ರಾಷ್ಟ್ರರಾಜಧಾನಿಯಲ್ಲಿ ಪ್ರಾರಂಭವಾದ ಮುಂಗಾರು ಮಳೆಗೆ (Southwest Monsoon) ಮೊದಲ ಬಲಿಯಾಗಿದೆ. ನೀರು ತುಂಬಿದ ರಸ್ತೆ ಮಧ್ಯೆ ಈ ಯುವತಿ ‘ವಿದ್ಯುತ್ ಶಾಕ್’ ಹೊಡೆದು ಮೃತಪಟ್ಟಿದ್ದಾರೆ. ರಾಷ್ಟ್ರರಾಜಧಾನಿ ದೆಹಲಿಗೆ ನೈಋತ್ಯ ಮುಂಗಾರು ಕಾಲಿಟ್ಟಿದ್ದು, ಶನಿವಾರದಿಂದಲೇ ಇಲ್ಲಿ ಭರ್ಜರಿ ಮಳೆ(Heavy Rainfall)ಯಾಗುತ್ತಿದೆ. ಇಂದು ದೆಹಲಿಯ ರಸ್ತೆಗಳು ಜಲಾವೃತಗೊಂಡಿವೆ. ವಾಹನ ಸಂಚಾರ, ಪಾದಚಾರಿಗಳು ನಡೆಯಲು ಕಷ್ಟವಾಗುತ್ತಿದೆ. ಈ ಭಯಂಕ ಮಳೆ ಮಧ್ಯೆ ಸಾಕ್ಷಿ ಅಹುಜಾ ಎಂಬ ಮಹಿಳೆ ರಸ್ತೆಗೆ ಇಳಿದು, ಮೃತಪಟ್ಟಿದ್ದಾರೆ (Woman Dies).
ಇಂದು ಮುಂಜಾನೆ 5.30ರ ಹೊತ್ತಿಗೆ ಸಾಕ್ಷಿ ಅಹುಜಾ, ಆಕೆಯ ಸೋದರಿ ಮತ್ತು ಮೂವರು ಮಕ್ಕಳು ದೆಹಲಿ ರೈಲ್ವೆ ಸ್ಟೇಶನ್ಗೆ ಹೊರಟಿದ್ದರು. ಅವರಿಗೆ ಭೋಪಾಲ್ಗೆ ಹೋಗಬೇಕಿದ್ದ ಕಾರಣ ಮುಂಜಾನೆಯೇ ರೈಲು ಹಿಡಿಯಬೇಕಿತ್ತು. ಆದರೆ ವಿಪರೀತ ಮಳೆ ಸುರಿದ ಕಾರಣ ರೈಲ್ವೆ ಸ್ಟೇಶನ್ನ ಸುತ್ತಲಿನ ರಸ್ತೆಯಲ್ಲೆಲ್ಲ ನೀರು ತುಂಬಿತ್ತು. ಹೀಗೆ ನೀರು ತುಂಬಿದ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದ ಸಾಕ್ಷಿ, ಸಪೋರ್ಟ್ಗಾಗಿ ಅಲ್ಲಿಯೇ ಇದ್ದ ಒಂದು ವಿದ್ಯುತ್ ಕಂಬವನ್ನು ಹಿಡಿದುಕೊಂಡಿದ್ದಾರೆ. ಅದನ್ನು ಮುಟ್ಟುತ್ತಿದ್ದಂತೆ ಸಾಕ್ಷಿಗೆ ಶಾಕ್ ಹೊಡೆದು, ಅಲ್ಲಿಯೇ ಕುಸಿದುಬಿದ್ದಿದ್ದಾರೆ.
ಇನ್ನೂ ಬೆಳಕು ಮೂಡದ ಹೊತ್ತು ಆಗಿದ್ದರಿಂದ ಜನಸಂಚಾರವೂ ಕಡಿಮೆ ಇತ್ತು. ಹಾಗಿದ್ದಾಗ್ಯೂ ರೈಲ್ವೆ ಸ್ಟೇಶನ್ ಬಳಿಯೇ ಇದ್ದ ಒಂದಷ್ಟು ಮಂದಿ ಕೂಡಲೇ ಧಾವಿಸಿ ಸಾಕ್ಷಿಯನ್ನು ರಕ್ಷಿಸಲು ಯತ್ನಿಸಿದ್ದಾರೆ.. ಅಷ್ಟರಲ್ಲಿ ದೆಹಲಿ ಪೊಲೀಸರು ಅಲ್ಲಿಗೆ ತೆರಳಿ, ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಸಾಕ್ಷಿ ಪ್ರಾಣ ಹೋಗಿತ್ತು. ಆ ಕಂಬದಿಂದ ಒಂದಷ್ಟು ವೈಯರ್ಗಳು ಹೊರಬಂದಿದ್ದವು. ಇದು ವಿದ್ಯುತ್ ಮಂಡಳಿಯ ನಿರ್ಲಕ್ಷ್ಯ ಎಂದು ಆರೋಪಿಸಿ, ಸಾಕ್ಷಿಯ ಸಹೋದರಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ‘ವಿದ್ಯುತ್ ಕಂಬದಿಂದ ಹೊರಗೆ ಜೋತಾಡುತ್ತಿದ್ದ ವೈಯರ್ನಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು. ಹೀಗಾಗಿಯೇ ಸಾಕ್ಷಿಗೆ ಶಾಕ್ ಹೊಡೆದಿದೆ’ ಎಂದು ಪೊಲೀಸರೂ ತಿಳಿಸಿದ್ದಾರೆ. ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಸ್ಪರ್ಶಿಸಿ ಕಂಬದ ಮೇಲೆಯೇ ವ್ಯಕ್ತಿಯ ನರಳಾಟ; ಫ್ಯೂಸ್ ತೆಗೆದಿದ್ದರಿಂದ ಅಪಾಯದಿಂದ ಪಾರು
ಈ ಸಲ ದೆಹಲಿ ಮತ್ತು ಮುಂಬಯಿಗಳಿಗೆ ಮುಂಗಾರು ಒಟ್ಟಿಗೇ ಪ್ರವೇಶ ಮಾಡಿದ್ದು ವಿಶೇಷ. 1430 ಕಿಮೀ ಅಂತರದಲ್ಲಿರುವ ಎರಡೂ ನಗರಗಳಲ್ಲೀಗ ಭರ್ಜರಿ ಮಳೆಯಾಗುತ್ತಿದೆ. ಮುಂಬಯಿಯಲ್ಲೂ ಮಳೆಯಿಂದ ಸಾಕಷ್ಟು ಹಾನಿಯಾಗುತ್ತಿದೆ. ಕಟ್ಟಡ ಕುಸಿದು ಬಿದ್ದಿದೆ. ರಸ್ತೆಗಳು ಜಾಲವೃತಗೊಂಡಿವೆ. ದೆಹಲಿಗೆ ಮುಂಗಾರು ಪ್ರವೇಶ ಮಾಡಿದ್ದರಿಂದ ಸುತ್ತಲಿನ ರಾಜ್ಯಗಳಲ್ಲೂ ಮಳೆಯಾಗುತ್ತಿದೆ. ಹರ್ಯಾಣದಲ್ಲಿ ವರುಣ ಆರ್ಭಟ ಮಾಡುತ್ತಿದ್ದಾನೆ.