ಸರ್ಕಾರ ಬ್ರಾಹ್ಮಣರ ಕುಟುಂಬವನ್ನೇ ಟಾರ್ಗೆಟ್ ಮಾಡುತ್ತಿದೆ. ದಲಿತರು ಮತ್ತು ಹಿಂದುಳಿದವರಂತೆ ಬ್ರಾಹ್ಮಣರಿಗೂ ಬದುಕಲು ಬಿಡುತ್ತಿಲ್ಲ ಎಂದು ಆರೋಪಿಸಿದೆ.