Site icon Vistara News

ಜನ ಸಂದಣಿ ರಸ್ತೆ ಪಕ್ಕ ಮಗುವಿಗೆ ಜನ್ಮ ನೀಡಿದ ಮಹಿಳೆ; ನೆರವಿಗೆ ಬಂದಿದ್ದು ಮಹಿಳಾ ಪೊಲೀಸರು

Woman gives birth On Footpath In kolkata

ಕೋಲ್ಕತ್ತ: ಧರ್ಮತಲಾದಲ್ಲಿ ದುರ್ಗಾಪೂಜೆ ಪೂರ್ವ ತಯಾರಿ ಜೋರಾಗಿ ನಡೆಯುತ್ತಿದೆ. ರಸ್ತೆಗಳ ಮೇಲೆ ಎಲ್ಲೆಲ್ಲೂ ಜನಸಂದಣಿ, ವಾಹನಗಳ ಸಂಚಾರ. ಇದೆಲ್ಲದರ ಮಧ್ಯೆ ಧರ್ಮತಲದ ವಿಕ್ಟೋರಿಯಾ ಹೌಸ್​​ನ ಚೌರಿಂಗ್ಘೀ ಚೌಕದ ಬಳಿ ಮಹಿಳೆಯೊಬ್ಬರು ಫೂಟ್​ಪಾತ್​ ಮೇಲೆಯೇ ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ನೋವಿನಿಂದ, ನಡೆಯಲು ಸಾಧ್ಯವಾಗದೆ ರಸ್ತೆ ಪಕ್ಕದಲ್ಲಿ ಮಲಗಿದ್ದ ಮಹಿಳೆ ರಾಣಿ (35) ಸಹಾಯಕ್ಕೆ ಬಂದಿದ್ದು ಪೊಲೀಸರು ಮತ್ತು ಅಲ್ಲೇ ಇದ್ದ ಕೆಲವು ರಸ್ತೆ ಬದಿ ವ್ಯಾಪಾರಿಗಳು. ಫೂಟ್​ಪಾತ್​ ಮೇಲೆ ಬಿದ್ದು ನರಳುತ್ತಿದ್ದ ಮಹಿಳೆಯನ್ನು ನೋಡಿಕೊಂಡು ಅನೇಕರು ಓಡಾಡಿದ್ದು ಬಿಟ್ಟರೆ, ಯಾರೂ ಅವರ ನೆರವಿಗೆ ಬರಲಿಲ್ಲ.

ಹೀಗೆ ಮಹಿಳೆ ಫೂಟ್​ಪಾತ್​ ಮೇಲೆ ಬಿದ್ದು ಹೆರಿಗೆ ನೋವಿನಿಂದ ನರಳಾಡುತ್ತಿರುವುದನ್ನು ನೋಡಿದ ಯಾರೋ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಲಗುಬಗೆಯಿಂದ ಬಂದ ಮಹಿಳಾ ಪೊಲೀಸರು ಆಕೆಯ ನೆರವಿಗೆ ನಿಂತರು. ಆ್ಯಂಬುಲೆನ್ಸ್​ಗೆ ಕರೆಯನ್ನೂ ಮಾಡಲಾಗಿತ್ತು. ಆದರೆ ಆ್ಯಂಬುಲೆನ್ಸ್​ ಬರುವಷ್ಟರಲ್ಲಿ ಮಹಿಳೆ ಅಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನಂತರ ತಾಯಿ-ಮಗು ಇಬ್ಬರನ್ನೂ ಸಮೀಪದ ಎನ್​ಆರ್​ಎಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೇ, ಮಹಿಳಾ ಪೊಲೀಸರು ಈ ತಾಯಿ-ಮಗುವಿನ ಜವಾಬ್ದಾರಿಯನ್ನು ಒಂದು ಶಿಶುಪಾಲನಾ ಎನ್​​ಜಿಒಕ್ಕೆ ಕೊಟ್ಟಿದ್ದರು. ಇವರಿಬ್ಬರ ಔಷಧಿ ಖರ್ಚಿಗಾಗಿ 500 ರೂಪಾಯಿ ನೀಡಿದ್ದರು.

ಆದರೆ ಆಸ್ಪತ್ರೆ ಕೂಡ ಮಹಿಳೆ ಮತ್ತು ಮಗುವಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿದೆ. ಎನ್​ಜಿಒ ಆಗಲೀ, ಪೊಲೀಸರಾಗಲೀ ಹಣ ಕೊಡುವುದು ಬೇಡ ಎಂದು ವೈದ್ಯರು ಹೇಳಿದ್ದಾರೆ. ಮುಂದಿನ ಮೂರ್ನಾಲ್ಕು ವಾರದವರೆಗೆ ನಮ್ಮ ಠಾಣೆಯ ಮಹಿಳಾ ಪೊಲೀಸರು ಆ ತಾಯಿ-ಮಗುವಿನ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ ಎಂದು ಸ್ಥಳೀಯ ಎಎಸ್​ಪಿ ಅಲೋಕ್​ ಸಾನ್ಯಾಲ್​ ತಿಳಿಸಿದ್ದಾರೆ.

ಇದನ್ನೂ ಓದಿ: ದಶಕದ ನಂತರ ದೇಶದಲ್ಲಿ ಪೋಲಿಯೋ ವೈರಸ್‌ ಪತ್ತೆ : ಕೋಲ್ಕತ್ತಾದಲ್ಲಿ ಹೈ ಅಲರ್ಟ್

Exit mobile version