ಕೈಯಲ್ಲಿದ್ದ ಮೊಬೈಲ್ ಫೋನ್ (Mobile Phone) ಕಸಿಯಲು ಬಂದವರನ್ನು ತಡೆಯಲು (Phone Snatchers) ಹೋಗಿ ರೈಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಮೃತಪಟ್ಟಿದ್ದಾಳೆ. ಚೆನ್ನೈನ ಇಂದಿರಾ ನಗರ ರೈಲ್ವೆ ಸ್ಟೇಶನ್ನಲ್ಲಿ ಜುಲೈ 2ರಂದು ಈ ಘಟನೆ ನಡೆದಿತ್ತು. 22ವರ್ಷದ ಯುವತಿ ಪ್ರೀತಿ ಸ್ಥಳೀಯ ರೈಲು ಹತ್ತಿದ್ದರು. ಬಾಗಿಲಲ್ಲೇ ನಿಂತು ಫೋನ್ನಲ್ಲಿ ಮಾತನಾಡುತ್ತಿದ್ದರು. ಆಗಷ್ಟೇ ರೈಲು ನಿಧಾನಕ್ಕೆ ಹೊರಟಿತ್ತು. ಅಷ್ಟರಲ್ಲಿ ಇಬ್ಬರು ಕಳ್ಳರು ಬಂದು ಆಕೆಯ ಕೈಯಿಂದ ಮೊಬೈಲ್ ಎಗರಿಸಲು ಪ್ರಯತ್ನ ಪಟ್ಟಿದ್ದರು. ಅವರಿಗೆ ಪ್ರತಿರೋಧ ಒಡ್ಡುವ ಭರದಲ್ಲಿ ಪ್ರೀತಿ ಪ್ಲಾಟ್ಫಾರ್ಮ್ ಮೇಲೆ ಬಿದ್ದಿದ್ದರು. ತಲೆಗೆ ಗಂಭೀರವಾಗಿ ಏಟು ಬಿದ್ದಿತ್ತು. ಚಿಕಿತ್ಸೆಗಾಗಿ ರಾಯಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಪ್ರೀತಿ ಪ್ಲಾಟ್ಫಾರ್ಮ್ ಮೇಲೆ ಬೀಳುತ್ತಿದ್ದಂತೆ ಕಳ್ಳರು ಅಲ್ಲಿಂದ ಓಡಿಹೋಗಿದ್ದರು. ಆಕೆಯ ಮೊಬೈಲ್ನ್ನು ತೆಗೆದುಕೊಂಡೇ ಹೋಗಿದ್ದರು. ಅಂದು ಪ್ರೀತಿಯನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಅಲ್ಲಿನ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇನ್ನು ಪ್ರೀತಿಯ ತಂದೆ ರೈಲ್ವೆ ಪೊಲೀಸ್ಗೆ ದೂರು ಕೊಟ್ಟು, ‘ಪ್ರೀತಿ ಬಿದ್ದಾಗ ಎಚ್ಚರತಪ್ಪಿದ್ದಳು. ಆಕೆಯ ಮೊಬೈಲ್ ಕಾಣೆಯಾಗಿದೆ’ ಎಂದು ಹೇಳಿದರು. ಕೇಸ್ ದಾಖಲಿಸಿಕೊಂಡ ಪೊಲೀಸರು ಫೋನ್ ಟ್ರ್ಯಾಕ್ ಮಾಡಿ ಅದರ ಲೊಕೇಶನ್ ಪತ್ತೆ ಹಚ್ಚಿದ್ದರು.
ಇದನ್ನೂ ಓದಿ: Mobile Tower : ಬೆತ್ತಲೆಯಾಗಿ ಮೊಬೈಲ್ ಟವರ್ ಏರಿ ಯುವಕನ ಹುಚ್ಚಾಟ
ಸೈಬರ್ ಕ್ರೈ ಘಟಕದ ತನಿಖೆ ಅನ್ವಯ ಮೊಬೈಲ್ ಇರುವ ಲೊಕೇಶನ್ ಬೇಸಂತ್ ನಗರ ಎಂಬುದು ಗೊತ್ತಾಗುತ್ತಿದ್ದಂತೆ ಪೊಲೀಸರು ಅಲ್ಲಿಗೆ ಹೋಗಿದ್ದಾರೆ. ಹೋಗಿ ನೋಡಿದರೆ ಒಬ್ಬ ಮೀನು ವ್ಯಾಪಾರಿ ಬಳಿ ಪ್ರೀತಿ ಮೊಬೈಲ್ ಇತ್ತು. ರಾಜುನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದ್ದಕ್ಕೆ ಯಾರೋ ಇಬ್ಬರು ಬಂದರು, 2000 ರೂಪಾಯಿಗೆ ಈ ಮೊಬೈಲ್ ಕೊಟ್ಟರು ಎಂದು ಹೇಳಿದ್ದಾನೆ. ರಾಜು ನೀಡಿದ ಮಾಹಿತಿಯ ಆಧಾರದ ಮೇಲೆ ಇಬ್ಬರೂ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಅದರಲ್ಲಿ ಒಬ್ಬನ ಹೆಸರು ಮಣಿಮಾರನ್ ಮತ್ತು ಇನ್ನೊಬ್ಬನ ಹೆಸರು ವಿಘ್ನೇಶ್ ಎಂದು ಹೇಳಲಾಗಿದೆ.